Tuesday, October 22, 2013

ನಮ್ಮ ಘಟ್ಟ, ಹೊರಗಿನವರಿಗೆ ಪಟ್ಟ!

"ಆಳ್ವಿಕೆಯು ಚೆನ್ನಾಗಿದೆ ಎಂದ ಮಾತ್ರಕ್ಕೆ ಅದು ಸ್ವಂತ ಆಳ್ವಿಕೆಗೆ ಬದಲಿಯಾಗಲಾರದು" ಮಹಾತ್ಮ ಗಾಂಧಿ

"Good government is no substitute for self-government". - Mahatma Gandhi

ಪಶ್ಚಿಮ ಘಟ್ಟಗಳನ್ನು ಕಾಪಾಡುವುದಕ್ಕಾಗಿ ಕೇಂದ್ರದ ಒಕ್ಕೂಟ ಸರ್ಕಾರವು ಹೊಸ ಕಾನೂನನ್ನು ಜಾರಿಗೊಳಿಸುತ್ತಿದೆಯಂತೆ, ಒಕ್ಕೂಟ ಸರ್ಕಾರದ ಈ ನಡೆಯ ಹಿನ್ನೆಲೆಯಾಗಿಟ್ಟುಕೊಂಡು ಪರಿಸ್ತಿತಿಯನ್ನು ಅವಲೋಕಿಸಿದಾಗ ಮತ್ತದೇ ಕೇಂದ್ರೀಕೃತ ವ್ಯವಸ್ತೆಯ ಹುಳುಕುಗಳು ಕಣ್ಣಿಗೆ ರಾಚುತ್ತವೆ. ಇಲ್ಲಿ ನಾನು ಎತ್ತುತ್ತಿರುವ ಪ್ರಶ್ನೆ ಪಶ್ಚಿಮ ಘಟ್ಟಗಳನ್ನು ಕಾಪಾಡುವುದಕ್ಕೆ ಮಾಡಿರುವ ಕಾನೂನು ಸರಿಯಿದೆಯೋ ಇಲ್ಲವೋ ಎಂಬುದರ ಬಗ್ಗೆ ಅಲ್ಲವೇ ಅಲ್ಲ. ಈ ಕಾನೂನುಗಳನ್ನು ಮಾಡಬೇಕಿರುವುದು ಯಾರು? ಯಾರು ಮಾಡಿದರೆ ಅದು ಸರಿಯಾದ ಒಕ್ಕೂಟ ವ್ಯವಸ್ತೆಯಾಗುತ್ತದೆ ಅನ್ನುವುದರ ಬಗ್ಗೆ.

ಗುಜರಾತ್ ಮತ್ತು ಮಹಾರಾಷ್ಟ್ರದ ಗಡಿಬಾಗದಿಂದ ಶುರುವಾಗಿ ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನವಗೆ ಹಬ್ಬಿರುವ ಈ ವಿಶೇಷವಾದ ನೆಲವನ್ನು ಕಾಪಾಡಬೇಕೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇದನ್ನು ಆಯಾ ರಾಜ್ಯದವರೇ ಮಾಡಬೇಕಲ್ಲವೇ? ಉದಾಹರಣೆಗೆ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖದ ಬಾಗದಲ್ಲಿ ಬರುವ ಘಟ್ಟಗಳ ಬಗ್ಗೆ ಅಲ್ಲಿನ ಸರ್ಕಾರದ ಕೈಯಲ್ಲೇ ಅಧಿಕಾರವಿರಬೇಕೇ ಹೊರತು ಪಶ್ಚಿಮ ಬಂಗಾಲದಿಂದ ಆಯ್ಕೆಯಾಗಿ, ಕೇಂದ್ರ ಸರ್ಕಾರದಲ್ಲಿ ಮಂತ್ರಿಯೋ ಮತ್ತೊಂದೋ ಆಗಿರುವವರ ಕೈಯಲ್ಲಲ್ಲ. ಹಾಗೆ ಆಗಿದ್ದೇ ಆದಲ್ಲಿ ಸ್ವಂತ ಆಳ್ವಿಕೆ (Self Rule) ಅನ್ನುವುದರ ಅರ್ಥವಾದರೂ ಏನು? 

ಈ ರೀತಿಯಾಗಿ ರಾಜ್ಯಗಳಿಂದ ಒಂದೊಂದೇ ಅಧಿಕಾರವನ್ನು ಕಿತ್ತುಕೊಳ್ಳುವುದರ ಮೂಲಕ ಕೇಂದ್ರ ಸರ್ಕಾರವು ಎಂತಹ ಸಂದೇಶವನ್ನು ಕೊಡುತ್ತಿದೆ? ನಿಮ್ಮನ್ನು ನೀವು ಆಳಿಕೊಳ್ಳುವುದಕ್ಕೆ ನಿಮಗೆ ತಾಕತ್ತಿಲ್ಲ, ನಾವೇ ನಿಮಗಿಂತ ಸಮರ್ಥರು ಹಾಗಾಗಿ ನಾವು ನಿಮಗಾಗಿ ಕಾನೂನನ್ನು ಮಾಡುತ್ತೇವೆ, ನೀವು ಅದರಂತೆ ನಡೆದುಕೊಳ್ಳಿ ಸಾಕು ಎಂದಲ್ಲವೇ?  ಆಯ್ತು ಒಂದುವೇಳೆ ಅವರೇ ನಮಗಿಂತ ಸಮರ್ಥರು ಎಂದಿಟ್ಟುಕೊಳ್ಳಿ, ಶ್ರೀಲಂಕಾ ಸರ್ಕಾರವು ಆಡಳಿತದಲ್ಲಿ ನಿಮಗಿಂತ ಸಮರ್ಥರು ಎಂದಾದರೆ ನೀವು ಅವರಿಂದ ಆಳಿಸಿಕೊಳ್ಳಲು ಸಿದ್ದವಾಗಿದ್ದೀರಾ? ಅದೆಂಗೆ ಆಗುತ್ತೆ ಅವರು ಹೊರಗಿನವರು ಎಂದಾದಲ್ಲಿ ಚಿಕ್ಕಮಗಳೂರಿಗೆ ದೆಹಲಿಯೂ ಬಹಳ ದೂರದ್ದು. ಇಲ್ಲಿಯ ಕುಗ್ರಾಮವೊಂದರ ಬಗೆಗಿನ ನಿರ್ಧಾರವನ್ನು ದೆಹಲಿಯಲ್ಲಿ ಕೂತು ತೆಗೆದುಕೊಳ್ಳುವುದು ಅತ್ಯಂತ ಅವೈಜ್ನಾನಿಕ. 

ಎಲ್ಲವನ್ನೂ ತನ್ನ ಕಪಿಮುಷ್ಟಿಯಲ್ಲೇ ಹಿಡಿದುಕೊಂಡಿಟ್ಟುಕೊಳ್ಳಬೇಕೆಂಬ ಮನಸ್ತಿತಿಯೇ ಘೋರವಾದದ್ದು, ಕೇಂದ್ರದ ಇಂತಹ ನಿಲುವುಗಳು ಹಿಂದಿನ ಅರಸೊತ್ತಿಗೆ ಕಾಲದಲ್ಲಿ ಇದ್ದಂತಹ ಸಾಮಂತರು ಮತ್ತು ಚಕ್ರವರ್ತಿಯ ಯಥಾವತ್ ನಕಲಿನಂತೆ ಕಾಣುತ್ತದೇಯೇ ಹೊರತು ಒಂದು ಸರಿಯಾದ ಪ್ರಜಾಪ್ರಭುತ್ವವುಳ್ಳ ಒಕ್ಕೂಟ ವ್ವವಸ್ತೆಯಂತೆ ಅಲ್ಲವೇ ಅಲ್ಲ. ಹಾಗಿದ್ದರೆ ಕೇಂದ್ರ ಸರ್ಕಾರದ ಪಾತ್ರವೇನು ಎಂಬುದಾದರೆ ರಾಜ್ಯಗಳ ಆಳ್ವಿಕೆಯಲ್ಲಿ ಕೈ ಹಾಕದೆ ವಿದೇಶ ವ್ಯವಹಾರ, ಗಡಿಯಂತಹ ಇಲಾಖೆಗಳಿಗೆ ಸೀಮಿತವಾಗಬೇಕು. ರಾಜ್ಯಗಳು ಬಲಶಾಲಿಯಾದ ಮಾತ್ರ ದೇಶವು ಬಲಶಾಲಿಯಾಗುತ್ತದೆ. ಯಾಕೆಂದರೆ ರಾಜ್ಯಗಳಿಂದ ದೇಶವೇ ಹೊರತು ದೇಶಗಳಿಂದ ರಾಜ್ಯಗಳಲ್ಲ.
ಚಿತ್ರ: ಇಂಟರ್ನೆಟ್

No comments: