Tuesday, December 18, 2012

ಪ್ರಾದೇಶಿಕ ಸಿನಿಮಾಗಳ ಸೊರಗುವಿಕೆ ಮತ್ತು ಭಾರತದ ಭಾಷಾನೀತಿ.

ಹಿರಿಯ ಸಿನೆಮಾ ಪತ್ರಕರ್ತರಾದ ಗಂಗಾಧರ ಮೊದಲಿಯಾರ್‍ ರವರು "ಪ್ರಾದೇಶಿಕ ಸಿನಿಮಾಗಳನ್ನು ಕೊಂದವರಾರು?"  ಎಂಬ ತಲೆಬರಹದ ತಮ್ಮ ಅಂಕಣದಲ್ಲಿ, ಹಿಂದಿ ಚಿತ್ರರಂಗವು ಇತರೆ ಚಿತ್ರರಂಗಗಳನ್ನು ಕುಸಿಯುವಂತೆ ಮಾಡುತ್ತಿದೆ ಎಂಬ ಬಗ್ಗೆ ಬರೆದಿದ್ದಾರೆ. ಆದರೆ, ನಿಜವಾಗಿ ಇತರೆ ಚಿತ್ರರಂಗಗಳನ್ನು ಹಿಂದಿ ಚಿತ್ರರಂಗವು ಹೇಗೆ ಕುಗ್ಗಿಸುತ್ತಿದೆ ಎಂಬುದನ್ನು ವಿವರಿಸುವಲ್ಲಿ ಗಂಗಾಧರ ಮೊದಲಿಯಾರ್ ಅವರು ಎಡವಿದ್ದಾರೆ. ಅದೇ ಅಂಕಣದಲ್ಲಿ ಒಂದೆಡೆ ಗಂಗಾಧರ ಅವರು, "ರಾಷ್ಟ್ರಭಾಷೆ ಎನಿಸಿಕೊಂಡರೂ ಹಿಂದಿಗೆ ಒಂದು ಪ್ರಾಂತ್ಯವಿಲ್ಲ. ಆದರೂ ಹಿಂದಿ ಬಲ್ಲವರು ಆಯಾ ಪ್ರದೇಶದ ಭಾಷೆಗಳ ಸಮ್ಮಿಶ್ರಣದೊಂದಿಗೆ ದೇಶವ್ಯಾಪಿಯಾಗಿ ಭಾಷೆಯನ್ನು ಅರ್ಥೈಸಿಕೊಳ್ಳಬಲ್ಲರು. ಈ ಕಾರಣದಿಂದ ಹಿಂದೀ ಸಿನಿಮಾಗಳು ದೇಶವ್ಯಾಪಿ ಮಾರುಕಟ್ಟೆನ್ನೊಂದಲು ಸಾಧ್ಯವಾಗಿದೆ..." ಎಂಬುದಾಗಿ ಬರೆದಿದ್ದಾರೆ. 

ಮೊದಲನೆಯದಾಗಿ ಹಿಂದಿ ರಾಷ್ಟ್ರಭಾಷೆ ಎಂಬುದು ನಿಜವಲ್ಲ, ಇತರೆ ಸಾಮಾನ್ಯ ಕನ್ನಡಿಗರಿಗೆ ಇರುವ ತಪ್ಪು ತಿಳುವಳಿಕೆಯೇ ಗಂಗಾಧರ ಅವರಿಗೂ ಇರುವಂತಿದೆ. ನಮ್ಮ ದೇಶದ ಸಂವಿದಾನದಲ್ಲಿ ಯಾವುದೇ ನುಡಿಗೆ ರಾಷ್ಟ್ರಭಾಷೆಯ ಮನ್ನಣೆ ಕೊಟ್ಟಿಲ್ಲ. ಇದೇ ವಿಷಯವಾಗಿ ಇತ್ತೀಚೆಗಷ್ಟೇ ಗುಜರಾತ್ ಹೈಕೋರ್ಟ್ ಸಹ ತೀರ್ಪು ನೀಡಿದೆ.

 ಕೇಂದ್ರ ಸರ್ಕಾರವು ಕರ್ನಾಟಕವು ತ್ರಿಭಾಷಾ ಸೂತ್ರವನ್ನು ಪಾಲಿಸುವಂತೆ ಮಾಡುವ ಮೂಲಕ ಹಿಂದಿಯನ್ನು ರಾಷ್ಟ್ರಭಾಷೆಯೆಂಬಂತೆ ಬಿಂಬಿಸಿರುವುದೇ ಇದಕ್ಕೆಲ್ಲ ಮೂಲಕಾರಣವಾಗಿದೆ. ಕೇಂದ್ರ ಸರ್ಕಾರವು ರಾಜಭಾಷಾ ಆಯೋಗದ ಮೂಲಕ ಹಿಂದಿಯನ್ನು ಕರ್ನಾಟಕದಂತಹ ಹಿಂದಿಯೇತರ ರಾಜ್ಯಗಳ ಮೇಲೆ ನಿರಂತರವಾಗಿ ಹೇರಿಕೆ ಮಾಡುತ್ತಿದೆ. ಹಿಂದಿಯನ್ನು ಪ್ರಚಾರ ಮಾಡುವುದಕ್ಕಾಗಿ ಹತ್ತು ಹಲವು ಯೋಜನೆಗಳನ್ನು ಹಾಕುತ್ತಾ, ಕೇಂದ್ರ ಸರ್ಕಾರವು ತನ್ನ ಕೈ ಕೆಳಗೆ ಇರುವ ಸರ್ಕಾರಿ ಸಂಸ್ಥೆಗಳನ್ನು ಇದಕ್ಕಾಗಿ ಬಳಸುತ್ತದೆ ಹಾಗೂ ಇದೇ ಉದ್ದೇಶಕ್ಕಾಗಿ ಕೋಟಿಗಟ್ಟಳೆ ಹಣವನ್ನು ಸಹ ಒದಗಿಸುತ್ತಿದೆ. ಇಂತಹ ಸತತ ಪ್ರಯತ್ನಗಳಿಂದ ಕೆಲವು ಕನ್ನಡಿಗರು ಹಿಂದಿಯು ರಾಷ್ಟ್ರಭಾಷೆ ಹಾಗಾಗಿ ಅದನ್ನು ಕಲಿಯಬೇಕು ಪೋಷಿಸಬೇಕು ಎಂಬ ಭಾವನೆಯನ್ನು ತೆಳೆದಿದ್ದಾರೆ. ಇಲ್ಲದೇ ಹೋದಲ್ಲಿ ಕನ್ನಡಿಗರಿಗೆ ಪಕ್ಕದ ರಾಜ್ಯದ ಭಾಷೆಗಳಾದ ತಮಿಳು, ತೆಲುಗು, ಮಲಯಾಳಂಗಿಂತ ಹೆಚ್ಚಿನ ಸಂಪರ್ಕವು ದೂರದ ಹಿಂದಿಯೊಡನೆ ಹೊಂದಲು ಸಾದ್ಯವಾದುದಾರೂ ಹೇಗೆ? ಶಾಲಾ ಮಟ್ಟದಲ್ಲಿ ಹಿಂದಿಯನ್ನು ಒಂದು ಕಡ್ಡಾಯ ಭಾಷೆಯಾಗಿ ಕಲಿಸುವುದರಿಂದ ಸಣ್ಣವಯಸ್ಸಿನಲ್ಲೇ ಹಿಂದಿಯ ಪರಿಚಯ ಕನ್ನಡದ ಮಕ್ಕಳಿಗೆ ಸಿಗುತ್ತದೆ. ಮತ್ತು ಹಿಂದಿ ಭಾಷೆಯಲ್ಲಿ ಮೂಡಿಬರುವ ಛೋಟಾ ಭೀಮ್ ನಂತಹ ಜನಪ್ರಿಯ ಕಾರ್ಟೂನ್ ಗಳನ್ನು ನೋಡುವುದರಿಂದ ಹಿಂದಿಯನ್ನು ಕಲಿತು ಹಿಂದಿ ಚಿತ್ರಗಳನ್ನು ನೋಡುವ ಪರಿಪಾಟ ಬೆಳೆಯುತ್ತದೆ. ನಲವತ್ತು-ಐವತ್ತರ ವಯಸ್ಸಿನವರಿಗೆ ಹೋಲಿಸಿದರೆ ಮೂವತ್ತರ ವಯಸ್ಸಿನ ಆಸುಪಾಸಿನಲ್ಲಿ ಇರುವವರು ಹಿಂದಿ ಸಿನೆಮಾಗಳಿಗೆ ಹೆಚ್ಚು ಹತ್ತಿರವಾಗಿರುತ್ತಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇಂದು ಮೂವತ್ತರ ಆಸುಪಾಸಿನಲ್ಲಿರುವರು ತೊಂಬತ್ತರ ದಶಕದಲ್ಲಿ ಪ್ರಸಾರವಾಗುತ್ತಿದ್ದ ಹಿಂದಿಯ ರಾಮಾಯಣ, ಮಹಾಭಾರತ, ಜಂಗಲ್ ಬುಕ್ ನಂತಹ ಕಾರ್ಯಕ್ರಮಗಳನ್ನು ನೋಡಿ ಬೆಳೆದವರು. ಹಾಗೂ ಶಾಲೆಗಳಲ್ಲಿ ಹಿಂದಿಯನ್ನು ಒಂದು ವಿಷಯವಾಗಿ ಕಲಿತವರಾಗಿರುತ್ತಾರೆ. 

ಪಕ್ಕದ ರಾಜ್ಯವಾದ ತಮಿಳುನಾಡಿನ ಶಾಲೆಗಳಲ್ಲಿ ಹಿಂದಿಯನ್ನು ಕಲಿಸುವುದಿಲ್ಲ. ರಾಮಾಯಣದಿಂದ ಶುರುವಾಗಿ ಇಂದಿನವರೆಗೆ ಎಲ್ಲಾ ಜನಪ್ರಿಯ ಕಾರ್ಯಕ್ರಮಗಳನ್ನು ತಮಿಳಿಗೆ ಡಬ್ ಮಾಡಿ ತಮ್ಮ ನುಡಿಯಲ್ಲೇ ನೋಡುವ ಅವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ. ಹಾಗಾಗಿ ಅಲ್ಲಿನ ಚಿತ್ರಮಂದಿರಗಳಲ್ಲಾಗಲೀ, ಪೋಸ್ಟರ್‍‍ಗಳಲ್ಲಾಗಲೀ, ಟಿ.ವಿಯಲ್ಲಾಗಲೀ ತಮಿಳಿಗೆ ಮೊದಲ ಸ್ಥಾನವಿದ್ದು ಹಿಂದಿಯ ಅಬ್ಬರವಿಲ್ಲ. 

           ಹಿಂದಿಗೆ ವಿಶೇಷ ಸವಲತ್ತುಗಳನ್ನು ಕೊಡಮಾಡಿರುವ ನಮ್ಮ ದೇಶದ ಭಾಷಾನೀತಿಯಿಂದಾಗಿ, ಭಾರತೀಯ ಸಿನೆಮಾ ಎಂದರೆ ಹಿಂದಿ ಸಿನೇಮಾ ಎಂಬಂತಾಗಿದೆ. ಗುಜರಾತಿ, ಮರಾಟಿ, ಬೆಂಗಾಲಿ ಮತ್ತು ಕನ್ನಡದ ಪ್ರಾದೇಶಿಕ ಚಿತ್ರರಂಗಗಳು ಸೊರಗುವಂತಾಗಲು ಇದೇ ಹುಳುಕಿನ ಭಾಷಾನೀತಿಯು ಕಾರಣ. ಕರ್ನಾಟಕದಲ್ಲಿ ತ್ರಿಭಾಷಾ ಸೂತ್ರ ಹಾಗೂ ಡಬ್ಬಿಂಗ್ ನಿಷೇದ ಎರಡೂ ಇರುವುದರಿಂದ ಜನರು ಹಿಂದಿ ಭಾಷೆಯ ಕಡೆಗೆ ವಾಲುವಂತಾಗಿದೆ. ಇದು ಪರೋಕ್ಷವಾಗಿ ಹಿಂದಿ ಸಿನೇಮಾಗಳು ಕನ್ನಡದ ಮಣ್ಣಲ್ಲಿ ಬೇರೂರಲು ಕಾರಣವಾಗಿದೆ. ಮತ್ತು ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆ ದೊಡ್ಡ ಮಟ್ಟದ ಹೊಡೆತವನ್ನು ಕೊಡುತ್ತಿವೆ.

No comments: