Saturday, May 31, 2014

ವೆಂಕಯ್ಯನಾಯ್ಡು:ರಾಜ್ಯಸಭೆ

ಹದಿನೈದು ವರ್ಷಗಳಿಂದ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಿರುವ ವೆಂಕಯ್ಯನಾಯ್ಡು ನಾನು ಕರ್ನಾಟಕಕ್ಕೆ ಸೇರಿದವನು ಹಾಗಾಗಿಯೇ ನಾನು ಮಂತ್ರಿಯಾದ ಮೇಲೆ ಮೊದಲು ಕರ್ನಾಟಕಕ್ಕೆ ಬಂದಿದ್ದೇನೆ ಎಂದು ನಿನ್ನೆ ತಮ್ಮ ಹಿಂದಿ, ಇಂಗ್ಲಿಷ್ ಮತ್ತು ತೆಲುಗು ಭಾಷಣದಲ್ಲಿ ಮನದುಂಬಿ ಹೇಳಿದ್ದಾರೆ. ಹೀಗೆ ತಮ್ಮ ಕನ್ನಡಪರ ಕಾಳಜಿಯನ್ನು ಮೆರೆದ ನಾಯ್ಡುರವರ ಅಧಿಕೃತ ವೆಬ್‍ಪೇಜಿನಲ್ಲಿ ತಮ್ಮ ರಾಜಕೀಯ ಜೀವನದ ಬಗ್ಗೆ ವಿವರ ಕೊಟ್ಟಿದ್ದಾರೆ. ಹಿಂದೆ ತಾನು ಅಲಂಕರಿಸಿದ ಹುದ್ದೆ ಮತ್ತು ಮತ್ತು ಅದು ಎಲ್ಲಿ ಎಂದು ಹೇಳಿಕೊಂಡಿರುವ ಈ ಪುಟದಲ್ಲಿ ತಾವು ಆ ಹುದ್ದೆ ಆಂಧ್ರ ಅಥವಾ ರಾಷ್ಟ್ರಮಟ್ಟದ್ದಾಗಿದ್ದರೆ(All India, National) ಅದನ್ನು ಅಲ್ಲಿಯೇ ಹಾಕಿಕೊಂಡಿದ್ದಾರೆ - ಇದು ಸರಿಯಾಗಿದೆ.

ಆದರೆ ತಾವು ರಾಜ್ಯಸಭೆಗೆ ಆಯ್ಕೆಯಾಗಿರುವ ವಿಷಯದಲ್ಲಿ ಯಾಕೋ ಏನೋ - ರಾಜ್ಯಸಭೆಗೆ ಆಯ್ಕೆಯಾಗಿರುವುದು ಮತ್ತು ಮರು ಆಯ್ಕೆಯಾಗಿರುವುದನ್ನಷ್ಟೇ ಹೇಳಿಕೊಂಡಿದ್ದಾರೆಯೇ ಹೊರತು ತಾನು ಆಯ್ಕೆಯಾಗಿರುವುದು ಕರ್ನಾಟಕದಿಂದ ಎಲ್ಲಿಯೂ ಅಪ್ಪಿ ತಪ್ಪಿಯೂ ಹೇಳಿಕೊಂಡಿಲ್ಲ. ತನ್ನ ರಕ್ತದ ಕಣಕಣದಲ್ಲಿಯೂ ಕನ್ನಡಾಭಿಮಾನ ತುಂಬಿ ತುಳುಕುತ್ತಿರುವಾಗ ಅದನ್ನು ಯಕಶ್ಚಿತ್ ವೆಬ್‍ಪುಟದಲ್ಲಿ ಹಾಕುವುದೇಕೆ ಎಂಬ ನಿಲುವಿಗೆ ನಾಯ್ಡುಗಾರು ಬಂದಿರಬೇಕು. ಅವರು ಹೇಗೇ ಇದ್ದರೂ ಏನೇ ಮಾಡಿದರೂ ಹೈಕಮಾಂಡ್ ಆಣತಿಯಂತೆ ಪ್ರತಿ ಬಾರಿಯೂ ಅವರನ್ನು ರಾಜ್ಯಸಭೆಗೆ ಕಳುಹಿಸಿ ಕೃತಾರ್ಥರಾಗುತ್ತಿಲ್ಲವೇ.

Testing

Testing

Thursday, December 26, 2013

ಅವಿವೇಕತನದ ಅಡಕತ್ತರಿಯಲ್ಲಿ ಅಡಕೆ!



ಕನ್ನಡಪ್ರಭ ಪತ್ರಿಕೆಯಲ್ಲಿ ಮೂಡಿ ಬಂದಿರುವ ನನ್ನ ಅಂಕಣ ತಾರೀಕು ಡಿಸೆಂಬರ್ ೧೭-೨೦೧೩

ಕೇಂದ್ರ ಸರ್ಕಾರವು ಅಡಿಕೆ ಬೆಳೆಯನ್ನು ನಿಷೇಧಿಸುವ ಕುರಿತು  ಪ್ರಸ್ತಾವನೆಯನ್ನು ಸಲ್ಲಿಸಿದೆಯೆಂಬ ಸುದ್ಧಿಯು ಅಡಿಕೆಯ ಮೇಲೆ ಅವಲಂಬಿತವಾಗಿರುವ ಜನರನ್ನು ಆತಂಕಕ್ಕೆ ದೂಡಿದೆ. ನೂರಾರು  ವರ್ಷಗಳಿಂದ ಜನರ ಬದುಕಿನ ಅವಿಭಾಜ್ಯ ಅಂಗ ಹಾಗೂ ಬದುಕಿನ ಆಸರೆಯೂ ಆಗಿರುವ  ಅಡಿಕೆಯನ್ನು ನಿಷೇಧಿಸಲು  ಹೊರಡುವುದು ಅತ್ಯಂತ ಅವಿವೇಕದ ಹಾಗೂ ದುಡುಕಿನ ನಿರ್ಧಾರವಾಗಬಲ್ಲದು.  ಇದರ ಹಿಂದೆ ಯಾವುದೋ ಕಾಣದ ಕೈಗಳ ಕೈವಾಡವಿದ್ದಂತಿದೆ ಎಂದು ಜನರು ಅನುಮಾನಿಸುವಂತಾಗಿದೆ. 

ಅಡಿಕೆಯು ಇಂದು ನಿನ್ನೆಯದಲ್ಲ, ನೂರಾರು ವರ್ಷಗಳಿಂದ ಜನರ ಜೀವನದಲ್ಲಿ ಹಾಸು ಹೊಕ್ಕಿರುವ ವಸ್ತುಗಳಲ್ಲಿ ಅಡಿಕೆಯೂ ಒಂದು ಎಂಬುದನ್ನು ನಿಸ್ಸಂದೇಹವಾಗಿ ಹೇಳಬಹುದು. ಹಿಂದೂಗಳಲ್ಲಿ ಯಾವ ಪೂಜಾಕಾರ್ಯವೂ ಸಹ ಎಲೆಯಡಿಕೆಯಿಲ್ಲದೆ  ಪೂರ್ಣವಾಗುವುದಿಲ್ಲ. ' ಆವವನಾದಡೇನು, ಶ್ರೀ ಶಿವಲಿಂಗ ದೇವರು ಅಂಗದ ಮೇಲೆ ಉಳ್ಳವರ ಬಾಯ ತಾಂಬೂಲ ಮೆಲುವೆನು' ಎಂದು ಬಸವಣ್ಣನವರು ಸುಮಾರು ಸಾವಿರ ವರ್ಷಗಳ ಹಿಂದೆ  ತಮ್ಮ ವಚನಗಳಲ್ಲಿ  ಬಳಸಿರುವುದನ್ನು ಕಾಣಬಹುದು. ಕುವೆಂಪುರವರ ಮಹಾ ಕಾದಂಬರಿಗಳಲ್ಲಿ ಎಲೆಯಡಿಕೆ ಮತ್ತು ಅಡಿಕೆ ತೋಟಗಳು ಒಂದರ್ಥದಲ್ಲಿ  ಪಾತ್ರಗಳೇ ಆಗಿಹೋಗಿವೆ.  ಕುವೆಂಪುರವರು ತಮ್ಮ ಒಂದು ಕವನ ಸಂಕಲನವನ್ನು  'ಕದರಡಕೆ' ಎಂದೇ ಹೆಸರಿದ್ದಾರೆ. ಎಲೆಯಡಿಕೆಯನ್ನು ಕೊಡುವುದು ಶುಭಸೂಚನೆ, ಗೌರವದ ಸಂಕೇತವಾಗಿ ಉಳಿದುಕೊಂಡಿದೆ.  ಇಂದಿಗೂ ಕೆಲವುಕಡೆಗಳಲ್ಲಿ ಎಲೆಯಡಿಕೆ ಬದಲಾಯಿಸಿಕೊಂಡು ಮಾಡಿಕೊಳ್ಳುವ ಒಪ್ಪಂದಕ್ಕೆ ಯಾವ ಕಾಗದ ಪತ್ರಕ್ಕೂ ಇಲ್ಲದಕ್ಕಿಂತ ಹೆಚ್ಚಿನ ಬೆಲೆಯಿದೆ. ಹೀಗೆ ಜನಸಾಮಾನ್ಯರ ಬದುಕಿನಲ್ಲಿ,ಸಂಪ್ರದಾಯಗಳಲ್ಲಿ, ಜನಪದದಲ್ಲಿ  ಅಡಿಕೆಯು ವಿಶಿಷ್ಟವಾದ ಸ್ಥಾನವನ್ನು ಪಡೆದುಕೊಂಡಿದೆ

ಇನ್ನು ವ್ಯಾವಹಾರಿಕವಾಗಿ ನೋಡುವುದಾದರೆ  ಸುಮಾರು ಆರು ಲಕ್ಷ ಎಕರೆಗಳಲ್ಲಿ ಅಡಿಕೆಯನ್ನು ಬೆಳೆಯಲಾಗುತ್ತದೆ. ಇದನ್ನೇ ನೆಚ್ಚಿಕೊಂಡು ಲಕ್ಷಾಂತರ ರೈತ ಕುಟುಂಬಗಳಿವೆ. ಶಿವಮೊಗ್ಗದ ಆರ್ಥಿಕತೆಯ ಬೆನ್ನೆಲುಬಾಗಿರುವ ಇಲ್ಲಿಯ ಅಡಿಕೆ ಮಂಡಿಗಳು ಇಡೀ ಜಗತ್ತಿನಲ್ಲಿಯೇ ಅತಿ ದೊಡ್ಡದಾದದ್ದು. ವಿಶ್ವದ ಬೇರೆಡೆಯೆಲ್ಲಿಯೂ ಹೀಗೆ ಅಡಿಕೆಯ ವಹಿವಾಟು ಒಂದೇ ಜಾಗದಲ್ಲಿ ನಡೆಯುವ ನಿದರ್ಶನಗಳೇ ಇಲ್ಲ. ಐನೂರಕ್ಕೂ ಹೆಚ್ಚಿನ ಮಂಡಿಗಳಿದ್ದು ಸಾವಿರಾರು ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತವೆ. ಇಲ್ಲಿನ ಮಂಡಿಗಳು ಬರೇ ಸೆಸ್ ರೂಪದಲ್ಲಿ ಸರ್ಕಾರಕ್ಕೆ ಕಟ್ಟುವ ಹಣವೇ ವಾರ್ಷಿಕ ಸುಮಾರು ಹದಿನೈದು ಕೋಟಿಯಷ್ಟಿದೆ. ಇಲ್ಲಿ  ಸುಮಾರು ಒಂದೂವರೆ ಸಾವಿರ ಜನಗಳಿಗೆ ನೇರ ಉದ್ಯೋಗವಿದ್ದು ಇನ್ನು  ಮಂಡಿಗಳಲ್ಲಿ ಮೂಟೆ ಹೊರುವ, ಅಡಿಕೆ ಆರಿಸುವ, ಸಾಗಾಟ ಮಾಡುವ ಸಾವಿರಾರು ಕಾರ್ಮಿಕರಿದ್ದಾರೆ, ಅವರ ಕುಟುಂಬಗಳಿವೆ. ಇನ್ನು ಅಡಿಕೆ ಕೊಯ್ಲು ಮಾಡುವ, ಉದುರು ಮಾಡುವ ಸುಲಿಯುವ, ಬೇಯಿಸುವ, ಒಣಗಿಸುವ, ಸಂಸ್ಕರಣೆ ಮಾಡುವ ಕೆಲಸದಲ್ಲಿ ತೊಡಗುವವರ ಸಂಖ್ಯೆಯೂ ತುಂಬಾ ದೊಡ್ಡದಿದೆ. ಬೆಳೆಯುವರಿಂದ ಹಿಡಿದು ಸಂಸ್ಕರಿಸಿ ಅಂಗಡಿಗಳಲ್ಲಿ ಮಾರುವವರೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಜನರು ಇದರಿಂದಲೇ ಬದುಕುತ್ತಿದ್ದಾರೆ


ಆಯುರ್ವೇದದಲ್ಲಿ ಅಡಿಕೆಯ ಔಷದೀಯ ಗುಣಗಳನ್ನು ಗುರುತಿಸಿದ್ದು ಜ್ವರ, ಅಜೀರ್ಣ, ಕೀಲು ನೋವು, ಗಂಟಲು ಬೇನೆ  ಮೊದಲಾದ ತೊಂದರೆಗಳಿಗೆ ಅಡಿಕೆಯನ್ನು ಬಳಸಿ ಔಷಧವನ್ನು ತಯಾರಿಸಲಾಗುತ್ತದೆ. ಆದರೆ ಅಡಿಕೆಯು ಹಾನಿಕಾರಕ ಎಂಬುದಕ್ಕೆ  ಯಾವುದೇ ಸರಿಯಾದ ಪುರಾವೆಯಿಲ್ಲದೆ ಕೇಂದ್ರ ಸರ್ಕಾರದ ಏಕಾಎಕಿ ನಿರ್ಧಾರ ಇದನ್ನೇ ನಂಬಿಕೊಂಡಿರುವವರನ್ನು ಕಂಗಾಲಾಗಿಸಿದೆ. ಅದರಲ್ಲೂ ವರ್ಷ ಅಡಿಕೆಗೆ ಇದುವರೆಗೂ ಬಂದಿರದ ಅತಿ ಹೆಚ್ಚು ಬೆಲೆ ಬಂದಿದೆ. ಕ್ವಿಂಟಾಲಿಗೆ ಸುಮಾರು ಮೂವತ್ತೈದು ಸಾವಿರದಷ್ಟು ಧಾರಣೆ ಕಂಡಿದ್ದು ದಾಖಲೆಯ ಬೆಲೆ ಇದಾಗಿದೆ ಮತ್ತು ಧಾರಣೆಯು ಸ್ಥಿರವಾಗಿ ನಿಂತಿರುವುದು ಗುಟ್ಕಾ ನಿಷೇದದ ನಡುವೆಯೂ  ಸಹ ರೈತರ ಸಂತಸಕ್ಕೆ ಕಾರಣವಾಗಿತ್ತು. ಆದರೆ ಇಂತಹ ಸಮಯದಲ್ಲಿ,ಕೇಂದ್ರ ಸರ್ಕಾರ ಹೀಗೆ ನಡೆದುಕೊಳ್ಳಲು ಮುಂದಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದರ ಹಿಂದೆ ಸಿಗರೇಟು ಕಂಪನಿಗಳ ಲಾಬಿ ಕೆಲಸ ಮಾಡುತ್ತಿದೆ ಅನ್ನುವ ಬಗ್ಗೆ ಚರ್ಚೆಗಳಾಗುತ್ತಿವೆಅಡಿಕೆ ಮತ್ತು ಅದು ಒಳಗೊಂಡಿರುವ ಸ್ಥಳೀಯ ಸಂಸ್ಕೃತಿಯನ್ನು ಸರಿಯಾಗಿ ತಿಳಿದುಕೊಳ್ಳದೆ ದಿಲ್ಲಿಯ ನಾಲ್ಕು ಗೋಡೆಗಳ ನಡುವೆ ಕುಳಿತು ನಿರ್ಧಾರವನ್ನು ತೆಗೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಅನ್ನುವುದೂ ದೊಡ್ಡ ಪ್ರಶ್ನೆಯಾಗಿ ಕಾಡುತ್ತದೆಹೀಗೆ ಒಂದು ಪ್ರಸ್ತಾವನೆಯನ್ನು ಕೋರ್ಟಿಗೆ  ಕಳುಹಿಸುವಾಗ ಅಡಿಕೆ ಬೆಳೆಯುವ ಪ್ರದೇಶಗಳ ಜನಪ್ರತಿನಿಧಿಗಳ ಅಭಿಪ್ರಾಯವನ್ನೂ ಕೇಳದೆ ತಮ್ಮ ಮೂಗಿನ ಮೂರಕ್ಕೆ ತೀರ್ಮಾನಿಸುವುದು  ಒಂದು ಸರಿಯಾದ ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ಸರ್ಕಾರಕ್ಕೆ ಶೋಭೆ ತರುವಂತದಲ್ಲ. ದೇಶದ ಒಂದು ಭಾಗದ ಲಕ್ಷಾಂತರ ಜನರ ಸಂಸ್ಕೃತಿ ಮತ್ತು ಆರ್ಥಿಕತೆಗೆ ಭಾರೀ ಹೊಡೆತ ಕೊಡಬಲ್ಲ ನಡೆಯನ್ನು ನೋಡಿದಾಗ, ಮತ್ತದೇ ಅತಿ ಕೇಂದ್ರೀಕೃತ ಆಡಳಿತ ವ್ಯವಸ್ಥೆಗಳು ಇಂತಹ ತಪ್ಪು ನಿರ್ಧಾರಗಳಿಗೆ ಪದೇ ಪದೇ  ಕಾರಣವಾಗುತ್ತದೆ ಎಂದೇ ಭಾಸವಾಗುತ್ತದೆ.  ಅಡಿಕೆ ನಿಷೇಧದ ನಿರ್ಧಾರದ ಸರಿ ತಪ್ಪುಗಳ ಪ್ರಶ್ನೆ ಒಂದೆಡೆಯಾದರೆ, ಸ್ಥಳೀಯವಾದ ಇಂತಹ ನಿರ್ಧಾರವನ್ನು ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೇ ತಾರದೆ ಯಾರೋ ಒಬ್ಬರು ನಿರ್ಧರಿಸಬಹುದಾದ ಇಂತಹ ಪ್ರಜಾತಂತ್ರ ವಿರೋಧಿ ಆಡಳಿತ ವ್ಯವಸ್ಥೆಯ ಅಂಕುಡೊಂಕುಗಳನ್ನೇ ನಾವು ಪ್ರಶ್ನೆ ಮಾಡಬೇಕಿದೆ

ಕರ್ನಾಟಕದ ಸರ್ಕಾರವು ದೆಹಲಿಯಲ್ಲಿ ತಮ್ಮದೇ  ಸರ್ಕಾರವಿರುವುದರಿಂದ ಹೈಕಮಾಂಡಿಗೆ ಹೇಗಪ್ಪ ಹೇಳುವುದು, ಸುಖಾ ಸುಮ್ಮನೆ  ಹೈಕಮಾಂಡ್ ಅವಕೃಪೆಗೆ ಒಳಗಾಗಬೇಕಲ್ಲ ಅಂತ ಕೈಕಟ್ಟಿ ಕೂರದೇ ವಿಷಯದಲ್ಲಿ ಕನ್ನಡ ನಾಡಿನ ಅಡಿಕೆ ರೈತರ ಹಿತ ಕಾಯಲು ಏನಾಗಬೇಕೋ ಅದೆಲ್ಲವನ್ನು ಮಾಡಬೇಕು. ವಿಷಯದಲ್ಲಿ ಪಕ್ಷಾತೀತವಾಗಿ ದನಿ ಎತ್ತುವುದರ ಮೂಲಕ ಕರ್ನಾಟಕದ ವಿಷಯ ಬಂದಾಗ ಕರ್ನಾಟಕ ಕೇಂದ್ರಿತ ರಾಜಕಾರಣ ಮಾಡುವ ಸಂಪ್ರದಾಯಕ್ಕೆ ಎಲ್ಲ ಪಕ್ಷಗಳು ಮುಂದಾಗಲಿ.