Sunday, January 20, 2013

ಎನ್ಇಇಟಿ ಪರೀಕ್ಷೆ ಮತ್ತು ಕನ್ನಡಿಗ

ವೈದ್ಯ ಮತ್ತು ದಂತ ವೈದ್ಯಕೀಯ ಪ್ರವೇಶಕ್ಕಾಗಿ ನಡೆಯುವ ಎನ್ಇಇಟಿ(NEET) ಪರೀಕ್ಷೆಯನ್ನು ದೇಶದ ಎಲ್ಲಾ ಕಡೆ ಒಂದೇ ರೀತಿಯಾಗಿ ನಡೆಸಲು ಎಂಸಿಐ ನಿರ್ದರಿಸಿದ್ದು ಅದನ್ನು ಸಿ.ಬಿ.ಎಸ್ಸಿಗೆ ವಹಿಸಿಕೊಟ್ಟಿರುವುದನ್ನು ವಿರೋಧಿಸಿ ರಾಜ್ಯ ಪಟ್ಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕೋರ್ಟ್ ಮೆಟ್ಟಿಲೇರಿದ್ದಾರೆ ಎಂಬ ಸುದ್ದಿ ಪ್ರಜಾವಾಣಿಯಲ್ಲಿ  ಬಂದಿದೆ.
ಈ ಕ್ರಮವು ಕನ್ನಡಿಗರಿಗೆ ದೊಡ್ಡ ಕೆಡುಕು ಉಂಟುಮಾಡುವಂತದ್ದಾಗಿದೆ. ಇದುವರೆಗೂ ರಾಜ್ಯ ಪಟ್ಯಕ್ರಮದಲ್ಲಿ ಓದಿದ ಪಿಯು ವಿದ್ಯಾರ್ಥಿಗಳಿಗೆ ಒಮ್ಮೆಲೆ ಸಿ.ಬಿ.ಎಸ್ಸಿಯ ಪಟ್ಯವನ್ನೂ ಓದಿ ಪರೀಕ್ಷೆಯನ್ನು ಎದುರಿಸುವಂತೆ ಹೇಳಿರುವುದು ತೀರಾ ಅವೈಜ್ನಾನಿಕ ಕ್ರಮ, ಇದನ್ನು ಇಷ್ಟು ಅವಸರದಲ್ಲಿ ಮಾಡಲು ಹೊರಟಿರುವುದು ಹತ್ತು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ.

ಸಿಬಿಎಸ್ಸಿ ಪಟ್ಯ ಮತ್ತು ರಾಜ್ಯದ ಪಟ್ಯಕ್ಕೆ ತುಂಬಾ ಅಂತರವಿದೆ. ಮೊದಲಿನಿಂದಲೂ ಸಿಬಿಎಸ್ಸಿಯಲ್ಲಿ ಓದುವ ಉತ್ತರ ಭಾರತೀಯರಿಗೆ ಇದರಿಂದ ಹೆಚ್ಚಿನ ಅನುಕೂಲಗಳಿವೆ ಅವರಿಗೆ ಈ ಪರೀಕ್ಷೆಯು ಸುಲಬವಾಗುತ್ತದೆ. ಹೀಗಿರುವಾಗ, ಇಷ್ಟು ದೊಡ್ಡ ಮಟ್ಟದ ಬದಲಾವಣೆಯನ್ನು ಮಾಡುವ ಮೊದಲು ಯಾವ ಸಿದ್ದತೆಯೂ ಇಲ್ಲದೆ ಕನ್ನಡದ ವಿದ್ಯಾರ್ಥಿಗಳ ಮೇಲೆ ಎನ್ಇಇಟಿಯನ್ನು ಹೇರುವ ಮೂಲಕ ಕನ್ನಡಿಗರನ್ನು ಬೇಕಾಬಿಟ್ಟಿ ಎಂಬಂತೆ ನೋಡುವ ಕೇಂದ್ರದ ದಬ್ಬಾಳಿಕೆಯ ಮನಸ್ಸು ಇಲ್ಲೂ ಸಹ ಕೆಲಸ ಮಾಡಿದೆ. ಇದನ್ನು ರಾಜ್ಯ ಸರ್ಕಾರವು ತೀವ್ರವಾಗಿ ವಿರೋಧಿಸಿ ಕನ್ನಡಿಗರ ಹಿತ ಕಾಯುವ ಕೆಲಸ ಮಾಡಬೇಕಿತ್ತು. ಆದರೆ ಕರ್ನಾಟಕ ಸರ್ಕಾರವು ಇದನ್ನು  ತೆಪ್ಪಗೆ ಒಪ್ಪಿಕೊಂಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

    

ಒಂದೇ ಮಟ್ಟದ ಕಲಿಕೆ ಮೂಡಲು ಇನ್ನೂ ಐದು ವರ್ಷ ಕಾಲಾವಕಾಶ ಬೇಕಿತ್ತು:

ದೇಶದ ಎಲ್ಲಾ ಶಾಲೆಗಳ ಪಟ್ಯ ಪುಸ್ತಕಗಳು ಒಂದೇ ನಮೂನೆ ಹೊಂದಿರುವಂತೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರವು National Curriculum Framework (NCF) ಅನ್ನು ಹೊರತಂದಿದೆ, ಇದಕ್ಕೆ ಸರಿ ಹೊಂದುವಂತೆ ಆಯಾ ರಾಜ್ಯಗಳು ತಮ್ಮ ಶಾಲೆಗಳ ಪಟ್ಯವನ್ನು(ರಾಜ್ಯ) ಬದಲಾಯಿಸುವಂತೆ ಕೇಂದ್ರವು ಸೂಚಿಸಿತ್ತು. ಇದರಂತೆಯೇ ಈ ವರ್ಷದಿಂದ ಕರ್ನಾಟಕದಲ್ಲಿ NCF ಪ್ರಕಾರ ಎಂಟನೇ ತರಗತಿಯ ಪುಸ್ತಕಗಳು ತಯಾರಾಗಿದ್ದು ಮಕ್ಕಳು ಓದುತ್ತಿದ್ದಾರೆ. ಈಗ ಎಂಟನೆಯ ತರಗತಿಯಲ್ಲಿರುವ ಮಕ್ಕಳು ಎರಡನೆಯ ಪಿಯುಸಿಗೆ ಬರುವಷ್ಟರಲ್ಲಿ, ಐದು ವರ್ಷಗಳ ಕಾಲ NCF ಚೌಕಟ್ಟಿಗೆ ಒಳಪಟ್ಟಿರುವ ಪಟ್ಯವನ್ನು ಓದಿರುತ್ತಾರೆ ಮತ್ತು ದೇಶದ ಎಲ್ಲಾ ರಾಜ್ಯಗಳ ಮಕ್ಕಳು ಒಂದೇ ಬಗೆಯ ಕಲಿಕೆಯನ್ನು ಪಡೆದಿದ್ದಾರೆ ಎಂದು ಬಾವಿಸಬಹುದಾಗಿದೆ. ಆದ್ದರಿಂದ ಕನ್ನಡದ ವಿದ್ಯಾರ್ಥಿಗಳಿಗೆ ಈ ಪರೀಕ್ಷೆಯನ್ನು ಎದುರಿಸಲು ಇನ್ನೂ ನಾಲ್ಕು ವರ್ಷಗಳ ಕಾಲಾವಕಾಶ ಬೇಕಾಗುತ್ತದೆ, ಇಲ್ಲದೇ ಹೋದಲ್ಲಿ ಇದು ನೂರು ಮೀಟರ್ ಓಟದಲ್ಲಿ ಕೆಲವರನ್ನು ಮಾತ್ರ ಐವತ್ತು ಮೀಟರ್ ಮುಂದೆ ನಿಲ್ಲಿಸಿ ಓಟವನ್ನು ಶುರುಮಾಡಿದಂತೆ. ಹಿಂದೆ ನಿಂತವರಿಗೆ ಸೋಲು ಕಟ್ಟಿಟ್ಟ ಬುತ್ತಿ. ರಾಜ್ಯ ಸರ್ಕಾರವು ಈ ತೊಂದರೆಗಳನ್ನು ಮೊದಲೇ ಯೋಚಿಸಿ ಈ ಪರೀಕ್ಷೆಯನ್ನು ಅವಸರದಲ್ಲಿ ನಡೆಸುವುದನ್ನು ವಿರೋಧಿಸಬೇಕಿತ್ತು, ಹಾಗೆ ಮಾಡುವ ಇಚ್ಚಾಶಕ್ತಿಯನ್ನಾಗಲೀ ಕನ್ನಡಿಗ ಹಿತಕಾಯುವ ಕಾಳಜಿಯನ್ನಾಗಲೀ ನಮ್ಮ ರಾಜ್ಯ ಸರ್ಕಾರವು ತೋರಿಸಿಲ್ಲ. ಹಾಗಾಗಿಯೇ ಇಂದು ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರುವ ಪರಿಸ್ಥಿತಿ ಬಂದಿದೆ.

    
ಹಿಂದಿ ಮತ್ತು ಇಂಗ್ಲೀಶಿನಲ್ಲಿ ಮಾತ್ರ ನಡೆಸಲಾಗುವ ಎನ್ಇಇಟಿ ಪರೀಕ್ಷೆ:

ಎನ್ಇಇಟಿ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್ನಲ್ಲಿ ನಡೆಸಲಾಗುತ್ತದೆಯಂತೆ. ದೇಶದ ಎಲ್ಲಾ ರಾಜ್ಯದ ವಿದ್ಯಾರ್ಥಿಗಳು ಕೇವಲ ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಪರೀಕ್ಷೆ ಬರೆಯಬೇಕು. ಅಂದರೆ ಹಿಂದಿ ಭಾಷಿಕರಿಗೆ ಯಾವುದೇ ತೊಂದರೆಯಾಗಬಾರದು ಅವರು ತಮ್ಮ ಭಾಷೆಯಲ್ಲೇ ಪರೀಕ್ಷೆ ಬರೆಯಬಹುದು, ಆದರೆ ಈ ಅವಕಾಶ ಬೇರೆಯವರಿಗಿಲ್ಲ . ಹೀಗಾದರೆ ತಮ್ಮ ತಮ್ಮ ತಾಯಿ ನುಡಿಯಲ್ಲಿಯೇ ಓದುತ್ತಿರುವ ಕನ್ನಡಿಗರು, ತಮಿಳರು, ಬಂಗಾಲಿಗಳು, ಗುಜರಾತಿಗಳು ಮತ್ತಿತರ ಭಾಷಿಕರು ಏನು ಮಾಡಬೇಕು?  ತಮ್ಮ ಭಾಷೆಯಲ್ಲೇ ಪರೀಕ್ಷೆ ಬರೆಯುವ ಅವಕಾಶವನ್ನು ಕಳೆದುಕೊಳ್ಳಲು ಇವರು ಮಾಡಿರುವ ಪಾಪವಾದರೂ ಏನು? ಇದೊಂದೇ ಪರೀಕ್ಷೆಯಲ್ಲ ಕೇಂದ್ರ ಸರ್ಕಾರ ನಡೆಸುವ ಬೆರೆಣಿಕೆಯಷ್ಟು ಪರೀಕ್ಷೆಗಳನ್ನು ಹೊರತು ಪಡಿಸಿ ಹೆಚ್ಚಿನವು ಹಿಂದಿ ಭಾಷಿಕರಿಗೆ ಮಾತ್ರ ತಮ್ಮ ತಾಯಿನುಡಿಯಲ್ಲಿ ಬರೆಯುವ ಅವಕಾಶ ಒದಗಿಸಿವೆ. ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬಂತಿರುವ ಈ ಭಾಷಾ ತಾರತಮ್ಯವು ಸಮಾನತೆಯೇ ಜೀವಾಳವಾಗಬೇಕಾದ ಒಕ್ಕೂಟ ವ್ಯವಸ್ಥೆಗೇ ಕಪ್ಪು ಚುಕ್ಕಿಯಿದ್ದಂತೆ. ಒಕ್ಕೂಟ ವ್ಯವಸ್ತೆಯಲ್ಲಿ ಕನ್ನಡ ಭಾಷಿಕರಿಗೆ ಇಲ್ಲಿಯೂ ಸಹ ಸಹಜ ನ್ಯಾಯವನ್ನು ನಿರಾಕರಿಸಲಾಗಿದೆ. ಜಗತ್ತಿನ ಮುಂದುವರಿದ ದೇಶಗಳಾದ ಜಪಾನ್, ಕೊರಿಯಾ, ಫಿನ್‍ಲ್ಯಾಂಡ್, ಜರ್ಮನಿ ಮೊದಲಾದ ನಾಡುಗಳಲ್ಲಿರುವಂತೆ ಭಾರತದಲ್ಲಿಯೂ ಸಹ ಉನ್ನತ ಕಲಿಕೆಯನ್ನು ತಾಯಿನುಡಿಯಲ್ಲಿ ಕೊಡುವ ಪ್ರಯತ್ನಗಳಿಗೆ ಶಾಶ್ವತವಾಗಿ ಕಲ್ಲು ಹಾಕುತ್ತದೆ. ನಮ್ಮ ಭಾಷಾ ಹಕ್ಕುಗಳನ್ನು ಕಸಿದುಕೊಳ್ಳುವ ಮತ್ತೊಂದು ಹೆಜ್ಜೆಯಾಗಿದೆ.

ಮಕ್ಕಳ ಮೇಲಿನ ಹೊರೆ ಕಡಿಮೆಗೊಳಿಸಲು ಸರ್ಕಾರದ ಅರೆ-ಬರೆ ಕ್ರಮಗಳು:

ಕನ್ನಡದ ಮಕ್ಕಳಿಗೆ ತೊಂದರೆಯಾಗಬಾರದೆಂದು ಸರ್ಕಾರವು ಸಿಬಿಎಸ್ಸಿ ಪಾಟಗಳನ್ನು ಚಂದನ ವಾಹಿನಿಯಲ್ಲಿ ಪ್ರಸಾರ ಮಾಡುವುದಾಗಿ ಹೇಳಿದೆ.ಟೀವಿಯಲ್ಲಿ ಪ್ರಸಾರ ಮಾಡುವ ಪಾಟಗಳನ್ನು ನೋಡಲು ಕರೆಂಟ್ ಇದ್ದರೆ ತಾನೇ, ಹಾಸ್ಟೆಲ್ಗಳಲ್ಲಿ ಇದ್ದುಕೊಂಡು ಓದುತ್ತಿರುವ, ಪಾರ್ಟ್ಟೈಂ ಕೆಲಸ ಮಾಡಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಟಿ.ವಿ. ನೊಡಿ ಕಲಿಯುವುದು ಸಾದ್ಯವೇ? ಕೆಲವು ವಿಜ್ನಾನದ Concept ಗಳನ್ನು ಪ್ರಯೋಗಗಳ ಮೂಲಕ ಅರಿತುಕೊಳ್ಳಬೇಕಿರುತ್ತದೆ, ಅದಕ್ಕಾಗಿ ಮಕ್ಕಳು ಮನೆಯಲ್ಲಿಯೇ ಲ್ಯಾಬ್ ಕಟ್ಟಿಕೊಳ್ಳಬೇಕೇ?

ರಾಜ್ಯ ಸರ್ಕಾರ ತಕ್ಷಣ ಏನು ಮಾಡಬೇಕು?

ರಾಜ್ಯ ಸರ್ಕಾರವು ತನ್ನ ಜವಾಬ್ದಾರಿಗಳಿಂದ ನುಣುಚಿಕೊಳ್ಳದೇ, ಕನ್ನಡಿಗರ ಪರವಾಗಿ ನಿಲ್ಲುವ ಗಟ್ಟಿತನವನ್ನು ತೋರಿಸಬೇಕು. ಮಕ್ಕಳಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಲು ಸರ್ಕಾರವು ಮಾಡಬೇಕಾದ ಮೊದಲ ಕೆಲಸವೆಂದರೆ ಕಡೇಪಕ್ಷ ನಾಲ್ಕೈದು ವರ್ಷಗಳ ಕಾಲಾವಾಕಾಶವನ್ನು ಪಡೆಯಬೇಕು.NCF ಪಟ್ಯಕ್ರಮದಲ್ಲಿ ಓದಲು ತೊಡಗಿರುವ ಮಕ್ಕಳು ಪಿಯುಸಿಗೆ ಬರುವ ಹೊತ್ತಿಗೆ, ಅವರು ಕಲಿತ ಪಟ್ಯಕ್ರಮಕ್ಕೂ ಸಿಬಿಎಸ್ಸಿ ಪಟ್ಯಕ್ರಮಕ್ಕೂ ಹೆಚ್ಚು ಅಂತರ ಇಲ್ಲದಿರುವುದರಿಂದ, ಎನ್ಇಇಟಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ತಕ್ಕುಮೆ ಪಡೆದಿರುತ್ತಾರೆ. ಮತ್ತು, ಕನ್ನಡದಲ್ಲೂ ಎನ್ಇಇಟಿ ಪರೀಕ್ಷೆ ನಡೆಸುವಂತೆ ಒತ್ತಾಯ ಮಾಡಬೇಕು (ಗುಜರಾತ್ ಮತ್ತು ಬಂಗಾಲ ರಾಜ್ಯಗಳು ಇದೇ ರೀತಿಯ ಒತ್ತಾಯ ಈಗಾಗಲೇ ಮಾಡಿವೆ ಎಂಬ ಸುದ್ದಿಯಿದೆ)

1 comment:

Unknown said...

ನಿಜ ಜೀವನದ, ತುಂಬಾ ಪ್ರಸ್ತುತವಾದ ಕೇಳ್ವಿಗಳನ್ನು ಕೇಳಿದ್ದೀರಿ, ಗಿರೀಶ್. ಮೊನ್ನೆ ಕಿರಣ್ ಅವರ ಪುಸ್ತಕ ಬಿಡುಗಡೆ ಕಾರ‍್ಯಕ್ರಮಕ್ಕೆ ನೀವು ಬಂದಿದ್ದಿರೋ ಇಲ್ಲವೋ. ಅಲ್ಲಿ ಕೆ.ವಿ.ನಾರಾಯಣ್ ಅವರು ಒಂದು ಮಾಹಿತಿ ಕೊಟ್ಟರು. ಹಿಂದಿ ಹೊರತಾದ ಬಾರತೀಯ ಬಾಶೆಗಳಲ್ಲಿ ಅಯ್.ಏ.ಎಸ್. ಪರೀಕ್ಶೆಗಳನ್ನು ತೆಗೆದುಕೊಳ್ಳುವವರಿಗೆ ಬೇಕೆಂದೇ ಪರೀಕ್ಶೆಗಳನ್ನು ಕಟಿಣಗೊಳಿಸುವ ಹುನ್ನಾರದಲ್ಲಿದ್ದಾರಂತೆ ಕೇಂದ್ರದವರು!
ಈ ನಮ್ಮ ಒಕ್ಕೂಟ ಎನ್ನುವುದು ಹಿಂದಿಯೇತರರ ಪಾಲಿಗೆ ಒಂದು ಅಡಕೊತ್ತಿನ ಒತ್ತಿನಂತಾಗಿದೆ.