Thursday, September 26, 2013

ಆಹಾರ ಭದ್ರತೆ, ಆಲೋಚನೆಯ ಕೊರತೆ

ಕನ್ನಡಪ್ರಭ ಪತ್ರಿಕೆಯಲ್ಲಿ ಮೂಡಿ ಬಂದಿರುವ ನನ್ನ ಅಂಕಣ ತಾರೀಕು ಮೇ ೨೯ ೨೦೧೩



ಯುಪಿಎ ಸರ್ಕಾರವು ಬಹಳ ದಿನಗಳಿಂದ ಹೊರತರಲು ಉದ್ದೇಶಿಸಿದ್ದ ಆಹಾರ ಭದ್ರತೆ ಕಾಯಿದೆಗೆ ಕೇಂದ್ರದ ಕ್ಯಾಬಿನೆಟ್ ಅನುಮೋದನೆ ದೊರೆತಿದ್ದು, ಅದನ್ನು ದೇಶವ್ಯಾಪಿ ಜಾರಿಗೊಳಿಸಲು ಸಜ್ಜಾಗಿದೆ. ಇಂತದ್ದೊಂದು ಕಾಯಿದೆಯ ಅಗತ್ಯತೆ, ಪ್ರಯೋಜನಗಳೇನು, ಕೇಂದ್ರ ಮತ್ತು ರಾಜ್ಯಗಳ ಬೊಕ್ಕಸಕ್ಕೆ ಇದರಿಂದ ಬೀಳುವ ಹೊಡೆತವೇನು, ಯೋಜನೆಯನ್ನು ಜಾರಿಗೊಳಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾತ್ರವೇನು, ಕೇಂದ್ರ ರಾಜ್ಯಗಳ ಸಂಬಂಧದ ಮೇಲೆ ಇದರ ಪರಿಣಾಮವೇನು, ಈಗಾಗಲೇ ಇರುವ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿರುವ ಹುಳುಕುಗಳೇನು, ತೊಂದರೆಗಳನ್ನು   ಬಗೆಹರಿಸದೆ ಇಂತಹದೊಂದು ಯೋಜನೆಯನ್ನು ತರುವಲ್ಲಿ ಆಗುವ ತೊಡಕುಗಳು, ಪ್ರಸಕ್ತ ಅರ್ಥ ಮತ್ತು ರಾಜಕೀಯ ವ್ಯವಸ್ಥೆಯ ಮೇಲೆ ಇದರಿಂದಾಗುವ ಪರಿಣಾಮಗಳನ್ನು ಗಮನಿಸಿ ಸೂಕ್ತವಾದ ಏರ್ಪಾಟುಗಳನ್ನು ಮಾಡಿಕೊಳ್ಳುವ ತುರ್ತು ನಮ್ಮ ಮುಂದಿದೆ.


 ಏನಿದು ಆಹಾರ ಭದ್ರತೆ ಕಾಯ್ದೆ

ಸರಿ, ಏನಿದು ಆಹಾರ ಭದ್ರತೆ ಯೋಜನೆಯೆಂದರೆ ಇದೊಂದು ಆಹಾರದ ಖಾತ್ರಿಯನ್ನೊದಗಿಸುವ ದೊಡ್ಡ ಪ್ರಮಾಣದ ಮರುಹಂಚಿಕೆ (ರಿಡಿಸ್ಟ್ರಿಬ್ಯೂಟಿವ್ ಸ್ಕಿಮ್) ಅನ್ನಬಹುದು. ಇದು ಗ್ರಾಮೀಣ ಭಾಗದ ಶೇಕಡ 75 ಮತ್ತು ನಗರ ಪ್ರದೇಶದ ಶೇಕಡ 50 ರಷ್ಟು ಜನರಿಗೆ ಆಹಾರದ ಖಾತ್ರಿಯನ್ನೊದಗಿಸುವ ಯೋಜನೆಯಾಗಿರುತ್ತದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರಗಳು ಹೊಣೆ ಹೊತ್ತು ಅನುಷ್ಠಾನಗೊಳಿಸಬೇಕಾದ, ಈಗಾಗಲೇ ಚರ್ಚೆಗೆ ಗ್ರಾಸವಾಗಿರುವ ಕಾಯಿದೆಯಲ್ಲಿರುವ ಪ್ರಮುಖ ಅಂಶಗಳೆಂದರೆ:

  •   ಕಾಯಿದೆಯಡಿಯಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಅರ್ಹ ನಾಗರೀಕನಿಗೆ ತಿಂಗಳಿಗೆ ಐದು ಕೇಜಿಯಷ್ಟು ಆಹಾರಧಾನ್ಯಗಳನ್ನು ಗರಿಷ್ಠ ರಿಯಾಯಿತಿ ದರದಲ್ಲಿ ಒದಗಿಸುವುದು.
  • ಆರು ತಿಂಗಳಿಂದ, ಆರು ವರ್ಷ ವಯಸ್ಸಿನ ಮಕ್ಕಳಿಗೆ ಅಂಗನವಾಡಿ ಕೇಂದ್ರದ ಮೂಲಕ ಪೌಷ್ಟಿಕ ಆಹಾರವನ್ನು ನೀಡುವುದು. 
  •  ಆರರಿಂದ ಹದಿನಾಲ್ಕು ವರ್ಷ ವಯಸ್ಸಿನ ಮಕ್ಕಳಿಗೆ ಉಚಿತವಾಗಿ ಮದ್ಯಾಹ್ನದ ಊಟವನ್ನು ಒದಗಿಸುವುದು.
  • ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೊತೆಯಾಗಿ ಸಾರ್ವಜನಿಕ ವಿತರಣ ವ್ಯವಸ್ಥೆಯನ್ನು ಸುಧಾರಿಸುವುದು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾತ್ರ

ಕೇಂದ್ರ ತಾನು ಒಟ್ಟು ಮಾಡಿಟ್ಟುಕೊಂಡಿರುವ ದಾಸ್ತಾನಿನಿಂದ ಅಗತ್ಯವಾದ ಆಹಾರ ಧಾನ್ಯವನ್ನು ರಾಜ್ಯಗಳಿಗೆ ಒದಗಿಸಲಿದೆ, ಧಾನ್ಯಗಳನ್ನು ಒದಗಿಸಲು ಸಾದ್ಯವಾಗದಿದ್ದ ಸಂದರ್ಭಗಳಲ್ಲಿ ಅದಕ್ಕೆ ತಗಲುವ ವೆಚ್ಚವನ್ನು ಮಾತ್ರ ಭರಿಸುತ್ತದೆ. ಇದರ ನಂತರ ಯೋಜನೆಯನ್ನು ಕೇಂದ್ರವು ನೀಡುವ ಮಾರ್ಗಸೂಚಿಗೆ ಅನುಸಾರವಾಗಿ ಕಾರ್ಯರೂಪಕ್ಕೆ ತರುವುದು ರಾಜ್ಯಸರ್ಕಾರದ ಸಂಪೂರ್ಣ ಜವಾಬ್ದಾರಿಯಾಗಿರುತ್ತದೆ. ಯೋಜನೆಯ ಫಲಾನುಭವಿಗಳನ್ನು ಗುರುತಿಸುವುದು, ಸಾಗಾಟ ಮಾಡಿಕೊಳ್ಳುವುದು, ಶೇಖರಣೆ ಮಾಡಿಟ್ಟುಕೊಂಡು ಹಂಚುವುದು, ಇದರ ಮೇಲುಸ್ತುವಾರಿಗಾಗಿ ಉನ್ನತ ಮಟ್ಟದ ಕಮಿಶನ್ ಒಂದನ್ನು ರಚಿಸುವ ಜವಾಬ್ದಾರಿಯೂ ಸಹ ರಾಜ್ಯ ಸರ್ಕಾರಗಳದ್ದಾಗಿದ್ದು. ಕಮಿಶನ್ ನಿರ್ವಹಣೆ ಆಡಳಿತ ವೆಚ್ಚಗಳು ಮತ್ತಿತರ ವೆಚ್ಚಗಳನ್ನು ರಾಜ್ಯ ಸರ್ಕಾರಗಳೇ ನೋಡಿಕೊಳ್ಳಬೇಕಿದ್ದು, ಹೀಗೆ ನೇಮಕವಾಗಿರುವ ಕಮಿಶನ್ಗಳು ವರ್ಷಕ್ಕೊಮ್ಮೆ ವರದಿಯನ್ನು ತಯಾರಿಸಿ ರಾಜ್ಯಸರ್ಕಾರದ ಮುಂದೆ ಮಂಡಿಸಬೇಕಿರುತ್ತದೆ.ಇಲ್ಲಿ ರಾಜ್ಯಸರ್ಕಾರಗಳು ಕೇಂದ್ರದ ಆಣತಿಯಂತೆ ಕೆಲಸ ಮಾಡಬೇಕಿರುತ್ತದೆ, ಸೂಚನೆಗಳನ್ನು ಪಾಲಿಸಬೇಕಿರುತ್ತದೆ ಮತ್ತು ಆಹಾರಧಾನ್ಯಗಳ ವೆಚ್ಚವನ್ನು ಹೊರತು ಪಡಿಸಿ ಇತರ ಎಲ್ಲಾ ಆಡಳಿತಾತ್ಮಕ ಖರ್ಚುಗಳನ್ನು ರಾಜ್ಯ ಸರ್ಕಾರವು ತನ್ನ ಬೊಕ್ಕಸದಿಂದಲೇ ಭರಿಸಬೇಕಿರುತ್ತದೆ. ಈಗಾಗಲೇ ಕರ್ನಾಟಕ ರಾಜ್ಯ ತನ್ನ ವ್ಯಾಪ್ತಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರಿಗೆ ರಿಯಾಯಿತಿ ದರದಲ್ಲಿ ಪಡಿತರ ಪೂರೈಸುತ್ತಿದೆ, ಅಲ್ಲದೇ ಅದಕ್ಕೆ ತಗಲುವ ಆಡಳಿತಾತ್ಮಕ ವೆಚ್ಚವೆಲ್ಲವನ್ನು ಭರಿಸುತ್ತಿದೆ. ಸಮರ್ಥವಾಗಿ ಈಗಾಗಲೇ ಪಡಿತರ ಹಂಚಿಕೆಯನ್ನು ನಿಭಾಯಿಸುತ್ತಿರುವ ರಾಜ್ಯಗಳ ಮೇಲೆ ಕೇಂದ್ರ ಈಗ ಆಹಾರ ಭದ್ರತೆ ಅನ್ನುವ ಜನಪ್ರಿಯ ನೆಲೆಯ, ಮುಂದಿನ ಚುನಾವಣೆಯ ಮೇಲೆ ಕಣ್ಣಿರಿಸಿ ರೂಪಿಸಿದ ಕಾರ್ಯಕ್ರಮವನ್ನು ಹೇರಲು ಹೊರಟಿರುವ ಹಾಗಿದೆ. ಹೆಜ್ಜೆ ಎಂದಿನಂತೆ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಮೇಲೆ ಕೇಂದ್ರದ ಸವಾರಿಯ ಮುಂದುವರೆದ ಭಾಗವೇ ಅನ್ನಬಹುದು.

ಎಲ್ಲಿದೆ ಆರ್ಥಿಕ ಮತ್ತು ರಾಜಕೀಯ ಪ್ರೌಢಿಮೆ?

ನಿಜಕ್ಕೂ ಈಗ ಆಗಬೇಕಿರುವುದು ಈಗಾಗಲೇ ಇರುವ ವ್ಯವಸ್ಥೆಯಲ್ಲಿನ ಹುಳುಕುಗಳನ್ನು ಸರಿಪಡಿಸಿಕೊಳ್ಳುವುದಾಗಿದೆಯೇ ಹೊರತು ಹೊಸತೊಂದು ಬಿಳಿಯಾನೆ ಸಾಕುವ ಯೋಚನೆಯಲ್ಲ. ಇವತ್ತು ಪಡಿತರ ವ್ಯವಸ್ಥೆಯಲ್ಲಿ ಇರುವ ಮುಖ್ಯವಾದ ತೊಂದರೆಗಳು ಆಹಾರ ಧಾನ್ಯಗಳು ಗೋದಾಮಿನಲ್ಲಿ ಪೋಲಾಗದಂತೆ ತಡೆಯುವ ಯೋಜನೆಗಳು, ಸಾಗಾಟದಲ್ಲಿನ ಸೋರಿಕೆ, ಹಂಚಿಕೆಯಲ್ಲಿನ ಭ್ರಷ್ಟಾಚಾರ, ಫಲಾನುಭವಿಗಳನ್ನು ಗುರುತಿಸುವಲ್ಲಿ ಆಗುತ್ತಿರುವ ಎಡವಟ್ಟು, ಅರ್ಹರಲ್ಲದವರು ಫಲಾನುಭವಿಗಳ ಪಟ್ಟಿ ಸೇರುತ್ತಿರುವುದು, ರೇಶನ್ ಅಂಗಡಿಯ ತೂಕದಲ್ಲಿನ ಮೋಸ ಹೀಗೆ ದಂಡಿಯಾಗಿ ಬಗೆಹರಿಸಬೇಕಾದ ಸಮಸ್ಯೆಗಳಿವೆ. ಅಲ್ಲದೇ ಯೋಜನೆ ಬೊಕ್ಕಸದ ಮೇಲೆ ತರುವ ಹೊರೆಯ ಬಗ್ಗೆ ಯು.ಪಿ. ಸರ್ಕಾರಕ್ಕೆ ಕಾಳಜಿಯಿದ್ದಂತಿಲ್ಲ. ಆರ್ಥಿಕ ತಜ್ಞರ ಪ್ರಕಾರ ಬರುವ ಮೂರು ವರ್ಷದಲ್ಲಿ ಯೋಜನೆಯ ಅನುಷ್ಟಾನಕ್ಕೆ ಬೇಕಿರುವ ಮೊತ್ತ 6,00,000 ಕೋಟಿಗಳಾಗಿದ್ದರೆ ಅದರಲ್ಲಿ ಸರಿ ಸುಮಾರು 40-50% ಅಂದರೆ ಸುಮಾರು 3,00,000 ಕೋಟಿಯಷ್ಟು ಹಣ ಭ್ರಷ್ಟಾಚಾರಕ್ಕೆ ಬಲಿಯಾಗಿ ಸೋರಿಕೆಯಾಗಲಿದೆ. ಪಬ್ಲಿಕ್ ಪಾಲಿಸಿಯೊಂದನ್ನು ರೂಪಿಸುವಾಗ ಆದ್ಯ ಗಮನ ಕೊಡಬೇಕಿರುವುದೇ ಯೋಜನೆಯ ಆರ್ಥಿಕ ಆಯಾಮದ ಬಗ್ಗೆ. ನಮ್ಮ ದೇಶದ ಇವತ್ತಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಮರುಹಂಚಿಕೆಯಂತಹ ವ್ಯವಸ್ಥೆಯ ಅಗತ್ಯವಿದೆಯೆಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ ಆದರೆ ಯಾವುದೇ ದೇಶದ ಅರ್ಥ ವ್ಯವಸ್ಥೆ ಮರುಹಂಚಿಕೆ ಯೋಜನೆಗಳತ್ತ ದೊಡ್ದ ಪ್ರಮಾಣದ ಸಂಪನ್ಮೂಲ ವ್ಯಯಿಸುವ ಮುನ್ನ ಅದನ್ನು ನೀಗಿಸಿಕೊಳ್ಳುವಂತೆ ತೆರಿಗೆ ಸಂಗ್ರಹವಾಗಲಿದೆಯೇ ಅನ್ನುವತ್ತ ಗಮನ ಹರಿಸುತ್ತೆ. ದೇಶದ ಆರ್ಥಿಕ ಬೆಳವಣಿಗೆ ಕೇವಲ 5% ಸುತ್ತ ಮುತ್ತ ಇರುವಾಗ ಇಂತಹದೊಂದು ಹಿಮಾಲಯಪರ್ವತ ಗಾತ್ರದ ಯೋಜನೆಗೆ ಸಂಪನ್ಮೂಲ ಜೋಡಿಸುವುದು ಹೇಗೆ ಅನ್ನುವುದರತ್ತ ಗಮನವೇ ಹರಿಸದೇ ಯು.ಪಿ. ಯೋಜನೆ ಜಾರಿಗೆ ಮುಂದಾಗಿರುವುದನ್ನು ಕಂಡಾಗ  ಜನಪ್ರಿಯ ಯೋಜನೆಗಳ ಬಲದಿಂದ ಚುನಾವಣೆ ಗೆಲ್ಲುವುದೊಂದೇ ಗುರಿಯಾಗಿದ್ದಂತೆ ಕಾಣುತ್ತಿದೆ. ಮುಂದೆ ಯು.ಪಿ. ಬದಲು ಇನ್ನಾವುದೇ ಸರ್ಕಾರ ಬಂದರೂ ಇಂತಹ ಜನಪ್ರಿಯ ಯೋಜನೆಗಳನ್ನು ಮರುಪರಿಶೀಲಿಸಲು ಮುಂದಾದರೆ ಜನವಿರೋಧಿ ಅನ್ನುವ ಪಟ್ಟ ಕಟ್ಟಿಕೊಳ್ಳುವ ಭಯದಲ್ಲಿ ಇದನ್ನು ಮುಂದುವರೆಸಬೇಕಾಗುತ್ತದೆ. ಇಂತಹ ದೂರಾಲೋಚನೆಯಿಲ್ಲದ, ತಕ್ಷಣದ ಲಾಭದ ಯೋಜನೆಗಳು ಭಾರತ ಒಕ್ಕೂಟವನ್ನು ಬೇಕಾಬಿಟ್ಟಿ ಖರ್ಚು ಮಾಡಿ ಈಗ ಬಾಯಿ ಬಡಿದುಕೊಳ್ಳುತ್ತಿರುವ ಯುರೋಪಿನ ಕೆಲ ದೇಶಗಳ ಸ್ಥಿತಿಗೆ ದೂಡಿದರೂ ಅಚ್ಚರಿಯಿಲ್ಲ.

No comments: