Wednesday, January 9, 2013

ಪ್ರಾದೇಶಿಕ ಪಕ್ಷ ಬೇಕೇ ಬೇಡವೇ?

ಕಾವೇರಿ ವಿಷಯದಲ್ಲಿ ಕೇಂದ್ರ ನಡೆದುಕೊಂಡ ರೀತಿಯಿರಬಹುದು, ಬರ ಪರಿಹಾರದಂತ ವಿಪತ್ತಿನ ನಿಧಿ ಹಂಚಿಕೆಯಿರಬಹುದು ಅಥವಾ ರೈಲ್ವೇ ಯೋಜನೆಗಳ ಮಂಜೂರಾತಿಯಂತಹ ವಿಚಾರವಿರಬಹುದು, ಕರ್ನಾಟಕವನ್ನು-ಕನ್ನಡಿಗರನ್ನು ಪ್ರತಿ ಹಂತದಲ್ಲಿಯೂ ಸಹ ಕಡೆಗಣಿಸಲಾಗುತ್ತಿದೆ.ಪ್ರಾದೇಶಿಕ ಪಕ್ಷಗಳು ಈ ರಾಜ್ಯದ ಸಮಸ್ಯೆಗಳನ್ನೇ ಕೇಂದ್ರಿತವಾಗಿಟ್ಟುಕೊಳ್ಳಬೇಕಾಗುತ್ತವೆ ಹಾಗಾಗಿ ಈ ನೆಲದ ಸಮಸ್ಯೆಗಳನ್ನು ಅರಿತ ಪ್ರಾದೇಶಿಕ ಪಕ್ಷಗಳೇ ಅತ್ಯುತ್ತಮ. ಉತ್ತರ ಪ್ರದೇಶದಲ್ಲಿರುವ ಅಯೋದ್ಯಾ ಸಮಸ್ಯೆಗಿಂತ ಕನ್ನಡಿಗರ ಕಾವೇರಿ ಸಮಸ್ಯೆಗೆ ಪರಿಹಾರವನ್ನು ಪ್ರಣಾಳಿಕೆಯಲ್ಲಿ ಹೊಂದಿರುವ ಕನ್ನಡಿಗರ ಹಿತ ಕಾಯುವ ಪಕ್ಷಗಳು ಬೇಕು. 

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಂತರಿಕ ಪ್ರಜಾತಂತ್ರವನ್ನು ಮೊದಲು ಸಾಧಿಸಬೇಕು. ಕನ್ನಡಿಗರಿಂದ ಆರಿಸಲ್ಪಟ್ಟಿರದ ಹೈಕಮಾಂಡ್ ಒಬ್ಬರು ಕರ್ನಾಟಕದ ಮುಖ್ಯಮಂತ್ರಿಯನ್ನು ನಿರ್ದೇಶಿಸುವುದನ್ನು ನೋಡಿದರೆ ಭಾರತಕ್ಕೆ ಸ್ವಾತಂತ್ರ್ಯ ಬಂದು ಅರವತ್ತು ವರ್ಷಗಳು ಕಳೆದರೂ ಸಹ ಕರ್ನಾಟಕವಿನ್ನೂ ಗುಲಾಮಿತನದಿಂದ ಹೊರಬಂದಿಲ್ಲವೇನೋ ಅನ್ನಿಸುತ್ತಿದೆ. ಇದು ಪ್ರಜಾಪ್ರಭುತ್ವಕ್ಕೇ ಅಪಮಾನ. 

ನಮ್ಮ ಪಕ್ಕದಲ್ಲೇ ಇರುವ ತಮಿಳುನಾಡು ಪ್ರಾದೇಶಿಕ ಪಕ್ಷಗಳನ್ನು ಹೊಂದಿರುವುದರಿಂದ ಎಲ್ಲಾ ವಿಷಯಗಳಲ್ಲಿ ಮೇಲುಗೈ ಸಾಧಿಸುತ್ತಿದೆ, ಆಂದ್ರದಲ್ಲಿ ಚಂದ್ರಬಾಬು ನೇತೃತ್ವದ ಟಿಡಿಪಿ ಸರ್ಕಾರವಿದ್ದಾಗ ತಮ್ಮ ರಾಜ್ಯದ ಪರವಾಗಿ ಹಲವಾರು ಯಶಸ್ವಿ ಲಾಬಿಗಳನ್ನು ಮಾಡಿದ್ದರು. ಭಾರತದಂತ ವೈವಿದ್ಯತೆ ಇರುವ ನಾಡಿನಲ್ಲಿ ದಿಲ್ಲಿಯಲ್ಲಿ ಕುಳಿತ ದೊರೆಗಳು ಮಲೆನಾಡಿನ ಮೂಲೆಯಲ್ಲಿರುವ ಸಮಸ್ಯೆಯನ್ನು ಅರ್ಥಮಾಡಿಕೊಂಡು ಸ್ಪಂದಿಸುತ್ತಾರೆಂಬ ಆಸೆ ಇಟ್ಟುಕೊಳ್ಳುವುದೇ ತಪ್ಪು. 

ಕರ್ನಾಟಕವು ಬೌಗೋಳಿಕವಾಗಿ ಜರ್ಮನಿ ದೇಶದಷ್ಟು ದೊಡ್ಡದಾಗಿದೆ ಮತ್ತು ತನ್ನದೇ ಇತಿಹಾಸ ಹೊಂದಿರುವ ಪ್ರದೇಶ. ಒಂದು ರಾಜ್ಯದ ಅಭಿವೃದ್ದಿಯ ಮತ್ತು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ದೃಷ್ಟಿಯಿಂದ ನೋಡಿದಾಗ ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷಗಳೇ ಉತ್ತಮ. ಇದು ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಶಗಳು ಹುಟ್ಟಲು ಸೂಕ್ತಕಾಲ.

No comments: