Tuesday, April 16, 2013

ಪವನ್ ಅಗರ್‍‍ವಾಲ್‍ರ Indian Higher Education – Envisioning The Future ಪುಸ್ತಕದ ಸೀಳುನೋಟ.

ಈ ಪುಸ್ತಕವನ್ನು ಬರೆದಿರುವ ಪವನ್ ಹಿರಿಯ ಐಎ‍ಎಸ್ ಅಧಿಕಾರಿ ಮತ್ತು ಉನ್ನತ ಕಲಿಕೆಯ ವಲಯದಲ್ಲಿ ಕೆಲಸ ಮಾಡಿದ ಅನುಭವವಿದೆ. ಇಡಿಯ ಪುಸ್ತಕವು ನಮ್ಮ ನಾಡಿನ ಉನ್ನತ ಕಲಿಕೆಯ ಬಗ್ಗೆ ಸಾಕಷ್ಟು ಅಂಕಿ ಅಂಶಗಳನ್ನು ಮತ್ತು ಹಲವು ವಿಚಾರಗಳನ್ನು ತೆರೆದಿಡುತ್ತದಲ್ಲದೆ ಜಗತ್ತಿನ ಮುಂದುವರೆದ ದೇಶಗಳಲ್ಲಿನ ಉನ್ನತ ಕಲಿಕೆಯ ಬಗೆಗೂ ಬೆಳಕು ಚೆಲ್ಲುತ್ತದೆ.

ಪುಸ್ತಕದಲ್ಲಿ ಕಂಡಿದ್ದು:

ಪುಸ್ತಕದ ಮೊದಲಿಗೆ ದೇಶದ ಉನ್ನತ ಕಲಿಕೆಯ ವಲಯದಲ್ಲಿ ಇರುವ ತೊಂದರೆಗಳನ್ನು ವಿವರಿಸುತ್ತಾ ನಮ್ಮ ಉನ್ನತ ಕಲಿಕೆಯಲ್ಲಿ ಲೆಕ್ಕವಿಲ್ಲದಷ್ಟು ತೊಂದರೆಗಳಿದ್ದು, ಕಲಿಕೆಯ ಗುಣಮಟ್ಟವು ಕುಸಿಯುತ್ತಿದೆ. ಪದವಿಯನ್ನು ಪಡೆದಿರುವ ಸಾಕಷ್ಟು ಜನರು ಕೆಲಸವನ್ನು ಪಡೆಯಲು ಯೋಗ್ಯವಾಗಿಲ್ಲ ಎಂಬ ಅಂಶಗಳ ಬಗ್ಗೆ ಬರೆದಿದ್ದಾರೆ. ಅಮೆರಿಕ,ಯು.ಕೆ, ಚೀನಾ ಮೊದಲಾದ ದೇಶಗಳಲ್ಲಿ ಉನ್ನತ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಹತ್ತು ಹಲವಾರು ಯೋಜನೆಗಳನ್ನು ಹಾಕಿಕೊಂಡು ಅದನ್ನು ಕಾರ್ಯಗತಗೊಳಿಸಿರುವುದನ್ನು ಹಾಗೂ ಇದಕ್ಕಾಗಿ ದೊಡ್ಡ ಮಟ್ಟದ ಹಣವನ್ನು ಸಹ ಕರ್ಚು ಮಾಡುತ್ತಿರುವುದನ್ನು ಸಹ ಸೂಕ್ತ ಅಂಕಿ ಅಂಶಗಳೊಂದಿಗೆ ಬರಹಗಾರರು ವಿವರಿಸಿದ್ದಾರೆ. ಈ ಎಲ್ಲಾ ದೇಶಗಳೂ ಸಹ ಪ್ರಾಥಮಿಕ ಕಲಿಕೆಯಿಂದ ಉನ್ನತ ಕಲಿಕೆಯವರೆಗೆ ತಾಯಿನುಡಿಯಲ್ಲೇ ತಮ್ಮ ಕಲಿಕೆ ವ್ಯವಸ್ತೆಯನ್ನು ಕಟ್ಟಿಕೊಂಡಿರುವುದನ್ನು ನಾವು ಗಮನಿಸಬಹುದಾಗಿದೆ. ತಮ್ಮ ನುಡಿಯಲ್ಲೇ ಕಟ್ಟಿಕೊಂಡಿರುವ ಈ ವ್ಯವಸ್ತೆಯ ಪರಿಣಾಮವಾಗಿ ಈ ದೇಶಗಳಲ್ಲಿ ಉನ್ನತ ಕಲಿಕೆಯ ಗುಣಮಟ್ಟವು ಹೆಚ್ಚಿ ಈ ದೇಶಗಳು ಮುಂದುವರಿಯಲು ಸಾದ್ಯವಾಗುತ್ತಿದೆ.

ಭಾರತದಲ್ಲಿಯೂ ಸಹ ಉನ್ನತ ಕಲಿಕೆಯಲ್ಲಿನ ಸುದಾರಣೆಗಾಗಿ ಹಲವಾರು ಆಯೋಗಗಳನ್ನು ರಚಿಸಿ ಶಿಫಾರಸ್ಸುಗಳುಳ್ಳ ರಿಪೋರ್ಟುಗಳನ್ನು ತಯಾರಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಉನ್ನತ ಕಲಿಕೆಗೆ ಹೆಚ್ಚಿನ ಮಹತ್ವವನ್ನು ಕೊಡಲಾಗುತ್ತಿದೆ. ಉನ್ನತ ಕಲಿಕೆಯು ಹಲವಾರು ಅವಕಾಶಗಳ ಬಾಗಿಲುಗಳನ್ನು ತೆರೆಯಬಲ್ಲುದು ಆದುದರಿಂದ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ತುಂಬಾ ಮುಖ್ಯ, ಇದಕ್ಕಾಗಿ ಉನ್ನತ ಕಲಿಕೆಯನ್ನು ಇನ್ನಷ್ಟು ಬಲಗೊಳಿಸಿಕೊಳ್ಳಬೇಕಿದೆ.

ಹೆಚ್ಚಿನ ಯುವಕರನ್ನು ಹೊಂದಿರುವ ನಮ್ಮ ದೇಶದಲ್ಲಿ ಹಲವಾರು ಕಾರಣಗಳಿಂದ ಉನ್ನತ ಕಲಿಕೆಯು ಕೈಗೆಟುಕದಂತಾಗಿದೆ, ಉನ್ನತ ಕಲಿಕೆಗಾಗಿ ದಾಖಲಾಗುತ್ತಿರುವವರ ಸಂಖ್ಯೆ ಕೇವಲ ಶೇಕಡ ಹನ್ನೊಂದರಷ್ಟಿದೆ. (ಪ್ರಪಂಚದ ಸರಾಸರಿ ಶೇ. 23) ಮತ್ತು ಮುಂದುವರಿದ ದೇಶಗಳಲ್ಲಿ ಇದು ಶೇ. 40 ರಷ್ಟಿದೆ. ಹೆಚ್ಚಿನ ಶೇಕಡ ಹೊಂದಿರುವ ದೇಶಗಳಲ್ಲೆಲ್ಲಾ ಕೆಳಹಂತದಿಂದ ಉನ್ನತ ಹಂತದವರೆಗೆ ತಾಯಿನುಡಿಯಲ್ಲೇ ಕಲಿಕೆ ನಡೆಯುತ್ತಿರುವುದು ಎದ್ದು ಕಾಣುತ್ತದೆ.

ಒಟ್ಟಾರೆಯಾಗಿ, ಈ ಪುಸ್ತಕವನ್ನು ಓದಿದಾಗ ನನಗನಿಸಿದ್ದು:

ಸಮಾನ ಅವಕಾಶ ಮತ್ತು ಒಳಗೊಳ್ಳುವಿಕೆಯು ಯಾವುದೇ ಆರೋಗ್ಯವಂತ ಹಾಗೂ ಮುಂದುವರೆಯುತ್ತಿರುವ ಸಮಾಜದ ಲಕ್ಷಣವಾಗಿರುತ್ತದೆ. ಗುಣಮಟ್ಟದ ಕಲಿಕೆಯನ್ನು ಪಡೆಯುವುದರಿಂದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಮಾನ ಅವಕಾಶಗಳು ದೊರೆತು, ನಾಡನ್ನು ಕಟ್ಟುವ ಕೆಲಸದಲ್ಲಿ ಕೈಜೋಡಿಸಲು ಎಲ್ಲಾ ವರ್ಗದ ಜನರಿಗೆ ಸಾದ್ಯವಾಗುತ್ತದೆ. ಕೇವಲ ಭಾಷೆಯ ಕಾರಣದಿಂದ ಸಾಮಾನ್ಯರು ಉನ್ನತ ಕಲಿಕೆಯಿಂದ ದೂರ ಉಳಿಯುವಂತಾಗಬಾರದು. ಎಲ್ಲರನ್ನು ಒಳಗೊಳ್ಳುವಿಕೆಯೆಂದರೆ -  ಪ್ರತಿಯೊಬ್ಬ ನಾಗರೀಕನಿಗೂ ಉನ್ನತ ಕಲಿಕೆ ನಡೆಸಲು ಅವಕಾಶವಿರಬೇಕು. ಇದು ಸಾದ್ಯವಾಗಬೇಕಾದರೆ ಎಲ್ಲಾ ಹಂತದ ಕಲಿಕೆಯು ತಾಯಿನುಡಿಯಲ್ಲೇ ಸಿಗುವಂತಾಗಬೇಕಿದೆ.

No comments: