Friday, September 27, 2013

ಚಿಕ್ಕಮಕ್ಕಳ ಕಲಿಕೆ ಮತ್ತು ತಾಯಿನುಡಿಯ ಬಳಕೆ


ಇತ್ತೀಚೆಗೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಒಂದು ವರದಿ ಪ್ರಕಟವಾಗಿತ್ತು. ಅದರಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವಾಲಯವು ಜಾರಿಗೊಳಿಸಲು ಉದ್ದೇಶಿಸಿರುವ ಹೊಸ ನೀತಿಯೊಂದರ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ನೀತಿಯು ಮಗುವಿನ ಎಳೆವಯಸ್ಸಿನ ಆರೈಕೆ ಮತ್ತು ಮೊದಲನೆ ಹಂತದ ಕಲಿಕೆಯ ಕುರಿತಾದ ನೀತಿಯ ಒಂದು ಭಾಗವಾಗಿದ್ದು. ಈ ಹೊಸ ನೀತಿಯ ಪ್ರಕಾರ ಆರುವರ್ಷದ ಒಳಗಿನ ಮಗುವಿನ ಕಲಿಕೆ ಕೇಂದ್ರಗಳಲ್ಲಿ(ಅಂಗನವಾಡಿ, ಪ್ಲೇ ಹೋಂ ಮೊದಲಾದುವು)ಕಡ್ಡಾಯವಾಗಿ ಮಗುವಿನ ತಾಯಿನುಡಿಯನ್ನೇ ಮಾಧ್ಯಮವಾಗಿ ಬಳಸಬೇಕೆಂಬ ಕಾನೂನು ಜಾರಿಯಾಗಲಿದೆ. ಮಗುವು ತನ್ನ ಮನೆಯಲ್ಲಿ ಬಳಸುವ ನುಡಿಯಲ್ಲೇ ಕಲಿಕೆಯನ್ನು ಶುರುಮಾಡುವುದರಿಂದ ಮಗುವಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿ, ಹೆದರಿಕೆ, ಹಿಂಜರಿಕೆಗಳಿಲ್ಲದ ಮುಂದಿನ ಹಂತದ ಕಲಿಕೆಯಲ್ಲಿ ಹೆಚ್ಚಿನ ತೊಡಗುವಿಕೆಗೆ ಕಾರಣವಾಗುತ್ತದೆ ಎಂಬ ವೈಜ್ನಾನಿಕ ಹಿನ್ನಲೆಯಲ್ಲಿ ಈ ನೀತಿಯನ್ನು ರೂಪಿಸಲಾಗಿದೆ.

ಸಧ್ಯದ ಪರಿಸ್ಥಿತಿಯಲ್ಲಿ ಇಂತದ್ದೊಂದು ನಿಯಮದ ಮಾಡಿ ಜನರಿಗೆ ಯಾವುದು ಸರಿ ಎಂಬುದರ ಬಗ್ಗೆ ಮನವರಿಕೆ ಮಾಡಿಕೊಡುವುದು ಸರಿಯಾದದ್ದು. ಮಗುವಿಗೆ ಒಳ್ಳೆಯ ಕಲಿಕೆಯೆಂದರೆ ಅದು ಇಂಗ್ಲಿಷ್ ಮಾಧ್ಯಮದಿಂದ ಮಾತ್ರ ಅನ್ನು ತಪ್ಪು ತಿಳುವಳಿಕೆ ಇಂದಿನ ತಂದೆತಾಯಿಗಳಿಗಿದೆ. ಮಗುವಿನ ಕಲಿಕೆ ಪೂರ್ತಿಯಾಗಿ ಇಂಗ್ಲಿಷ್‍ನಲ್ಲೇ ಇರಬೇಕೆಂದು ಹರಸಾಹಸ ಪಟ್ಟು ಕೃತಕವಾದ ಇಂಗ್ಲಿಷ್ ವಾತಾವರಣವನ್ನು ಹುಟ್ಟುಹಾಕುವ, ಮಗುವು ತನ್ನ ತಾಯಿನುಡಿಯನ್ನು ಬಳಸುವುದೇ ಅಪರಾಧವೇನೋ ಎಂಬಂತಹ ಪರಿಸ್ಥಿತಿಯನ್ನು ಉಂಟುಮಾಡಲಾಗುತ್ತಿದೆ. ತನ್ನ ತಾಯಿನುಡಿಯ ಹಾಗೂ ತನ್ನ ತಾಯಿನುಡಿಯನ್ನಾಡುವ ಭಾಷಿಕ ಸಮುದಾಯದ ಸಂಪರ್ಕವನ್ನು ಎಳೆವಯಸ್ಸಿನಲ್ಲಿಯೇ ಅಸಹಜವಾಗಿ ಕಡಿದುಕೊಂದು, ಇಂತಹ ಒಂದು ಕಟ್ಟುಪಾಡುಗಳಲ್ಲಿ ಬೆಳೆಯುವ ಮಗುವಿಗೆ ಮುಂದೆ ದೊಡ್ಡವನಾದಾಗ ತನ್ನತನದ ಅರಿವಿನ ಕೊರತೆ ಕಾಡದಿರದು. ಹೀಗೆ ಒಂದು ಇಡಿಯ ಜನಾಂಗಕ್ಕೆ ಬೇರೆ ಭಾಷೆಯಲ್ಲಿಯೇ ಕಲಿಕೆಯನ್ನು ಕೊಡುವ ಪದ್ದತಿಯಿಂದಾಗಿಯೇ ಇಂದು ಆಪ್ರಿಕಾದ ಕೆಲ ದೇಶಗಳಲ್ಲಿ ನೂರಾರು ಭಾಷಿಕ ಸಮುದಾಯಗಳು ತನ್ನ ಸಾಂಸ್ಕೃತಿಕ ಅಸ್ಥಿತ್ವವನ್ನೇ ಕಳೆದುಕೊಳ್ಳುತ್ತಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ.

ಮಗುವಿನ ಕಲಿಕೆ ಅದರ ತಾಯಿನುಡಿಯಲ್ಲಾಗಬೇಕೆಂಬುದು ಈಗಾಗಲೇ ವೈಜ್ನಾನಿಕವಾಗಿ ತೋರಿಸಲ್ಪಟ್ಟಿದೆ, ಯುನೆಸ್ಕೋದ ವರದಿಯೂ ಸಹ ಇದನ್ನು ಅನುಮೋದಿಸಿದೆ. ಆದರೂ ಸಹ ಮಗುವಿಗೆ ಇಂಗ್ಲಿಷ್ ಮಾಧ್ಯಮದ ಹೊರೆ ಹೇರುತ್ತಿರುವುದು ದಿನೇ ದಿನೇ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗಿಲ್ಲ. ಅದರಲ್ಲೂ ಇನ್ನೂ ತೊದಲುನುಡಿಯುತ್ತಿರುವ ಎಳೆಯ ಮಕ್ಕಳಿಗೂ ಸಹ ಬೇರೊಂದು ಅಪರಿಚಿತ ಭಾಷೆಯನ್ನು ಮಾಧ್ಯಮವಾಗಿ ಹೇರುವುದು ಮತ್ತು ಅದಕ್ಕಾಗಿ ಕೃತಕ ವಾತಾವರಣವನ್ನು ಉಂಟುಮಾಡುವ ಪ್ರಯತ್ನಗಳು ಅವೈಜ್ನಾನಿಕವಷ್ಟೇ ಅಲ್ಲದೆ ಕಠೋರವಾದದ್ದು. ಕನ್ನಡದ ಖ್ಯಾತ ಚಿಂತಕ ಹಾಗೂ ಬರಹಗಾರರಾದ ಶ್ರೀ ಪೂರ್ಣಚಂದ್ರ ತೇಜಸ್ವಿಯವರ "ಶಿಶುವಿಹಾರದಿಂದ ಇಂಗ್ಲಿಷ್ ಬೇಕು ಅನ್ನೋದೆಲ್ಲ ನಾನ್‍ಸೆನ್ಸ್ ಆಗಿದೆ" ಎಂಬ ಮಾತು ಈ ಸಂದರ್ಭದಲ್ಲಿ ನೆನಪಿಗೆ ಬರುತ್ತವೆ.

ಹಾಗಾಗಿಯೇ ಇಂತದ್ದೊಂದು ಪಾಲಿಸಿಯು ಸರ್ಕಾರದ ಮಟ್ಟದಲ್ಲಿ ರೂಪುಗೊಂಡು, ಸರಿಯಾಗಿ ಜಾರಿಯಾಗುವ ಅವಶ್ಯಕತೆಯಿದೆ, ಈ ನಿಟ್ಟಿನಲ್ಲಿ 'ಆರುವರ್ಷದ ಒಳಗಿನ ಮಗುವಿನ ಕಲಿಕೆ ಕೇಂದ್ರಗಳಲ್ಲಿ(ಅಂಗನವಾಡಿ, ಪ್ಲೇ ಹೋಂ ಮೊದಲಾದುವು)ಕಡ್ಡಾಯವಾಗಿ ಮಗುವಿನ ತಾಯಿನುಡಿಯನ್ನೇ ಮಾಧ್ಯಮವಾಗಿ ಬಳಸಬೇಕೆಂಬ ಕಾನೂನು' ತುರ್ತಾಗಿ ಜಾರಿಯಾಗಲಿ. ಮೊಳಕೆಯೊಡೆಯುವ ಪ್ರತಿಭೆಗಳನ್ನು ಇಂಗ್ಲಿಷ್ ಮಾಧ್ಯಮದ ಹೇರಿಕೆಯಿಂದಾಗಿ ಚಿಗುರಿನಲ್ಲೇ ಚಿವುಟಿ ಹಾಕುವ ನಡೆಗಳಿಗೆ ಕಡಿವಾಣ ಬೀಳಲಿ.

No comments: