Thursday, September 26, 2013

ನಾವು ಕಾಂಪಿಟಿಟಿವ್ ಅಲ್ಲ!

ವಿಜಯವಾಣಿ ಪತ್ರಿಕೆಯಲ್ಲಿ ಮೂಡಿ ಬಂದಿರುವ ನನ್ನ ಅಂಕಣ ತಾರೀಕು ಜುಲೈ ೧೦ ೨೦೧೩


ಇಲ್ಲಿ ನೀರಿಗೆ ಇಳಿಯಲೇಬೇಕು, ಈಜು ಕಲಿಯಲೇ ಬೇಕು. ಇದು ಸ್ಪರ್ಧಾತ್ಮಕ ಯುಗ, ಸ್ಪರ್ಧೆಗೆ ಬಿದ್ದು ಓಡಲೇ ಬೇಕು, ಸ್ಪರ್ಧೆ ಎನ್ನುವುದು ಜೀವನದ ಪ್ರತಿಯೊಂದು ಹಂತಹಂತಗಳಲ್ಲಿ, ಮಜಲುಗಳಲ್ಲಿ ಒಂದಾಗಿ ಬಿಟ್ಟಿದೆ ಎನ್ನುವ ಮಾತುಗಳನ್ನೂ, ಆತಂಕಗಳನ್ನೂ ನಾವು ಕೇಳುತ್ತಲೇ ಇರುತ್ತೇವೆ. ಇದು ಪ್ರತಿನಿತ್ಯ ನಮ್ಮ ಅರಿವಿಗೆ ಬರುತ್ತಲೂ ಇರುತ್ತದೆ. ಆದರೆ ನಾವು ಅಂದುಕೊಂಡಷ್ಟು ಸ್ಪರ್ಧಾತ್ಮಕವಾಗಿಲ್ಲವೇನೋ ಎಂಬ ಅಭಿಪ್ರಾಯವೂ ಮೂಡುತ್ತದೆ. ಇದಕ್ಕೆ ಪೂರಕವಾಗಿ ವಿಶ್ವ ಆರ್ಥಿಕ ವೇದಿಕೆ(ವರ್ಲ್ಡ್ ಎಕನಾಮಿಕ್ ಫೋರಂ)ಯವರು 2012 ಮತ್ತು 2013ನೇ ಸಾಲಿನ ಪ್ರಪಂಚದ ಅತ್ಯಂತ ಸ್ಪರ್ಧಾತ್ಮಕ ದೇಶಗಳ ಪಟ್ಟಿಯನ್ನು ಬಿಡುಗಡೆ  ಮಾಡಿದೆ, ಸ್ಪರ್ಧಾತ್ಮಕತೆಯನ್ನು ಒರೆಗೆ ಹಚ್ಚಲು ಒಂದು ದೇಶದ ಆರ್ಥಿಕ ಮತ್ತು ಸಾಂಸ್ಥಿಕ ವಾತಾವರಣಗಳು, ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣದ ಗುಣಮಟ್ಟ, ಅವಿಷ್ಕಾರ ಬಲ ಇವೇ ಮೊದಲಾದ ಒಟ್ಟು ಹನ್ನೆರಡು ಅಂಶಗಳನ್ನು ಮುಖ್ಯ ಮಾನದಂಡಗಳಾಗಿ ಬಳಸಲಾಗಿದ್ದು , ಇದರಲ್ಲಿ ಮೊದಲ ಮೂವತ್ತು ದೇಶಗಳ ಪಟ್ಟಿಯನ್ನು ನೋಡಿದಾಗ, ಸ್ವಿಜಲ್ಯಾಂಡ್, ಸಿಂಗಾಪೂರ್, ಫಿನ್‍ಲ್ಯಾಂಡ್, ಸ್ವೀಡನ್ ಹಾಗೂ ನೆದರ್ಲ್ಯಾಂಡ್ ದೇಶಗಳು ಕ್ರಮವಾಗಿ ಮೊದಲ ಐದು ಸ್ಥಾನಗಳನ್ನು ಪಡೆದಿರುತ್ತವೆ.  ಲಕ್ಸೆಂಬರ್ಗ್, ತೈವಾನ್ ನಂತಹ ಸಣ್ಣ ದೇಶಗಳು ಸಹ ಮುಂದಿದ್ದು ಅದರಲ್ಲಿ ಭಾರತಕ್ಕೆ ಸ್ಥಾನ ಸಿಕ್ಕಿಲ್ಲದಿರುವುದು ಎದ್ದು ಕಾಣುತ್ತದೆ. ಇದರ ಬೆಳಕಿನಲ್ಲಿ ಭಾರತದಂತಹ ಪ್ರಬಲ ಒಕ್ಕೂಟ ಮಾದರಿಯ ದೇಶವೊಂದು ಸ್ಪರ್ಧಾತ್ಮಕ ದೇಶಗಳ ಪಟ್ಟಿಯಲ್ಲಿ ಹಿಂದುಳಿದಿರುವುದೇಕೆಂಬುದನ್ನು ಮತ್ತೊಮ್ಮೆ ಯೋಚಿಸುವಂತೆ ಮಾಡಿದೆ. ಒಂದು ದೇಶವನ್ನು ಕಟ್ಟುವಲ್ಲಿ ನಾವು ನಿಜವಾಗಿಯೂ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದ್ದೇವೆಯೇ? ಅಥವಾ ಎಡವುತ್ತಿದ್ದೇವೆಯೇ ಎಂಬುದನ್ನೂ ಸಹ  ಮರು ಅವಲೋಕಿಸಬೇಕಿದೆ.
 
ದೇಶಗಳ ಸ್ಪರ್ಧಾತ್ಮಕತೆಯನ್ನು ಹೇಗೆ ಅಳೆಯುತ್ತಾರೆ ಗೊತ್ತಾ?

ಒಂದು ದೇಶದ ಸ್ಪರ್ಧಾತ್ಮಕತೆಯನ್ನು ಅಳೆಯಲು ಒಟ್ಟು ಹನ್ನೆರಡು ಅಂಶಗಳನ್ನು ಮಾನದಂಡವನ್ನಾಗಿ ಬಳಸಲಾಗುತ್ತದೆ. ಇವನ್ನು ಸ್ಪರ್ಧಾತ್ಮಕತೆಯ ಸ್ಥಂಭಗಳೆಂದೇ ಪರಿಗಣಿಸಲಾಗಿದ್ದು, ಇವು ಒಂದಂಕ್ಕೊಂದು ಪರಸ್ಪರ ಪೂರಕವಾಗಿದ್ದು ಇವುಗಳನ್ನು ಮೂರು ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆ.
ಆರ್ಥಿಕತೆಯ ಪ್ರಾಥಮಿಕ ಅವಶ್ಯಕತೆಗಳು: ಇದರಡಿಯಲ್ಲಿ  ದೇಶದ ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳು, ಸಂಪರ್ಕ ಸಾರಿಗೆ, ವಿದ್ಯುತ್ ದೂರವಾಣಿ ಮೊದಲಾದ ಮೂಲ ಸೌಕರ್ಯಗಳು, ಆರ್ಥಿಕತೆಯ ಸ್ಥಿರತೆ, ಆರೋಗ್ಯ ಮತ್ತು ಪ್ರಾಥಮಿಕ ಶಿಕ್ಷಣವು ಬರುತ್ತದೆ. ಪ್ರಾಥಮಿಕ ಶಿಕ್ಷಣವು ಬಹು ಮುಖ್ಯವಾಗಿದ್ದು ಭವಿಷ್ಯದ ದೃಷ್ಟಿಯಿಂದ ಯಾವುದೇ ಸರ್ಕಾರವು ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗಿಸುತ್ತಿರುವ ಸಂಪನ್ಮೂಲಗಳನ್ನು ಕಡಿತಗೊಳಿಸಬಾರದು ಎಂದೂ ಕಿವಿಮಾತನ್ನು ಹೇಳಲಾಗಿದೆ.
ಅರ್ಥವ್ಯವಸ್ಥೆಯನ್ನು ಬಲಗೊಳಿಸುವ ಅಂಶಗಳು: ಉನ್ನತ ಶಿಕ್ಷಣ ಮತ್ತು ತರಬೇತಿ, ಸರಕು ಮಾರುಕಟ್ಟೆಯ ದಕ್ಷತೆ, ನೌಕರರ ನಿರ್ವಹಣೆ, ಹಣಕಾಸಿನ ಸಮರ್ಪಕ ನಿರ್ವಹಣೆ, ತಾಂತ್ರಿಕತೆಯ ಬದಲಾವಣೆಗಳಿಗೆ ಸದಾ ಸಜ್ಜಾಗಿರುವುದು, ಮಾರುಕಟ್ಟೆಯ ಗಾತ್ರದ ಅಂಶಗಳನ್ನು ಅಳೆಯಲಾಗುತ್ತದೆ.
ಅವಿಷ್ಕಾರ ಶಕ್ತಿ ಮತ್ತು ವ್ಯಾವಹಾರಿಕ ಪ್ರಬುದ್ಧತೆಗಳು: ಮೇಲೆ ಹೇಳಿದ ಎಲ್ಲಾ ಅಂಶಗಳು ಒಂದಕ್ಕೊಂದು ನೇರವಾದ ಸಂಬಂಧವನ್ನು ಹೊಂದಿದ್ದು ನಾಡಿನ ಆರ್ಥಿಕತೆ ಮತ್ತು ಸ್ಪರ್ಧಾತ್ಮಕತೆಗೆ ಅಡಿಪಾಯ ಹಾಕುತ್ತವೆ ಅಲ್ಲದೇ ಜನರಲ್ಲಿ ಅವಿಷ್ಕರಿಸುವ ಮನೋಭಾವವನ್ನು ಹುಟ್ಟು ಹಾಕುತ್ತವೆ, ವ್ಯಾವಹಾರಿಕವಾಗಿ ಪ್ರಬುದ್ಧರಾಗುವಂತೆ ಮಾಡುತ್ತವೆ. ಇಲ್ಲಿನ ಪ್ರತಿಯೊಂದು ಅಂಶವೂ ಸಹ ಶಿಕ್ಷಣದೊಂದಿಗೆ ನೇರವಾಗಿ ಅಥವಾ ಪರೋಕ್ಷವಾಗಿ ತಳುಕು ಹಾಕಿಕೊಂಡಿರುವುದನ್ನು ಗಮನಿಸಬಹುದಾಗಿದೆ. ಉಳಿದವುಗಳೆಲ್ಲಾ ಶಿಕ್ಷಣ ವ್ಯವಸ್ಥೆಯ ಉಪಲಬ್ಧಗಳಾಗಿರುತ್ತವೆ. ಹಾಗಾಗಿಯೇ ಶಿಕ್ಷಣವನ್ನು ಸಮಪರ್ಕವಾಗಿ ನಿಭಾಯಿಸಿದ ದೇಶಗಳು ಮಾತ್ರ ಹೆಚ್ಚು ಸ್ಪರ್ಧಾತ್ಮಕವಾಗಿರುವುದು ಕಂಡು ಬರುತ್ತದೆ.
 
ಸ್ಪರ್ಧಾತ್ಮಕತೆಯಲ್ಲಿ ತಾಯಿನುಡಿ ಶಿಕ್ಷಣದ ಮಹತ್ವ ಏನು:

ಉತ್ತಮವಾದ ಶಿಕ್ಷಣವು ಮಗುವಿನ ಸಹಜ ಪ್ರತಿಭೆಯನ್ನು ಅರಳುವಂತೆ ಮಾಡುತ್ತದೆ, ಈ ಉತ್ತಮವಾದ ಕಲಿಕೆಯು ಮಗುವಿನ ತಾಯಿನುಡಿಯಲ್ಲಿ ಮಾತ್ರ ಸಾಧ್ಯವಾಗುತ್ತದೆ  ಎಂಬುದು ರುಜುವಾತಾಗಿದೆ, ಪರಕೀಯವಾದ ಭಾಷೆಯೊಂದರಲ್ಲಿ ಕಾರ್ಯನಿರ್ವಹಿಸಬೇಕಾದಾಗ, ಹೆಚ್ಚಿನ ಶಕ್ತಿಯು ವಿಷಯವನ್ನು ಅರ್ಥ ಮಾಡಿಕೊಳ್ಳುವುದರಲ್ಲಿಯೇ ಪೋಲಾಗುತ್ತದೆ, ಸ್ವಂತವಾಗಿ ಆಲೋಚಿಸುವ, ಅನ್ವೇಷಿಸುವ ಬಲ ದೊಡ್ಡಮಟ್ಟದಲ್ಲಿ  ಕುಗ್ಗುತ್ತದೆ. ಇದು ಒಟ್ಟಾರೆಯಾಗಿ ಉತ್ಪಾದಕತೆಗೆ ಮಾರಕವಾಗುತ್ತದೆ.ಸ್ಪರ್ಧಾತ್ಮಕತೆಯ ಪಟ್ಟಿಯಲ್ಲಿ ಮೊದಲ ಮೂವತ್ತು ಸ್ಥಾನಗಳನ್ನು ಪಡೆದಿರುವ ದೇಶಗಳಲ್ಲಿ ನಗರವೇ ಒಂದು ದೇಶವಾಗಿರುವ ಸಿಂಗಾಪುರ ಮತ್ತು ಹಾಂಕಾಂಗ್‍ನಂತಹ ಸಿಟಿಸ್ಟೇಟ್‍ಗಳನ್ನು ಹೊರತು ಪಡಿಸಿದರೆ ಜನಲಕ್ಷಣದಲ್ಲಿ ಒಟ್ಟಾರೆಯಾಗಿ ಭಾರತದೊಂದಿಗೆ ಅಥವಾ ಭಾರತದ ರಾಜ್ಯಗಳೊಂದಿಗೆ ಹೋಲಿಸಬಹುದಾದ ಉಳಿದ ಇಪ್ಪತ್ತೆಂಟೂ ದೇಶಗಳು ತನ್ನ ನಾಡಿನ ಜನರಾಡುವ ಭಾಷೆ ಮತ್ತು ತನ್ನ ಜನಲಕ್ಷಣಕ್ಕೆ ತಕ್ಕಂತೆ ತಾಯಿನುಡಿಯಲ್ಲಿಯೇ ಶಿಕ್ಷಣವನ್ನು ನೀಡುತ್ತಿರುವುದನ್ನು ಗಮನಿಸಬೇಕಿದೆ. ಜಾಗತೀಕರಣದ ಇಂದಿನ ಯುಗದಲ್ಲಿ ಸ್ಪರ್ಧೆಯನ್ನು ಎದುರಿಸಿ ಗೆಲ್ಲದಿದ್ದರೆ ಉಳಿಗಾಲವಿಲ್ಲ. ಜಗತ್ತಿನ ಮುಂದುವರೆದ ದೇಶಗಳು ತನ್ನೆಲ್ಲಾ ವ್ಯವಸ್ಥೆಗಳನ್ನು ತನ್ನ ನುಡಿಯಲ್ಲೇ ಕಟ್ಟಿಕೊಂಡಿರುವುದು ಪ್ರಧಾನವಾಗಿ ಕಂಡು ಬರುತ್ತದೆ. ತನ್ನ ನುಡಿಯಾದ ಜರ್ಮನ್ ಭಾಷೆಯಲ್ಲೇ ಶಿಕ್ಷಣವನ್ನು ನೀಡುವ ಜರ್ಮನಿಯಂತಹ ದೇಶವೊಂದು ಪ್ರತಿಷ್ಟೆಯ ಸಂಕೇತಗಳೆಂದೇ ಭಾವಿಸುವ ಮರ್ಸಿಡಿಸ್ ಬೆಂಝ್, ಆಡಿ, ಬಿಎಂಡಬ್ಲೂ ನಂತಹ ಕಾರುಗಳನ್ನು ಉತ್ಪಾದಿಸುತ್ತದೆ. ಬಾಶ್, ಸೀಮನ್ಸ್ ನಂತಹ ಕಂಪನಿಗಳನ್ನು ಕಟ್ಟಿದೆ. ಮಹಾಯುದ್ಧದಲ್ಲಿ ನೆಲಕಚ್ಚಿದ್ದ ಜಪಾನ್ ಜಗತ್ತೇ ನಿಬ್ಬೆರಗಾಗುವಂತೆ ಪುಟಿದೆದ್ದು ಟೊಯೋಟಾ, ಸೋನಿಯಂತಹ ಬ್ರ್ಯಾಂಡ್ಗಳನ್ನು ಜಗತ್ತಿಗೆ ಪರಿಚಯಿಸಿದೆ.ಫಿನ್-ಲ್ಯಾಂಡಿನ ನೋಕಿಯಾ, ಅಮೇರಿಕದ ಆಪಲ್, ಫೇಸ್ ಬುಕ್ ಇವೆಲ್ಲಾ ಕೆಲವು ಉದಾಹರಣೆಗಳಷ್ಟೆ. ಭಾರತವು ಮಿಕ್ಕಿಲ್ಲಾ ವಿಷಯಗಳಲ್ಲಿ ಈ ದೇಶಗಳಿಗೆ ಸರಿಸಾಟಿಯಾಗಿದ್ದರೂ ಸಹ ತನ್ನ ಶಿಕ್ಷಣ ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸಿಲ್ಲ, ಭಾರತವು ಅಪಾರವಾದ ಮಾನವ ಸಂಪಲ್ಮೂನಗಳನ್ನು ಹೊಂದಿದ್ದರೂ ಸಹಾ ಹೇಳಿಕೊಳ್ಳುವಂತಹ ಯಾವುದೇ ಉತ್ಪನ್ನವನ್ನಾಗಲೀ, ಉತ್ಪಾದನಾ ಕಂಪನಿಯನ್ನಾಗಲೀ ನಾವೂ ಸೃಷ್ಟಿಸಿಯೇ ಇಲ್ಲ ಮತ್ತದಕ್ಕೆ ಕಾರಣ ನಮ್ಮ ಕಲಿಕಾ ವ್ಯವಸ್ಥೆಯಲ್ಲಿನ ಕೊರತೆಯೇ ಅನ್ನಬಹುದು. ಕೇವಲ ಸಾಫ್ಟ್ವೇರ್ ಸೇವೆಗಷ್ಟೇ ನಮ್ಮನ್ನು ಸೀಮಿತಗೊಳಿಸಿಕೊಂಡು ಅಲ್ಲೇ ಗಿರಕಿ ಹೊಡೆಯುವಂತಾಗಿದೆಯೇ ಭಾರತವೆಂದರೆ ಕಡಿಮೆ ದರದಲ್ಲಿ ಸೇವೆ ನೀಡುವ ದೇಶವೆಂದಾಗಿದೆಯೇ ಹೊರತು ಜಗತ್ತಿನ ಭವಿತವ್ಯ ಬದಲಿಸುವ ಉತ್ಪನ್ನಗಳನ್ನು ಹುಟ್ಟಿಸುವ ದೇಶವೆಂದಾಗಿಲ್ಲ. ಜಪಾನ್, ಜರ್ಮನಿ,ಫಿನ್ಲ್ಯಾಂಡ್, ಅಮೇರಿಕಾದಂತಹ ದೇಶಗಳಲ್ಲಿ ತಂತ್ರಜ್ನಾನದಲ್ಲಿ ನಡೆದ ಕ್ರಾಂತಿಕಾರಕ ಬೆಳವಣಿಗೆಗಳು ಮತ್ತು ಅವಿಷ್ಕಾರಗಳು ತಾಯಿನುಡಿ ಕಲಿಕೆಯ ಮಹತ್ವವನ್ನು ಕಾಲದಿಂದ ಕಾಲಕ್ಕೆ ಸಾಬೀತುಪಡಿಸುತ್ತಲೇ ಬಂದಿವೆ, ಈಗ ಹೊರಬಂದಿರುವ ಅತ್ಯುತ್ತಮ ಸ್ಪರ್ಧಾತ್ಮಕ ದೇಶಗಳ ಪಟ್ಟಿಯಲ್ಲಿಯೂ ಸಹ ತಾಯಿನುಡಿಯಲ್ಲೇ ಶಿಕ್ಷಣ ನೀಡುವ ದೇಶಗಳೇ ಮುಂಚೂಣಿ ಸ್ಥಾನಗಳನ್ನು ಪಡೆದಿರುವುದು ತಾಯಿನುಡಿಯ ಕಲಿಕೆಯೇ ಮೇಲು ಎಂಬ ವೈಜ್ಞಾನಿಕ ಸತ್ಯವನ್ನು ಮತ್ತೊಮ್ಮೆ  ನಿಸ್ಸಂಶಯವಾಗಿ ನಿರೂಪಿಸಿದೆ.
 
ಆಗಬೇಕಾಗಿರುವುದೇನು:

ಅಲ್ಲದೆ ಭಾರತದಂತಹ ವಿಶಾಲವಾದ ದೇಶವೊಂದರಲ್ಲಿ ಸರಿಯಾದ ಒಕ್ಕೂಟ ವ್ಯವಸ್ಥೆಯನ್ನು ಕಟ್ಟದೆ, ಕೇಂದ್ರೀಕೃತ ಪದ್ಧತಿಯಲ್ಲೇ ಆಳಲು ಹೊರಟಿರುವುದು ಸಹ ನಮ್ಮ ಸ್ಪರ್ಧಾತ್ಮಕತೆಯನ್ನು ಕುಂಠಿತಗೊಳಿಸಿದೆ ಎಂದರೆ ತಪ್ಪಾಗಲಾರದು. ನಮ್ಮಲ್ಲಿಯೂ ಸಹ ಜನಲಕ್ಷಣ ಮತ್ತು ಜನರ ನುಡಿಗೆ ತಕ್ಕಂತೆ ಶಿಕ್ಷಣದ ಭಾಷೆಯನ್ನು ನಿರ್ಧರಿಸುವಂತಹ ಪರಿಣಾಮಕಾರಿಯಾದ ಶಿಕ್ಷಣ ವ್ಯವಸ್ಥೆ ರೂಪುಗೊಳ್ಳಬೇಕಿದೆ. ತುರ್ತು ಪರಿಸ್ಥಿತಿಯ ಸಮಯದಲ್ಲಿ ಶಿಕ್ಷಣವನ್ನು ಜಂಟಿ ಪಟ್ಟಿಗೆ ಸೇರಿಸಿದ್ದು ರಾಜ್ಯಗಳು ತಮಗೆ ಬೇಕಾದಂತೆ ಶಿಕ್ಷಣ ನೀತಿಯನ್ನು ಮಾಡಿಕೊಳ್ಳಲು ತೊಡಕಾಗಿದೆ, ಆಯಾ ರಾಜ್ಯಗಳು ತಮ್ಮ ನುಡಿಯಲ್ಲೇ, ಶಿಕ್ಷಣವನ್ನು ಪಡೆಯಲು ಅನುವಾಗುವಂತೆ ಶಿಕ್ಷಣವನ್ನು ರಾಜ್ಯ ಪಟ್ಟಿಗೆ ಸೇರಿಸುವುದು ಸೂಕ್ತ. ಆಯಾ ರಾಜ್ಯಗಳು ತಾಯಿ ನುಡಿ ಕಲಿಕೆಗೆ ಒತ್ತು ಕೊಟ್ಟು ಕಲಿಕೆಯ ಗುಣಮಟ್ಟವನ್ನು ಸುಧಾರಿಸಿ, ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳುವುದಷ್ಟೇ ಅಲ್ಲದೆ  ಆರ್ಥಿಕವಾಗಿ ಸಬಲಗೊಳ್ಳಬೇಕು, ಇಂತಹ ಬಲಶಾಲಿಯಾದ ರಾಜ್ಯಗಳಿಂದ ಮಾತ್ರ ಬಲಶಾಲಿಯಾದ ರಾಷ್ಟವೊಂದರ ನಿರ್ಮಾಣ ಸಾಧ್ಯ.

No comments: