Thursday, September 26, 2013

ಭ್ರಷ್ಟಾಚಾರಕ್ಕೆ ಬೀದಿ ಹೋರಾಟವೊಂದರಲ್ಲೇ ಪರಿಹಾರ ಸಿಗದು !

 (ತಕ್ಷಶಿಲಾ ಬ್ಲಾಗಿನಲ್ಲಿ ಅನುವಾದಿಸಿ ಪ್ರಕಟಿಸಿರುವ ಬರಹ)

ಮೂಲ ಅಂಕಣ ಬರೆದವರು: ರೋಹಿತ್ ಪ್ರಧಾನ್
ಅನುವಾದಕರು: ಗಿರೀಶ್ ಕಾರ್ಗದ್ದೆ 

ಅಣ್ಣಾ ಹಜಾರೆ ನೇತೃತ್ವದ ಚಳುವಳಿ ಬಿಸಿಯಾಗಿದ್ದ ದಿನದಲ್ಲಿ ಈ ಇಂಗ್ಲಿಶಿನಲ್ಲಿ  ಈ ಅಂಕಣ ಬಂದಿತ್ತು.  ಸಂವಿಧಾನ,ಸಂಸತ್ತು ಮೀರಿದ ಬೀದಿ ಹೋರಾಟಗಳಿಂದಲೇ ಭ್ರಷ್ಟಾಚಾರಕ್ಕೆ ಪರಿಹಾರ ರೂಪಿಸಲು ಸಾಧ್ಯ ಅನ್ನುವ ಬಿಸಿ ರಕ್ತದ ಆಲೋಚನೆಗಳಿಂದ ಯಾವ ಪರಿಹಾರವೂ ಸಾಧ್ಯವಿಲ್ಲ ಅನ್ನುವ ಈ ಅಂಕಣ ಇಂದಿಗೂ ಪ್ರಸ್ತುತ.   – ಕನ್ನಡ ಅಂಕಣಗಳ ಸಂಪಾದಕರು

 
ಅಣ್ಣಾ ಹಜಾರೆ ಮತ್ತವರ ಬೆಂಬಲಿಗರಿಂದ ನಡೆಸಲ್ಪಟ್ಟ ಭ್ರಷ್ಟಾಚಾರ ವಿರೋಧಿ ಚಳುವಳಿ ವಿರುದ್ಧ ಯುಪಿಎ ಸರ್ಕಾರವು ಎದುರಿಸಿದ ಬಹಿರಂಗ ಸೋಲನ್ನು ಅರಗಿಸಿಕೊಳ್ಳುವುದು ಕಷ್ಟ. ತಾನು ಮಂಡಿಸಿರುವ ರೀತಿಯಲ್ಲೇ ಲೋಕ್‍ಪಾಲ್ ಕಾಯಿದೆ ಜಾರಿಗೊಳ್ಳಬೇಕು ಮತ್ತು ಲೋಕಪಾಲರಿಗೆ ಯಾವುದೇ ರೀತಿಯ ಅಡ್ಡಿ ಆತಂಕಗಳಿಲ್ಲದ ಪರಮೋಚ್ಚ ಅಧಿಕಾರವಿರಬೇಕೆಂದು ಹಟಹಿಡಿದು ಕೂರುವುದರ ಮೂಲಕ ಅಣ್ಣಾ ಮತ್ತವರ ತಂಡ ಪಾರ್ಲಿಮೆಂಟಿನ ಪರಮಾಧಿಕರವನ್ನೇ ಕಿತ್ತುಕೊಳ್ಳಲು ಹೊರಟಿದೆ ಎಂದು ಯುಪಿಎ ಸರ್ಕಾರದ ಮಂತ್ರಿಗಳು ಆಪಾಧಿಸಿದ್ದಾರೆ. ಆದರೆ ಇದೇ ಸರ್ಕಾರದಲ್ಲಿ ’ರಾಷ್ಟ್ರೀಯ ಸಲಹಾ ಮಂಡಲಿ’
(ಎನ್‍ಎಸಿ) ಯ ಮಾತಿಗೆ ಹೆಚ್ಚಿನ ಕಿಮ್ಮತ್ತಿದೆ, ಹಾಗೆ ನೋಡಿದಲ್ಲಿ ಎನ್ಎಸಿಯಲ್ಲಿಯೂ ಸಹ ಯಾರೂ ಚುನಾಯಿತ ಪ್ರತಿನಿಧಿಗಳಿಲ್ಲ. ಖುದ್ದು ಸೋನಿಯಾ ಗಾಂಧಿಯೇ ಎನ್‍ಎಸಿಯ ಬೆನ್ನಿಗಿದ್ದಾರೆಂಬ ಕಾರಣದಿಂದಲೇ ಎನ್‍ಎಸಿಯು ಸರ್ಕಾರಗಳ ಪಾಲಿಸಿ ರಚನೆಯಲ್ಲಿಯೂ ಸಹ ಸಾಕಷ್ಟು ಪ್ರಭಾವ ಬೀರುತ್ತದೆ. ಉದ್ಯೋಗ ಖಾತ್ರಿ, ಆರೋಗ್ಯ ಸುಧಾರಣೆ ಮತ್ತಿತರ ಯೋಜನೆಗಳ ಹಿಂದೆ ಎನ್‍ಎಸಿಯ ಕೈಗಳು ಕೆಲಸ ಮಾಡಿವೆ, ಇದೂ ಸಹ ಒಂದು ರೀತಿಯಲ್ಲಿ ಯುಪಿಎ ಸರ್ಕಾರದ ಮತ್ತು ಅದರ ಪರಮ ನಾಯಕನಾದ ಪ್ರಧಾನಿ ಮನಮೋಹನ್ ಸಿಂಗರ ಸಂವಿಧಾನದತ್ತವಾದ ಅಧಿಕಾರವನ್ನು ಹತ್ತಿಕ್ಕುವ ಸ್ಪಷ್ಟ ಯತ್ನವಾಗಿದೆ.

ಹಾಗೆಂದು ಭ್ರಷ್ಟಚಾರದ ವಿಷಯವನ್ನು ಸುಲಭವಾಗಿ ತಳ್ಳಿ ಹಾಕುವಂತಿಲ್ಲ. ಇತ್ತೀಚಿನ ದಿನಗಳಲ್ಲಂತೂ ಪತ್ರಿಕೆಯ ಮುಖಪುಟದಲ್ಲೆಲ್ಲಾ ಭ್ರಷ್ಟಾಚಾರದ ಸುದ್ದಿಗಳೇ ರಾರಾಜಿಸುತ್ತಿವೆ. ಈ ದೇಶದ ಜನ ಸಾಮಾನ್ಯನಂತೂ ಸ್ಥಳೀಯ ಪೋಲೀಸರು, ಮುನಿಸಿಪಾಲಿಟಿಗಳ ತಡೆಯಿಲ್ಲದ ಸುಲಿಗೆಗಳಿಂದಲೂ, ನಿಧಾನಗತಿಯ ನ್ಯಾಯದಾನ ವ್ಯವಸ್ಥೆಗಳಿಂದಲೂ ಅಕ್ಷರಶಃ ರೋಸಿ ಹೋಗಿದ್ದಾನೆ. ಕೆಲವು ಮುಖ್ಯ ಪ್ರಕರಣಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ಸುರೇಶ್ ಕಲ್ಮಾಡಿ, ಎ.ರಾಜಾ ನಂತಹ ಕುಳಗಳು ಈ ಜೈಲಿನಲ್ಲಿ ಕಾಲ ಕಳೆದಿದ್ದು ನಿಜವಾದರೂ ಸಹ ನಮ್ಮ ದೇಶದ ಇತಿಹಾಸದ ಆಧಾರದ ಮೇಲೆ ಹೇಳುವುದಾದರೆ ಇವರಿಗೆ ನ್ಯಾಯಾಲಯದಲ್ಲಾಗಲೀ ಅಥವಾ ಜನತಾ ನ್ಯಾಯಾಲಯದಲ್ಲಾಗಲೀ ಶಿಕ್ಷೆ ಸಿಕ್ಕೇ ಸಿಗುತ್ತದೆಂಬ ಭರವಸೆಯಿಲ್ಲ.

ಹಾಗಾಗಿಯೇ ಅಣ್ಣಾ ಹಜಾರೆ ಮತ್ತು ಅವರ ಬೆಂಬಲಿಗರು ಹುಟ್ಟು ಹಾಕಿರುವ ಭ್ರಷ್ಟಾಚಾರದ ಬಗೆಗಿನ ರಾಷ್ಟ್ರೀಯ ಚರ್ಚೆ ಹಾಗೂ ನಿಸ್ವಾರ್ಥ ಪ್ರಯತ್ನವನ್ನು ಬೆರಗುಗಣ್ಣಿನಿಂದ ಜನರು ನೋಡುತ್ತಿದ್ದಾರೆ ಮತ್ತು ಆಕರ್ಷಿತರಾಗಿದ್ದಾರೆ. ಕಲುಷಿತ ರಾಜಕೀಯ ವ್ಯವಸ್ಥೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಜನಸಾಮಾನ್ಯನ ಸಿಟ್ಟು ಆಕ್ರೋಶಗಳನ್ನು ಒಂದು ಶಕ್ತಿಯಾಗಿ ಹೊರಹೊಮ್ಮುವಂತೆ ಮಾಡಿದ ಗೌರವ ಖಂಡಿತವಾಗಿಯೂ ಅಣ್ಣಾ ಹಜಾರೆಗೆ ಸಲ್ಲುತ್ತದೆ. ಅವರ ವೈಯುಕ್ತಿಕ ಪ್ರಾಮಾಣಿಕತೆಯನ್ನು ಯಾರೂ ಅನುಮಾನಿಸುವಂತಿಲ್ಲ ಹಾಗೂ ಅವರು ಯಾವುದೇ ರಾಜಕೀಯ ಪಕ್ಷ ಕಟ್ಟಲು ಹೊರಟಿಲ್ಲ ಎಂಬುದು ಸುಸ್ಪಷ್ಟ. ಹಜಾರೆಯವರ ಆಂದೋಲನವನ್ನು ಸರ್ಕಾರವು ನಿಭಾಯಿಸಿದ ರೀತಿ ತೀರಾ ಕೆಳಮಟ್ಟದಲ್ಲಿತ್ತು, ಕಾಂಗ್ರೆಸ್ಸಿನ ಕೆಲವು ಹಿರಿಯ ನಾಯಕರ ಮಾತುಗಳಂತೂ ಅತ್ಯಂತ ಕಟುವಾಗಿದ್ದವು ಹಾಗೂ ವೈಯುಕ್ತಿಕ ಮಟ್ಟದ ನಿಂದನೆಗಳಾಗಿದ್ದವು. ಸಮಾಜದ ಎಲ್ಲಾ ವರ್ಗದ ಜನರಿಂದಲೂ ಬೆಂಬಲಗಳಿಸಿಕೊಂಡ ಜನಪ್ರಿಯ ಚಳುವಳಿಯೊಂದು ಸರ್ಕಾರದ ಕೆಲವು ಅನಗತ್ಯ ನಡೆಗಳಿಂದಲೇ ಪ್ರಚೋಧನೆಗೊಂಡು ದೊಡ್ಡದಾಯಿತು. ಒಂದರ್ಥದಲ್ಲಿ, ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಖುದ್ದು ಸರ್ಕಾರವೇ ಮಾಡಿತು.

ಹಜಾರೆಯವರು ಅನುಸರಿಸುತ್ತಿರುವ ಹಾದಿಮಾತ್ರ ಇಂದಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಉಳಿಕೊಂಡಿರುವ ಜನರನ್ನು ಒಮ್ಮೆ ನಿಂತು ಯೋಚಿಸುವಂತೆ ಮಾಡಿದೆ. ಹಲವು ಟೀಕಾಕಾರರು ಒಟ್ಟಾರೆಯಾಗಿ ಅಭಿಪ್ರಾಯ ಪಟ್ಟಿರುವಂತೆ ಹಜಾರೆ ತಂಡದ ಜನ ಲೋಕಪಾಲದಲ್ಲಿಯೂ ಸಹ ಲೋಪದೋಷಗಳಿದ್ದು ಭ್ರಷ್ಟಾಚಾರವೆಂಬ ವ್ಯಾಧಿಗೆ ರಾಮಬಾಣವೇನಲ್ಲ. ಅದಲ್ಲದೆ ಇಂತದೊಂದು ವ್ಯವಸ್ಥೆಯು ಸಾಂವಿಧಾನಿಕವಾಗಿ ಹಲವು ಸ್ಥಂಭಗಳಲ್ಲಾಗಿರುವ ಅಧಿಕಾರದ ಹಂಚಿಕೆಯನ್ನೇ ಮೀರುವ ಲಕ್ಷಣಗಳಿವೆ. ಯಾವುದೇ ಒಂದು ಸಂಸ್ಥೆಯು, ಅದಕ್ಕೆ ಸಂವಿಧಾನಿಕವಾಗಿ ಎಷ್ಟೆ ಪರಮಾಧಿಕಾರವನ್ನು ನೀಡಿದರೂ ಸಹ ಭಾರತೀಯ ಸಮಾಜದ ಹಲವು ಸ್ತರಗಳಲ್ಲಿ ವ್ಯಾಪಕವಾಗಿ ಹಬ್ಬಿರುವ ಭ್ರಷ್ಟಚಾರವೆಂಬ ಪಿಡುಗನ್ನು ಏಕಾಂಗಿಯಾಗಿ ಗುಣಪಡಿಸಲಾರದು ಎಂಬುದನ್ನು ನಾವು ಅರಿಯಬೇಕು.ಹಜಾರೆಯವರ ಕಾಯಿದೆಯನ್ನು ಮರೆತು ಸರ್ಕಾರವು ರೂಪಿಸಿರುವ ಕಾಯಿದೆಯತ್ತ ಕಣ್ಣು ಹಾಯಿಸಿದರೆ ಅಲ್ಲಿಯೂ ಸಹ ವಿಪರೀತ ನೂನ್ಯತೆಗಳು ಕಂಡುಬರುತ್ತವೆ. ಅದೆಷ್ಟು ಅಪ್ರಬುದ್ಧವಾಗಿದೆಯೆಂದರೆ ತನ್ನ ಜವಾಬ್ದಾರಿಯನ್ನೂ ನಿಭಾಯಿಸಲಾಗದಷ್ಟು ಅಂಗಊನಗೊಂಡಿದೆ. ಇಲ್ಲಿರುವ ನಿಜವಾದ ಸಮಸ್ಯೆಯೇನಂದರೆ ಹಜಾರೆಯವರು ತಮ್ಮ ಅಸಂವಿಧಾನಿಕವಾದ ವಿಧಾನಗಳಿಂದ ತಮ್ಮ ಕಾನೂನನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿರುವುದು ಹಾಗೂ ಹಾಗೆ ಮಾಡಿ ಜಯಗಳಿಸಬಹುದು ಎಂದು ದೃಡವಾಗಿ ನಂಬಿರುವುದು. ವ್ಯವಸ್ಥೆಯನ್ನು ಸುಧಾರಿಸುವ ಪ್ರಯತ್ನ ಮಾಡದೇ ಜನರಲ್ಲಿ ಮಡುಗಟ್ಟಿರುವ ಆಕ್ರೋಶವನ್ನು ಬಳಸಿಕೊಂಡು ಒಂದು ರಾಜಕೀಯ ವ್ಯವಸ್ಥೆಯನ್ನೇ ಹೈಜಾಕ್ ಮಾಡುವ ಯತ್ನದಲ್ಲಿದ್ದಾರೆ. ನಿರ್ದಿಷ್ಟವಾಗಿ ಹೇಳುವುದಾದರೆ ಪದೇ ಪದೇ ಉಪವಾಸ ಕೂರುವುದು, ಆ ಮೂಲಕ ಸರ್ಕಾರವನ್ನು ಬೆದರಿಸುವುದು ಸರಿಯಲ್ಲ. ಹಜಾರೆ ತನ್ನನ್ನು ಒಬ್ಬ ಗಾಂಧಿವಾದಿಯೆಂದು ಕರೆದುಕೊಂಡಿದ್ದಾರೆ ಹಾಗೂ ಗಾಂಧೀಜಿಯವರೂ ಸಹ ಹಲವು ಬಾರಿ ತಮ್ಮ ಉಪವಾಸ ಸತ್ಯಾಗ್ರಹಗಳ ನೈತಿಕ ಬಲವನ್ನು ಬಹಳ ಬುದ್ದಿವಂತಿಕೆಯಿಂದ ಬಳಸಿಕೊಂಡಿದ್ದರು. ಇಂತಹ ಬಲವಂತದ ಒತ್ತಾಯಗಳನ್ನು ಅವು ನೈತಿಕವಾಗಲೀ ಅಥವಾ ಮಿಲಿಟರಿ ರೂಪದಲ್ಲಾಗಲೀ ಒಂದು ಸಾಮ್ರಾಜ್ಯಶಾಹಿ ಸರ್ಕಾರದ ವಿರುದ್ಧ ಬಳಸುವುದಕ್ಕೂ ಮತ್ತು ಒಂದು ಪ್ರಜಾಪ್ರಭುತ್ವದ ನೆಲೆಯಲ್ಲಿ ಚುನಾಯಿತವಾಗಿರುವ ಒಂದು ಸರ್ಕಾರದ ವಿರುದ್ಧ ಬಳಕೆ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ. ಭಾವನಾತ್ಮಕವಾದ ಉದ್ದುದ್ದ ಭಾಷಣಗಳೇನೇ ಇದ್ದರೂ ಸಹ ಭಾರತವು ತುರ್ತು ಪರಿಸ್ಥಿತಿಯ ಕರಾಳದಿನಗಳಿಂದ ಬಹಳ ದೂರ ಸಾಗಿ ಬಂದಿದೆ. ಭಾರತವು ಒಂದು ಸಾಂವಿಧಾನಿಕ ಪ್ರಜಾಪ್ರಭುತ್ವವಾಗಿದ್ದು ಪ್ರತಿಯೊಬ್ಬ ನಾಗರೀಕನಿಗೂ ಸಹ ಪ್ರತಿಭಟಿಸುವ ಹಕ್ಕಿದೆ. ಇಲ್ಲಿನ ಪರಿಸ್ಥಿತಿ ಈಜಿಪ್ಟ್ ಅಥವಾ ಟ್ಯುನಿಶಿಯಾ ದೇಶಗಳಂತೆ ಖಂಡಿತವಾಗಿಯೂ ಇಲ್ಲ. ಈ ದೇಶಗಳಲ್ಲಿ ಚಳುವಳಿಯ ಬಗ್ಗೆ ಮಾತನಾಡುವುದು ಅಥವಾ ಅರಬ್ ಕ್ರಾಂತಿಯ ಪರ ಸಹಾನುಭೂತಿ ಹೊಂದಿರುವುದೂ ಸಹ ಅಪಾಯಕಾರಿ.

ಮುಂದುವರೆದು, ಇತ್ತೀಚಿನ ದಿನಗಳಲ್ಲಿ ’ನಾಗರೀಕ ಸಮಾಜ’ ಎಂಬ ಪದವು ಸಾಕಷ್ಟು ಚಲಾವಣೆಯಲ್ಲಿದೆ. ಹಾಗಾದರೆ ನಾಗರೀಕ ಸಮಾಜವೆಂದರೇನು? ಅದರ ಪ್ರತಿನಿಧಿಗಳಾರು? ಹಜಾರೆ ಮತ್ತವರ ಬೆಂಬಲಿಗರು ಈ ನಾಗರೀಕ ಸಮಾಜದ ಮೇಲೆ ಏಕಸ್ವಾಮ್ಯವನ್ನು ಸಾಧಿಸಲು ಪ್ರಯತ್ನಿಸಿದ್ದಾರೆ. ಅದರೆ ಕೇವಲ ಇವರು ಮಾತ್ರ ನಾಗರೀಕ ಸಮಾಜದ ಮುಖ ಅಥವಾ ಧನಿಗಳೇ? ಸಂಸದರು ಕಡೇಪಕ್ಷ ಚುನಾವಣೆಯ ಅಗ್ನಿಪರೀಕ್ಷೆಯನ್ನು ಹಾದು ಬರಬೇಕಿರುತ್ತದೆ. ಆದರೆ ತಾವೊಂದು ನೈತಿಕ ಶಕ್ತಿಯೆಂದು ಹೇಳಿಕೊಳ್ಳುವ ಇವರಿಗೆ ಅನಿವಾರ್ಯವಾಗಿ ಹೇಳುವವರಿಲ್ಲ, ಕೇಳುವವರೂ ಇಲ್ಲ. ಒಂದು ಆದರ್ಶ ಜಗತ್ತಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯೆಂದರೆ ವಿಭಿನ್ನ ಐಡಿಯಾಗಳು ಮತ್ತು ಪಾಲಿಸಿಗಳ ನಡುವಿನ ಹೋರಾಟವಾಗಿರುತ್ತದೆ. ನೈಜವಾಗಿ ಭ್ರಷ್ಟಾಚಾರ ವಿರೋಧಿ ಅಜೆಂಡಾವನ್ನಿಟ್ಟುಕೊಂಡು ಒಂದು ರಾಜಕೀಯ ಪಕ್ಷವನ್ನು ಹುಟ್ಟುಹಾಕಿ ಚುನಾವಣೆಯನ್ನು ಎದುರಿಸುವುದೇ ಹಜಾರೆಯವರ ಮುಂದಿನ ದಾರಿಯಾಗಿದೆ, ಆದರೆ ಇಂತಹ ನೆಲೆಯಲ್ಲಿ ಸ್ಪರ್ಧಿಸುವ ಪಕ್ಷವು ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಗಳಿಲ್ಲ ಏಕೆಂದರೆ ಇವರ ತಂಡ ಅಪಾರವಾಗಿ ನೆಚ್ಚಿಕೊಂಡಿರುವ ಮಧ್ಯಮ ವರ್ಗದ ಮತದಾರರು ಮನೆಗಳಿಂದ ಹೊರಬಂದು ಮತ ಚಲಾಯಿಸುವುದೂ ಅನುಮಾನವಿದೆ. ಭ್ರಷ್ಟಾಚಾರದ ವಿರುದ್ಧ ಎಷ್ಟೆಲ್ಲಾ ಹೋರಾಟಗಳಲ್ಲಿ ಭಾಗಿಯಾಗಿದ್ದರೂ ಸಹ ಈ ದೇಶದ ಬಹುಸಂಖ್ಯಾತರು ಭ್ರಷ್ಟತೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಅಷ್ಟರಲ್ಲೇ ಇದ್ದು ಇವರು ನೈಜವಾಗಿ ಯಥಾಸ್ಥಿತಿವಾದಿಗಳು. ದುರದೃಷ್ಟವಶಾತ್ ಈ ದೇಶದ ಪಾತಿನಿಧಿಕ ಪ್ರಜಾಪ್ರಭುತ್ವವು ಕೆಲಸ ಮಾಡುತ್ತಿರುವ ರೀತಿಯೇ ಹಾಗಿದೆ, ಅತ್ಯುತ್ತಮ ಐಡಿಯಾಗಳಿಗೆ ಹಾಗೂ ಅತ್ಯುತ್ಕ್ರಷ್ಟ ಪಾಲಿಸಿಗಳಿಗೆ ಇಲ್ಲಿ ಯಾವಾಗಲೂ ಬೆಂಬಲ ಸಿಗುತ್ತದೆ ಎಂದು ಹೇಳಲಾಗುವುದಿಲ್ಲ. ಒಂದು ವೇಳೆ ಭಾರತದ ಮಧ್ಯಮ ವರ್ಗ ಭ್ರಷ್ಟತೆಯ ಬಗ್ಗೆ ತಲೆ ಕೆಡಿಸಿಕೊಂಡಿದ್ದರೂ ಸಹ, ಈಗಿನ ಅಧಿಕಾರದ ದಳ್ಳಾಳಿಗಳು ತಮ್ಮ ಸುತ್ತಲೂ ಕಂದಕವನ್ನು ನಿರ್ಮಿಸಿಕೊಂಡಿರುವುದರಿಂದ ರಾಜಕೀಯ ವ್ಯವಸ್ಥೆಯೊಳಗೆ ಪ್ರವೇಶಿಸಿ ಅಲ್ಲಿ ಸುಧಾರಣೆ ತರುವುದು ದೂರದ ಮಾತು ಎಂಬ ಅಭಿಪ್ರಾಯ ಈ ಮಧ್ಯಮ ವರ್ಗದ ಜನರಲ್ಲಿದೆ. ಇದೊಂದು ಸಮಸ್ಯೆಯೇ ಆಗಿದ್ದು ಯಾವಾಗ ತಾನು ರಾಜಕೀಯ ವ್ಯವಸ್ಥೆಯಲ್ಲಿ ಸಿಲುಕಿ ಹಾಕಿಕೊಂಡಿದ್ದೇನೆ ಎಂದು ಭಾಸವಾಗುತ್ತದೋ ಆಗೆಲ್ಲಾ ಈ ವರ್ಗವು ಅಸಂವಿಧಾನಿಕ ವಿಧಾನಗಳ ಮೊರೆ ಹೋಗುತ್ತಾರೆ. ಹಜಾರೆಯವರ ಚಳುವಳಿಗೆ ಸಮಾಜದ ಕೆಲವು ವರ್ಗಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿರುವುದೂ ಸಹ ಇದೇ ಕಾರಣದಿಂದಾಗಿ. ರಾಜಕೀಯ ವ್ಯವಸ್ಥೆಯೂ ಸಹ ಬದಲಾವಣೆಗೆ ನಿಜವಾಗಿಯೂ ಸ್ಪಂಧಿಸುವ ಒಂದು ಅಂಗ ಎಂಬ ನಂಬಿಕೆಯನ್ನು ಜನರಲ್ಲಿ ಹೇಗೆ ಮರಳಿ ತರಬಹುದು ಎಂಬ ಕುರಿತು ಪ್ರತಿಯೊಬ್ಬ ಭಾರತೀಯನೂ ಸಹ ಯೋಚಿಸಬೇಕಿದೆ.

ಚುನಾವಣೆಯಲ್ಲಿ ಸ್ಪರ್ಧಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಲಿಸಿಗಳ ಮೇಲೆ ಪ್ರಭಾವ ಬೀರಲು ಇರುವ ಎಕೈಕ ದಾರಿಯೇನೂ ಅಲ್ಲ. ಹಜಾರೆಯವರ ವಿರುದ್ಧ ಇರುವ ದೊಡ್ಡ ಆಪಾದನೆ ಏನೆಂದರೆ ಅವರು ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ವಿವಿಧ ಸ್ಥಂಭಗಳನ್ನೇ ಅನವಶ್ಯಕ ಎಂದು ತಳ್ಳಿಹಾಕುತ್ತಿದ್ದಾರೆನ್ನುವುದು. ಹಾಗಿದ್ದರೂ ಸಹ ದೇಶದ ಸಾಮಾನ್ಯ ನಾಗರೀಕರು ದೇಶದ ಪ್ರಾತಿನಿಧಿಕ ಅಧಿಕಾರ ಕೇಂದ್ರಗಳೊಂದಿಗೆ ಹೇಗೆ ತೊಡಗಿಕೊಳ್ಳುವಂತೆ ಮಾಡಬಹುದೆಂಬುದನ್ನು ಕಂಡುಕೊಳ್ಳಬೇಕಿದೆ. ಮಾಹಿತಿ ಹಕ್ಕು ಕಾಯಿದೆಯನ್ನು ಇನ್ನಷ್ಟು ಬಲಗೊಳಿಸುವುದು, ಸಂಸತ್ ಕಮಿಟಿಗಳ ಬಹಿರಂಗ ಸಭೆ ನಡೆಸುವುದು, ಕಾನೂನು ಮತ್ತು ಪಾಲಿಸಿಗಳನ್ನು ರಚಿಸುವಾಗ ಸಾರ್ವಜನಿಕರೂ ಸಹ ಪಾಲ್ಗೊಳ್ಳುವಂತೆ ಮಾಡುವುದು ಮತ್ತಿತರ ಸಾಂಸ್ಥಿಕ ದಾರಿಗಳನ್ನು ಹುಡುಕಬೇಕಿದೆ. ಹಜಾರೆಯವರ ಆಂದೋಲನದ ಭಾಗಶಃ ಗೆಲುವು ಭಾರತೀಯ ರಾಜಕೀಯ ವ್ಯವಸ್ಥೆಯನ್ನು ಎಚ್ಚರಿಸುವ ಯುದ್ಧಘೋಷವಾಗಬೇಕು. ಮೊದಲಿಗೆ ರಾಜಕೀಯ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ನಂಬಿಕೆ ಕಳೆದುಕೊಂಡಿರುವವರನ್ನು ಮತ್ತೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. ಹಾಗಂದ ಮಾತ್ರಕ್ಕೆ ಸರ್ಕಾರವು ಅವರ ಮುಂದೆ ಮಂಡಿಯೂರಿ ಕೂರಬೇಕು ಅಥವಾ ಚುನಾಯಿತ ಪಾರ್ಲಿಮೆಂಟಿನ ಮೇಲೆ ಸವಾರಿ ಮಾಡಲು ಬಿಡಬೇಕು ಎಂದರ್ಥವಲ್ಲ. ಹೀಗೆ ಒಪ್ಪಿಕೊಳ್ಳುವುದರ ಆಡ್ಡ ಪರಿಣಾಮಗಳು ಹಲವಾರಿವೆ. ಇದೇ ಸಂದರ್ಭದಲ್ಲಿ ಸರ್ಕಾರವನ್ನು ಹೈಜಾಕ್ ಮಾಡುವಂತಹ ಅಸಂವಿಧಾನಿಕ ಕ್ರಮಗಳನ್ನು ಹೊರತು ಪಡಿಸಿದರೆ ಬೇರೆ ದಾರಿಯೇ ಇಲ್ಲವೆಂದು ಭಾವಿಸಿರುವ ಚಳುವಳಿಗಾರರೂ ಸಹ ಹಿಂದಿನ ದಿನಗಳಲ್ಲಿ ಇಂತಹ ಚಳುವಳಿಗಳಿಗಾದ ಗತಿಯನ್ನು ಎಚ್ಚರಿಕೆಯಿಂದ ಗಮನಿಸಬೇಕಿದೆ. ಜಯಪ್ರಕಾಶ ನಾರಾಯಣರ ಸಂಪೂರ್ಣ ಕ್ರಾಂತಿ ಅಥವಾ ವಿ.ಪಿ.ಸಿಂಗರ ಭ್ರಷ್ಟಾಚಾರ ವಿರೋಧಿ ಚಳುವಳಿ ಇವೆರಡೂ ಸಹ ತತ್‍ಕ್ಷಣದ ಬದಲಾವಣೆಯ ನೀರೀಕ್ಷೆಯನ್ನು ಹುಟ್ಟಿಸಿ ಸೋಲುವುದರ ಮೂಲಕ ಜನರಲ್ಲಿ ರಾಜಕೀಯ ವ್ಯವಸ್ಥೆಯ ಬಗ್ಗೆ ಇನ್ನಷ್ಟು ಭ್ರಮನಿರಸನಗೊಳ್ಳುವಂತೆ ಮಾಡಿದವು.

ಹಜಾರೆಯವರು ಪದೇ ಪದೇ ಮಾಡಿದ ಸತ್ಯಾಗ್ರಹಗಳಿಂದಾಗಿ ಅವರ ಸ್ವಂತ ರಾಜ್ಯವಾದ ಮಹಾರಾಷ್ಟ್ರದಲ್ಲಿ ಕೆಲವು ಬದಲಾವಣೆಗಳಾಗಿವೆಯಷ್ಟೇ. ಪ್ರಜಾಪ್ರಭುತ್ವದಲ್ಲಿ ಬದಲಾವಣೆಗಳು ಅನಿವಾರ್ಯವಾಗಿ ನಿಧಾನ, ಕಷ್ಟ ಮತ್ತು ಚಾಲೆಂಜಿಂಗ್ ಸ್ವರೂಪದ್ದಾಗಿರುತ್ತವೆ. ತತ್‍ಕ್ಷಣಕ್ಕೆ ತಯಾರಾಗುವ ಪರಿಹಾರಗಳಾವೂ ಇಲ್ಲ. ಸಾಂವಿಧಾನಿಕ ರೀತಿಯನ್ನು ಒಪ್ಪಿಕೊಳ್ಳುವುದು ಹಾಗೂ ರಾಜಕೀಯ ವಿಧಾನಗಳನ್ನು ಗೌರವಿಸುವುದೊಂದೇ ಒಳ್ಳೆಯ ಬದಲಾವಣೆಯನ್ನು ತರಲಿಕ್ಕಿರುವ ದಾರಿ. ಹಜಾರೆಯವರ ಭ್ರಷ್ಟಾಚಾರವನ್ನು ಹೊಡೆದೋಡಿಸಬೇಕೆಂಬ ಗುರಿ ಒಳ್ಳೆಯದೇ ಆದರೆ ಹಿಡಿದಿರುವ ಹಾದಿ, ಅನುಸರಿಸುತ್ತಿರುವ ವಿಧಾನಗಳು ಮಾತ್ರ ಸುತಾರಾಂ ತಪ್ಪು ಹಾಗು ಅಪಾಯಕಾರಿ. ಈ ಸಂದೇಶವು ಮಾನ್ಯ ಹಜಾರೆಯವರಿಗೆ ಸ್ಪಷ್ಟವಾಗಿ ತಲುಪಲಿ.


ಮೂಲ ಅಂಕಣದ ಕೊಂಡಿ: http://pragati.nationalinterest.in/2011/09/no-counter-revolution-please/

No comments: