Thursday, September 26, 2013

ಹೊಸ ಪಕ್ಷ ರಚಿಸಲು “ಸಮಾಜವಾದ ಒಪ್ಪಲೇಬೇಕು” ಅನ್ನುವ ಕಟ್ಟಳೆ ಕೈಬಿಡಲು ಸರಿಯಾದ ಹೊತ್ತು !

(ತಕ್ಷಶಿಲಾ ಬ್ಲಾಗಿನಲ್ಲಿ ಅನುವಾದಿಸಿ ಪ್ರಕಟಿಸಿರುವ ಬರಹ)

ಮೂಲ ಅಂಕಣ ಬರೆದವರು – ಬರುಣ್ ಮಿತ್ರಾ
ಅಂಕಣದ ಅನುವಾದಕರು – ಗಿರೀಶ್ ಕಾರ್ಗದ್ದೆ

ಇತ್ತೀಚೆಗೆ ಭಾರತದ ಸರ್ವೋಚ್ಚ ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿಯ ದಾವೆಯೊಂದನ್ನು ವಜಾಗೊಳಿಸಿತು, ಅದರಲ್ಲಿ ಭಾರತೀಯ ಸಂವಿಧಾನಕ್ಕೆ ತರಲಾಗಿರುವ ೪೨ನೇ ತಿದ್ದುಪಡಿಯನ್ನು ಪ್ರಶ್ನಿಸಿಲಾಗಿತ್ತು. ಈ ತಿದ್ದುಪಡಿಯ ಪ್ರಕಾರ  ಭಾರತವು ’ಪ್ರಜಾ ಗಣರಾಜ್ಯ’ ವಾಗಬೇಕಾದರೆ ’ಸಮಾಜವಾದ’ ಮತ್ತು ’ಜಾತ್ಯಾತೀತತೆ’ಯನ್ನು ಒಪ್ಪಿಗೊಳ್ಳಬೇಕೆಂದು ಪ್ರಸ್ತಾಪಿಸಲಾಗಿದೆ. ಸಂವಿಧಾನದ ಈ ತಿದ್ದುಪಡಿಯು ೧೯೭೬ ರ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನಪಿಗೆ ತರುತ್ತದೆ. ನಂತರದ ದಿನಗಳಲ್ಲಿ ರಾಜಕೀಯ ಪಕ್ಷಗಳು ಮತ್ತು ಚುನಾವಣೆಗೆ ಸಂಬಂಧಿಸಿದ ಕಾನೂನಾದ ಪ್ರಜಾ ಪ್ರತಿನಿಧಿ ಕಾಯ್ದೆಗೂ ಸಹ ತಿದ್ದುಪಡಿ ತಂದು ೨೯ನೇ ಸೆಕ್ಷನ್ಅನ್ನು ಸೇರಿಸಲಾಗಿದ್ದು ಇದರ ಪ್ರಕಾರ ಯಾವುದೇ ರಾಜಕೀಯ ಪಕ್ಷವು ಭಾರತೀಯ ಚುನಾವಣಾ ಆಯೋಗದಡಿಯಲ್ಲಿ ನೊಂದಾಯಿಸಲ್ಪಟ್ಟು ಚುನಾವಣೆವನ್ನೆದುರಿಸಬೇಕಾದಲ್ಲಿ ’ಸಮಾಜವಾದ’ವನ್ನು ದೃಡೀಕರಿಸುವುದು ಕಡ್ಡಾಯವಾಗಿರುತ್ತದೆ.

ನ್ಯಾಯಾಲಯಗಳು ಸಾಮಾನ್ಯವಾಗಿ ತಮ್ಮ ತೀರ್ಪನ್ನು ಘೋಷಿಸಿದ ನಂತರ ಅರ್ಜಿಗಳನ್ನು ವಜಾಗೊಳಿಸಿತ್ತವೆ ಆದರೆ ಮೇಲೆ ಹೇಳಿದ ಮೊಕದ್ದಮೆಯಲ್ಲಿ ’ಇದೊಂದು ಬೌದ್ಧಿಕ ಪ್ರಶ್ನೆಯಾಗಿರುವುದರಿಂದ ಹಾಗೂ ಇದುವರೆಗೂ ಯಾವುದೇ ರಾಜಕೀಯ ಪಕ್ಷವೂ ಸಹ ಇದನ್ನು ವಿರೋಧಿಸಿ ನ್ಯಾಯಾಲಯದ ಮೊರೆ ಹೋಗಿಲ್ಲವೆಂಬುದನ್ನು ಗಮನಿಸಿ ಅರ್ಜಿದಾರನಿಗೆ ತನ್ನ ಅರ್ಜಿಯನ್ನು ಹಿಂಪಡೆಯುವಂತೆ ಸೂಚಿಸಿತು. ಅರ್ಜಿಯನ್ನು ವಜಾಗೊಳಿಸದೆ ಕೇವಲ ಹಿಂಪಡೆಯುವಂತೆ ಸೂಚಿಸುವದರ ಮೂಲಕ ಈ ಅರ್ಜಿ ಅರ್ಹವೆಂದೇ ಪರಿಗಣಿಸಿ ಮುಂದಿನ ದಿನಗಳಲ್ಲಿ ವಿಚಾರಣೆಗೆ ಮುಕ್ತವಾಗಿರಿಸಿರುತ್ತದೆ. ಆರ್ಥಿಕ ಮತ್ತು ರಾಜಕೀಯ ವಲಯಗಳಲ್ಲಿ ವ್ಯಕ್ತಿಗತ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಉದಾರವಾದಿ ಧೋರಣೆಯುಳ್ಳವರಿಗೆ ತಮ್ಮ ಆಶೋತ್ತರಗಳನ್ನು ಸರಿಯಾಗಿ ಬಿಂಬಿಸಬಲ್ಲ ರಾಜಕೀಯ ವೇದಿಕೆಗಳಿಲ್ಲವೆಂಬ ಹಲದಿನಗಳ ಕೊರಗು ಇಂದಿಗೂ ಇದೆ. ಹಲವು ರಾಜಕೀಯ ಪಕ್ಷಗಳಲ್ಲಿ ಉದಾರವಾದಿಗಳು ಇದ್ದಾರೆಯಾದರೂ, ಸ್ಪಷ್ಟವಾಗಿ ಉದಾರವಾದವನ್ನು ಬೆಂಬಲಿಸುವಂತಹ ಒಂದು ರಾಜಕೀಯ ಪಕ್ಷದ ಕೊರತೆಯು ಅವರನ್ನು ಭಾಧಿಸುತ್ತಿದೆ.

ಭಾರತದಲ್ಲಿ ಹಲವಾರು ರಾಜಕೀಯ ಪಕ್ಷಗಳಿವೆ, ಸಂಸತ್ತಿನಲ್ಲಿ ಸುಮಾರು ಐವತ್ತು ವಿವಿಧ ಪಕ್ಷಗಳಿಗೆ ಸೇರಿದ ಸದಸ್ಯರುಗಳಿದ್ದಾರೆ, ಇನ್ನು ರಾಜ್ಯ ಹಾಗೂ ಸ್ಥಳೀಯ ಮಟ್ಟದಲ್ಲಿ ನೂರಾರು ಪಕ್ಷಗಳಿವೆ. ಇವು ರಾಷ್ಟ್ರೀಯ, ರಾಜ್ಯ, ಪ್ರಾದೇಶಿಕ ಹಾಗೂ ಸ್ಥಳೀಯ ಹೀಗೆ ಹಲವು ದ್ರುಷ್ಟಿಕೋನವನ್ನು ಹಾಗೂ ರಾಷ್ಟ್ರಿಯತೆ, ಭಾಷೆ, ಧಾರ್ಮಿಕತೆ, ಜಾತಿ ಮತ್ತಿತರ ನೆಲೆಯಲ್ಲಿ ಸಮಾಜದ ಹಲವು ವರ್ಗಗಳನ್ನು ಪ್ರತಿನಿಧಿಸುತ್ತಿರುವುದಾಗಿ ಹೇಳಿಕೊಳ್ಳುತ್ತಿವೆ. ಆದರೆ ಒಂದು ರಾಜಕೀಯ ಪಕ್ಷವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವಾಗ ಸಮಾಜವಾದವನ್ನು ಕಡ್ಡಾಯವಾಗಿ ಅನುಮೋಧಿಸಬೇಕಿರುವುದರಿಂದ ತಮ್ಮ ಎಲ್ಲಾ ಸಿದ್ಧಾಂತಗಳಿಗೆ ನ್ಯಾಯ ಒದಗಿಸುವುದು ಈ ಪಕ್ಷಗಳಿಗೆ ಸಾಧ್ಯವಾಗದೆ ಸೀಮಿತ ಸಿದ್ಧಾಂತಕ್ಕೆ ಬದ್ಧವಾಗಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದರೆ ಸ್ವತಂತ್ರವಾಗಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಇದು ಅನ್ವಯಿಸುವುದಿಲ್ಲ, ಸ್ವತಂತ್ರ ಅಬ್ಯರ್ಥಿಗಳು ಒಂದುವೇಳೆ ಚುನಾವಣೆಯಲ್ಲಿ ಗೆದ್ದರೆ ಮಾತ್ರ ಸಮಾಜವಾದವನ್ನು ಅನುಮೋದಿಸುವುದಾಗಿ ಹಾಗೂ ಸಂವಿಧಾನವನ್ನು ಎತ್ತಿ ಹಿಡಿಯುವುದಾಗಿ ಪ್ರಮಾಣ ಸ್ವೀಕರಿಸಬೇಕಾಗುತ್ತದೆ ಅಷ್ಟೆ.

ಕಡ್ಡಾಯವಾಗಿ ಸಮಾಜವಾದವನ್ನು ದ್ರುಡೀಕರಿಸಬೇಕೆಂಬ ನಿಯಮದಿಂದಾಗಿ ಭಾರತದಲ್ಲಿ ಒಂದು ವಿಶಾಲವಾದ  ಪ್ರಜಾಪ್ರಭುತ್ವ ವ್ಯವಸ್ಥೆಯಿದ್ದರೂ ಸಹ ರಾಜಕೀಯ ಆಯ್ಕೆಗಳು ಸೀಮಿತಗೊಂಡಿವೆ. ಹೀಗೆ ಕಾನೂನುಬದ್ಧವಾಗಿ ಒಂದು ರಾಜಕೀಯ ಸಿದ್ಧಾಂತವನ್ನು ಸಮಾಜವಾದಕ್ಕೆ ಅಂಟಿಕೊಳ್ಳುವಂತೆ ಮಾಡುವುದರಿಂದ ಹಲವಾರು ಗೊಂದಲಗಳಿಗೆ ಕಾರಣವಾಗುತ್ತದೆ. ಸಮಾಜವಾದವನ್ನು ರಾಜಕೀಯ ಹಾಗೂ ಸಾಂವಿಧಾನಿಕ ಕ್ರಮಗಳಿಂದಲೇ ಕಡ್ಡಾಯಗೊಳಿಸಿರುವುದರಿಂದ ಒಂದುವೇಳೆ ಯಾವುದೇ ರಾಜಕೀಯ ಪಕ್ಷವು ತಮ್ಮ ಚುನಾವಣಾ ಪ್ರಚಾರದಲ್ಲಿ ’ಸಮಾಜವಾದ’ ತತ್ವಗಳ ವಿರುದ್ಧವಾಗಿ ದನಿಯೆತ್ತುವುದು ಅಸಾಂವಿಧಾನಿಕವಾಗುತ್ತದೆ ಯಾಕೆಂದರೆ ಮೊದಲಿಗೆ ತಾನು ಸಮಾಜವಾದದ ತತ್ವವನ್ನು ಒಪ್ಪಿಕೊಂಡಿರುವುದರಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸಲು ಆ ಪಕ್ಷವು ಅರ್ಹತೆ ಪಡೆದಿರುತ್ತದೆ. ತಾನೇ ಒಪ್ಪಿಕೊಂಡಿರುವ ಸಿದ್ಧಾಂತವನ್ನು ವಿರೋಧಿಸುವುದಾದರೂ ಹೇಗೆ?

ಎರಡನೆಯದಾಗಿ ಸಮಾಜವಾದವೆಂದರೇನು? ಎಂಬುದನ್ನು ಸಂವಿಧಾನದಲ್ಲಿ ವಿವರಿಸಲಾಗಿಲ್ಲ. ಮೇಲೆ ಹೇಳಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಸಹ ಈ ಪ್ರಶ್ನೆಗಳನ್ನೆತ್ತಿದ್ದಾರೆ. ಸಮಾಜವಾದದಲ್ಲಿ ಪಾಳೆಗಾರಿಕೆ, ಸಾಮ್ರಾಜ್ಯಶಾಹಿ, ಪಾಸಿಸಂ, ನಾಝಿಸಂ(ರಾಷ್ಟ್ರೀಯ ಸಮಾಜವಾದ), ಕಮ್ಯೂನಿಸಂ, ಬಂಡವಾಳಶಾಹಿ ಹಾಗೂ ಇನ್ನಿತರ ಇಸಂಗಳೂ ಸಹ ಸೇರಿಕೊಳ್ಳಬಹುದೇ? ಒಂದು ವೇಳೆ ಸಮಾಜವಾದಕ್ಕೆ ಇಷ್ಟೊಂದು ವ್ಯಾಪಕವಾದ ಅರ್ಥವು ಇದ್ದುದೇ ಆದರೆ ಸಂವಿಧಾನದಲ್ಲಿ ಕೇವಲ ಅಂದೊಂದನ್ನೆ ಸೇರಿಸುವ ಅವಶ್ಯಕತೆಯಾದರೂ ಏನಿತ್ತು ಎಂದು ಪ್ರಶ್ನಿಸಲಾಗಿದೆ. ಸಾಮಾನ್ಯವಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೊಟ್ಟಿರುವ ಪದಗಳಿಗೆ ಖಚಿತವಾದ ಅರ್ಥಗಳನ್ನು ಹುಡುಕುವಲ್ಲಿ ಸಾಕಷ್ಟು ಶ್ರಮವಹಿಸಲಾಗುತ್ತದೆ, ಒಂದು ಪದಕ್ಕೆ ಇಷ್ಟೊಂದು ವ್ಯಾಪಕವಾದ ಅರ್ಥಗಳನ್ನು ಕೊಟ್ಟರೆ ನ್ಯಾಯದಾನಮಾಡುವುದು ಅಸಾಧ್ಯದ ಮಾತು. ಸುಪ್ರೀಮ್ ಕೋರ್ಟ್ ಏನೋ ಈ ವಿಚಾರವನ್ನು ಒಂದು ಬೌದ್ಧಿಕ ಕಸರತ್ತು ಎಂದು ಕರೆಯಿತು ಆದರೆ  ಭಾರತೀಯ ಸಂವಿಧಾನದ ಹಾಗೂ ಚುನಾವಣಾ ಕಾನೂನುಗಳ ಮೇಲೆ ಸಮಾಜವಾದದ ನೆರಳಿರುವುದರಿಂದಾಗಿ ಅದು ಮೂಲಭೂತ ಹಕ್ಕುಗಳ ಉಲ್ಲಂಘನೆ, ಅಭಿವ್ಯಕ್ತಿ ಸ್ವಾಂತಂತ್ರ್ಯದ ಹರಣ, ಒಡಗೂಡುವಿಕೆಯ ಸ್ವಾಂತಂತ್ರ್ಯ ಹಾಗೂ ಸೈದ್ಧಾಂತಿಕತೆಯ ಮೂಲತತ್ವಗಳ ಮೇಲೆ ಬೀರಬಹುದಾದ ಪರಿಣಾಮಗಳು ಹಲವು ಪ್ರಶ್ನೆಗಳಿಗೆ ಕಾರಣವಾಗಿವೆ. ಸಂವಿಧಾನದ ಮೂಲ ಸ್ವರೂಪದಲ್ಲಿ ಪ್ರಜಾಪ್ರಭುತ್ವಕ್ಕೆ ಅತ್ಯಂತ ಮನ್ನಣೆಯನ್ನು ಕೊಟ್ಟಿದ್ದರೂ ಸಹ, ಸೈದ್ದಾಂತಿಕವಾಗಿ ಅದನ್ನು ಒಂದೇ ರಾಜಕೀಯ ನಿಲುವಿಗೆ ಸೀಮಿತಗೊಳಿಸುವ ಪ್ರಯತ್ನ ಅದೆಷ್ಟು ಒಳ್ಳೆಯ ಪ್ರಜಾಪ್ರಭುತ್ವ?

ರಾಜಕೀಯ ಸಿದ್ಧಾಂತಗಳು ಜನಾಭಿಪ್ರಾಯ ಹಾಗೂ ಪಾಲಿಸಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ರಾಜಕೀಯದ ಅಂತಿಮ ಗುರಿ ಜನಹಿತಕ್ಕಾಗಿ ದುಡಿಯುವುದಾದರೂ ಸಹ ಸರ್ಕಾರದ ಹಿಂದಿರುವ ರಾಜಕೀಯ ಸಿಧ್ದಾಂತವೇ ಆಡಳಿತದ ದೂರದೃಷ್ಟಿ ಮತ್ತು ನೀತಿ ನಿಯಮಗಳಿಗೆ ಪ್ರಮುಖ ದಿಕ್ಸೂಚಿಯಾಗುತ್ತದೆ. ಉದಾಹರಣೆಗೆ ಒಂದು ಉದ್ದಿಮೆ ಅಥವಾ ಆರ್ಥಿಕ ವಲಯವನ್ನು ರಾಷ್ಟ್ರೀಕರಣಗೊಳಿಸಬೇಕೇ ಅಥವಾ ಖಾಸಗೀಕರಣಗೊಳಿಸಬೇಕೇ ಎಂಬುದನ್ನು ಒಂದು ಸರ್ಕಾರದ ರಾಜಕೀಯ ಸಿದ್ಧಾಂತಿಕ ಕಾರಣಗಳ ಮೇಲೆಯೇ ಅವಲಂಬಿತವಾಗುತ್ತದೆ ಹೊರತು ಕೇವಲ ತಾಂತ್ರಿಕ ಕಾರಣಗಳಿಗಾಗಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಎಲ್ಲವನ್ನೂ ತಿಳಿದುಕೊಂಡಿರುವುದು ಸಾಧ್ಯವಿಲ್ಲ ಒಂದು ಹೊಸನೀತಿಯನ್ನು ರೂಪಿಸುವಾಗ ಸಮಾಜದ ಮೇಲಾಗುವ ಪರಿಣಾಮಗಳೇನು ಎಂಬುದನ್ನು ಆ ನೀತಿಯು ರಾಜಕೀಯದ ಯಾವ ತತ್ವದ ನೆಲೆಗೆ ಹೊಂದಿಕೊಳ್ಳುತ್ತದೆ ಎಂಬುದರ ಮೂಲಕವೇ ತಿಳಿದುಕೊಳ್ಳುವುದು  ನಿಯಮಾವಳಿಗಳನ್ನು ರೂಪಿಸುವವರಿಗಿರುವ ಸರಳ ಮಾರ್ಗವಾಗಿದೆ.

ಜರ್ಮನಿಯನ್ನು ಹೊರತುಪಡಿಸಿ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಯಾವ ಪ್ರಜಾಪ್ರಭುತ್ವವೂ ಸಹ ರಾಜಕೀಯ ಸಿದ್ಧಾಂತಗಳ ಶಾಂತಿಯುತ ಸ್ಪರ್ಧೆಯನ್ನು ಹತ್ತಿಕ್ಕುತ್ತಿರುವ ಉದಾಹರಣೆಯಿಲ್ಲ. ಜರ್ಮನಿಯಲ್ಲಿ ನಾಜಿಸಂ ಹರಡುವಿಕೆಯ ವಿರುದ್ಧ ಸ್ವಲ್ಪ ತಡೆಯಿದೆಯಷ್ಟೇ. ಎಲ್ಲಾ ಕಾಲಘಟ್ಟದಲ್ಲಿಯೂ ಸಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ರಾಜಕೀಯ ಸಿದ್ಧಾಂತಗಳು ಬಹುಸಂಖ್ಯಾತರ ಮನೋಭಿಲಾಷೆಗಳನ್ನು ಪ್ರತಿಬಿಂಬಿಸುವಂತಿರುತ್ತವೆ ಅಷ್ಟೇ ಅಲ್ಲ ಚುನಾವಣಾ ಸಮಯದಲ್ಲಿ ರಾಜಕೀಯ ಆಗುಹೋಗುಗಳನ್ನೂ ಸಹ ಬದಲಾಯಿಸಬಲ್ಲ ಶಕ್ತಿಯು ಇಂತಹ ಸಿದ್ಧಾಂತಗಳಿಗಿರುತ್ತದೆ. ರೊನಾಲ್ಡ್ ರೇಗನ್‍ನಿಂದ ಹಿಡಿದು ಬರಾಕ್ ಒಬಾಮರವರೆಗೆ, ಮಾರ್ಗರೇಟ್ ಥ್ಯಾಚರ್ ರಿಂದ ಹಿಡಿದು ಟೋನಿ ಬ್ಲೇರ್ ವರೆಗಿನ ಮುಖಂಡರುಗಳು ಹಾಗೂ ರಾಜಕೀಯ ಪಕ್ಷದವರು ಆಗಿನ ಕಾಲಮಾನದಲ್ಲಿಂದ್ದತಹ ಜನಪ್ರಿಯ ರಾಜಕೀಯ ನಿಲುವುಗಳ ಮೂಲಕ ಜೀಕಾಟವನ್ನು ನಡೆಸಿಕೊಂಡೇ ತಮ್ಮ ರಾಜಕೀಯ ಭವಿಷ್ಯಗಳನ್ನು ಕಂಡುಕೊಂಡಿದ್ದಾರೆ. ಈ ಗುಣವೇ ಪ್ರಜಾಪ್ರಭುತ್ವವನ್ನು ಒಂದು ಪ್ರಬಲವಾದ ಅಸ್ತ್ರವನ್ನಾಗಿಸಿದೆ ಅಲ್ಲದೆ ಹಲವು ರಾಜಕೀಯ ಸಿದ್ದಾಂತಗಳ ನಡುವಿನ ಸಂಘರ್ಷದ ನಡುವೇಯೂ ಒಂದು ಸಮಾಜ ರಾಜಕೀಯವಾಗಿ ಅವನತಿ ಹೊಂದದಂತೆ ತಡೆಯುತ್ತದೆ.

೧೯೪೯ ರಲ್ಲಿ ನಡೆದ ಸಂವಿಧಾನ ಸಭೆಯಲ್ಲಿಯೂ (constituent assembly) ಸಹ ಸಮಾಜವಾದ ಎಂದರೇನು ಎಂಬುದರ ಬಗ್ಗೆ ಸುಧೀರ್ಘವಾದ ಜಿಜ್ನಾಸೆಯನ್ನು ನಡೆಸಲಾಗಿತ್ತು, ಸಂವಿಧಾನದಲ್ಲಿರುವ ಹಲವಾರು ಸವಲತ್ತುಗಳು ಸಮಾಜವಾದದ ಗುಣವನ್ನು ಮೈಗೂಡಿಕೊಂಡಿದ್ದರೂ ಸಹ ತಮ್ಮ ಮುಂದಿನ ಜನಾಂಗವನ್ನು ಕೇವಲ ಒಂದು ರಾಜಕೀಯ ಸಿದ್ದಾಂತದ ಅಡಿಯಾಳಾಗಿಸದಿರಲು ನಮ್ಮ ಸಂವಿಧಾನದ ರಚನಾಕಾರರು ನಿರ್ಧರಿಸಿದ್ದರು. ” ಒಂದು ನಾಡಿನ ಪಾಲಿಸಿಗಳು ಹೇಗಿರಬೇಕು, ಸಾಮಾಜಿಕ ಹಾಗೂ ಆರ್ಥಿಕ ವಿಷಯಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಸಮಯ ಸಂದರ್ಭಕ್ಕನುಸಾರವಾಗಿ ಜನರೇ ನಿರ್ಧರಿಸಬೇಕೇ ಹೊರತು ಇದನ್ನು ಹೀಗೀಗೆ ಮಾಡಿ ಎಂದು ಸಂವಿಧಾನದಲ್ಲಿ ಬರೆದಿಡಬಾರದು ಯಾಕೆಂದರೆ ಹೀಗೆ ಮಾಡುವುದು ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ದಕ್ಕೆ ತಂದು ಪ್ರಜಾಪ್ರಭುತ್ವವನ್ನೇ ಸರ್ವನಾಶ ಮಾಡುತ್ತದೆ..” ಎಂದು ಭಾರತೀಯ ಸಂವಿಧಾನದ ಶಿಲ್ಪಿಯಾದ ಡಾ.ಬಿ.ಆರ್. ಅಂಬೇಡ್ಕರ್ ರವರೇ ಸ್ವತಃ ಹೇಳಿದ್ದರು.

ಒಂದು ಸಂವಿಧಾನದ ಮೂಲ ಗುಣವೇ ಪ್ರಜಾಪ್ರಭುತ್ವವಾಗಿದ್ದಲ್ಲಿ, ಆ ಪ್ರಜಾಪ್ರಭುತ್ವವನ್ನು ಕೇವಲ ಒಂದು ರಾಜಕೀಯ ಸಿದ್ದಾಂತಕ್ಕೆ ಕಟ್ಟಿಹಾಕುವುದು ಪ್ರಜಾಪ್ರಭುತ್ವದ ಮೂಲ ತತ್ವ ಹಾಗೂ ಆಶಯಗಳನ್ನು ಗಾಳಿಗೆ ತೂರಿದಂತೆ. ತಮಗೆ ಬೇಕಾದ ಸಿದ್ಧಾಂತವನ್ನು ಮುಕ್ತವಾಗಿ ತೋರ್ಪಡಿಸಿಕೊಳ್ಳುವ ಹಾಗೂ ಇದರ ರಾಜಕೀಯ ಸಿದ್ಧಾಂತಗಳೊಂದಿಗೆ ಶಾಂತಿಯುತವಾಗಿ ಸ್ಪರ್ಧಿಸಿ ನಾಗರೀಕರನ್ನು ತಮ್ಮತ್ತ ಒಲಿಕೊಳ್ಳುವ ಅವಕಾಶವೇ ಒಂದು ರಾಜಕೀಯಪಕ್ಷಕ್ಕಿಲ್ಲದಿರುವುದು ಅದೆಂತಹ ಪ್ರಜಾಪ್ರಭುತ್ವ ವ್ಯವಸ್ಥೆ?

೧೯೫೯ರಲ್ಲಿ ಸಿ.ರಾಜಗೋಪಲಾಚಾರಿ, ಮಿನೂ ಮಸಾನಿ ಮತ್ತಿತ್ತರಿಂದ ಸ್ಥಾಪಿಸಲ್ಪಟ್ಟು ಮಹಾರಾಷ್ಟ್ರದಲ್ಲಿ ಇಂದಿಗೂ ಅಸ್ತಿತ್ವದಲ್ಲಿರುವ ’ಸ್ವತಂತ್ರ ಪಾರ್ಟಿ’ ಯು ೧೯೯೪ ಭಾರತೀಯ ಚುನಾವಣಾ ಆಯೋಗಕ್ಕೆ ಒಂದು ಪತ್ರವನ್ನು ಬರೆದು ಸಮಾಜವಾದ ಸಿದ್ದಾಂತಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿ ಅದನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲವೆಂದು ತಿಳಿಸಿತ್ತು, ಆದರೆ ಪ್ರಜಾಪ್ರತಿನಿಧಿ ಕಾಯ್ದೆಯ ೨೯ಎ ಸೆಕ್ಷನ್ನಿನ್ನಲ್ಲಿರುವ ’ಸಮಾಜವಾದವನ್ನು ಒಪ್ಪಿಕ್ಕೊಳ್ಳುವುದು ಕಡ್ಡಾಯ’ ಎಂಬ ತಿದ್ದುಪಡಿಯತ್ತ ಬೊಟ್ಟುಮಾಡಿ ತೋರಿಸಿದ ಚುನಾವಣಾ ಆಯೋಗವು ತನ್ನ ಕೆಲಸವೇನಿದ್ದರೂ ಕಾನೂನನ್ನು ಇರುವಂತೆಯೇ ಜಾರಿಗೊಳಿಸುವುದೇ ಹೊರತು ಕಾನೂನನ್ನು ತಿದ್ದುವುದು ಅಥವಾ ತಿರುಚುವುದಲ್ಲ ಎಂದು ಸ್ಪಷ್ಟನೆ ನೀಡಿತು.

ಮೇಲ್ಕಂಡ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಒಂದು ’ಬೌದ್ಧಿಕ ಕಸರತ್ತು’ ಎಂದು ಕರೆಯುವುದರ ಮೂಲಕ ಸರ್ವೋಚ್ಚ ನ್ಯಾಯಾಲಯವು ಚರ್ಚೆಯೊಂದಕ್ಕೆ ನಾಂದಿ ಹಾಡಿದೆ ಹಾಗೂ ರಾಜಕೀಯ ಉದಾರವಾದಿಗಳಿಗೆ ತಮ್ಮ ಚಿಪ್ಪುಗಳಿಂದ ಹೊರಬರಲು ಅವಕಾಶದ ಬಾಗಿಲನ್ನು ತೆರೆದಿಟ್ಟಂತಾಗಿದೆ. ಈಗ ರಾಜಕೀಯ ಉದಾರವಾದಿಗಳು ’ಸಮಾಜವಾದವನ್ನು ಕಡ್ಡಾಯವಾಗಿ ದೃಡೀಕರಿಸಬೇಕು’ ಎಂಬ ಕಾನೂನಿನ ವಿರುದ್ಧ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸುವ ಏಕಮಾತ್ರ ಉದ್ದೇಶದಿಂದಲಾದರೂ ಒಂದು ರಾಜಕೀಯ ಪಕ್ಷವನ್ನು ಹುಟ್ಟುಹಾಕಬೇಕಿದೆ. ಪಕ್ಷವನ್ನು ಹುಟ್ಟುಹಾಕಿದ ನಂತರ ಚುನಾವಣಾ ಆಯೋಗದ ಮುಂದೆ ನೊಂದಾಯಿಸಿಕೊಳ್ಳಲು ಅರ್ಜಿ ಸಲ್ಲಿಸಬೇಕಾಗುತ್ತದೆ,  ಈ ಸಂಧರ್ಭದಲ್ಲಿ ’ಸಮಾಜವಾದ’ವನ್ನು ಅನುಮೋದಿಸಬಾರದ ಆಗ ಈ ಅರ್ಜಿಯು ’ಕಾನೂನುಬದ್ಧ’ವಾಗಿಲ್ಲದ ಕಾರಣದಿಂದ ತಿರಸ್ಕೃತವಾಗುತ್ತದಾದರೂ ಸಹ ಇದನ್ನು ಪ್ರಶ್ನಿಸಿ ಸುಪ್ರೀಮ್ ಕೋರ್ಟ್ ಮೆಟ್ಟಿಲೇರುವ ಅವಕಾಶವು ಪಕ್ಷಕ್ಕೆ ದೊರೆತು ಅಲ್ಲಿ ತನ್ನ ಅಹವಾಲನ್ನು ಹೇಳಿಕೊಳ್ಳಬಹುದು ಮತ್ತು ನ್ಯಾಯಕ್ಕಾಗಿ ಹೋರಾಟನಡೆಸಬಹುದಾಗಿರುತ್ತದೆ. ಉದಾರವಾದಿಗಳು ಇದುವರೆಗೂ ಭಾರತದಲ್ಲಿ ಚುನಾವಣೆಯ ಮೇಲೆ ಪರಿಣಾಮ ಬೀರುವಷ್ಟು ರಾಜಕೀಯ ಶಕ್ತಿಯಾಗಿ ಬೆಳೆದಿಲ್ಲದಿರಬಹುದು ಆದರೆ ಸಮಾಜವಾದದ ಕಡ್ಡಾಯಗೊಳಿಸುವಿಕೆಯನ್ನು ಪ್ರಶ್ನಿಸುವ ಸಲುವಾಗಿಯೇ ಒಂದು ಪಕ್ಷವನ್ನು ಹುಟ್ಟುಹಾಕುವುದು ಮುಂಬರುವ ದಿನಗಳಲ್ಲಿ ಗಣತಂತ್ರ ಭಾರತದ ರಾಜಕೀಯ ಚಿತ್ರಣದ ಮೇಲೆ ಗಾಢವಾದ ಪರಿಣಾಮವನ್ನಂತೂ ಖಂಡಿತವಾಗಿಯೂ ಬೀರುತ್ತದೆ. ಇದು ಕೇವಲ ’ಉದಾರವಾದ’ ಸಿದ್ಧಾಂತಕ್ಕೆ ನೆಲೆಸಿಗುವಂತೆ ಮಾಡುವ ಉದ್ದೇಶವಲ್ಲ ಬದಲಿಗೆ ಯಾವುದೇ ರಾಜಕೀಯ ನಂಬಿಕೆಗಳಿಗೆ ಮುಕ್ತ ಅವಕಾಶಗಳನ್ನೊದಗಿಸುವ ಪ್ರಯತ್ನವಾಗಿರುತ್ತದೆ. ಇವತ್ತು ಯಾವುದೇ ಒಂದು ರಾಜಕೀಯ ಸಿದ್ದಾಂತಕ್ಕೆ ಮಾತ್ರ ಕಾನೂನಾತ್ಮಕವಾಗಿ ಹೆಚ್ಚುಗಾರಿಕೆ ಸಿಗುತ್ತಿದೆಯೆಂದರೆ ಮುಂದೊಂದು ದಿನ ಪ್ರತಿಸ್ಪರ್ಧಿ ಸಿದ್ದಾಂತವನ್ನು ಸುಲಭವಾಗಿ ನಿಷೇಧಿಸುವ ಅವಕಾಶವಿದೆಯೆಂದೇ ಅರ್ಥ. ಹೀಗೆ ಕೇವಲ ತಮ್ಮ ಮೂಗಿನ ನೇರಕ್ಕೆ ಪ್ರಜಾಪ್ರಭುತ್ವವನ್ನು ನೋಡಲು ಹೊರಟರೆ ರಾಜಕೀಯ ಸ್ವಾತಂತ್ರ್ಯವೇ ಇಲ್ಲವಾಗುತ್ತದೆ.

ಮುಕ್ತ ಹಾಗೂ ಧೈರ್ಯವಂತರ ಪಕ್ಷಕ್ಕೆ ಎಲ್ಲರಿಗೂ ಸುಸ್ವಾಗತ! ರಾಜಕೀಯ ಕಣವೊಂದು ಕಾನೂಬದ್ಧವಾಗಿ ತೆರೆದುಕೊಂಡರೆ ರಾಜಕೀಯ ಉದ್ದೇಶಗಳೂ ಸಹ ಬದಲಾಗುತ್ತವೆ ಹಾಗೂ ಚುನಾವಣಾ ರಂಗವೂ ಸಹ ವಿಧಿಯಲ್ಲದೆ ನಮ್ಮನ್ನು ಹಿಂಬಾಲಿಸುತ್ತದೆ.

ಮೂಲ ಅಂಕಣದ ಕೊಂಡಿ – http://pragati.nationalinterest.in/2010/08/a-time-to-party/

No comments: