Friday, March 15, 2013

ಯುಪಿಎಸ್ಸಿಯ ಹೊಸ ನಿಯಮಗಳು ಮತ್ತು ಭಾರತ ಒಕ್ಕೂಟದಲ್ಲಿನ ಭಾಷಿಕ ತಾರತಮ್ಯ

ಕೇಂದ್ರ ಲೋಕಸೇವಾ ಆಯೋಗವು(ಯುಪಿಎಸ್ಸಿ) ಇತ್ತೀಚೆಗೆ ಮಾಡಿರುವ ನಿಯಮ ಬದಲಾವಣೆಗಳು ಒಕ್ಕೂಟ ಧರ್ಮದ ಆಶಯಗಳಿಗೆ ವಿರುದ್ದವಾಗಿವೆ. ಭಾಷಾವೈವಿದ್ಯತೆಯ ದೇಶದಲ್ಲಿ ಎಲ್ಲಾ ಭಾಷೆಗಳನ್ನೂ ಸಮಾನವಾಗಿ ಕಾಣಬೇಕಾದ ಭಾರತ ಒಕ್ಕೂಟ ಸರ್ಕಾರವು, ಹಿಂದಿ ಮತ್ತು ಇಂಗ್ಲೀಶನ್ನು ಮಾತ್ರ ಎಲ್ಲಕಿಂತ ಮೇಲು ಎಂದು  ಬಿಂಬಿಸುತ್ತಾ ಬಂದಿದೆ. ಇದೀಗ ಹೊಸ ನಿಯಮಗಳನ್ನು ಜಾರಿಗೆ ತರುವ ಮೂಲಕ ಹಿಂದಿಯೇತರ ಭಾಷಿಕರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ನೋಡಲಾಗುತ್ತಿದೆ.


ಕನ್ನಡದಲ್ಲಿ ಪರೀಕ್ಷೆ ಬರೆಯಲು ಕನಿಷ್ಟ ಇಪ್ಪತ್ತೈದು ಅಭ್ಯರ್ಥಿಗಳು ಇರದಿದ್ದರೆ ಹಿಂದಿ ಅಥವಾ ಇಂಗ್ಲಿಶ್‍ನಲ್ಲಿ ಉತ್ತರಿಸಬೇಕಂತೆ. ಆದರೆ ಹಿಂದಿ ಭಾಷಿಕರಿಗೆ ಈ ನಿಯಮವಿಲ್ಲ. ಈ ನಿಯಮವು ಹಿಂದಿ ಅಥವಾ ಇಂಗ್ಲಿಶ್ ಎರಡು ಭಾಷೆಯಲ್ಲಿ ಹಿಡಿತ ಹೊಂದಿರದ ದೇಶದ ವಿವಿದ ಭಾಗಗಳ ಅಭ್ಯರ್ಥಿಗಳ ಹಿತಾಸಕ್ತಿಗಳಿಗೆ ವಿರುದ್ದವಾಗಿದೆ, ಉದಾಹರಣೆಗೆ ಕನ್ನಡದಲ್ಲಿ ಇಪ್ಪತ್ನಾಲ್ಕು ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಸಿದ್ದವಿದ್ದರೂ ಸಹ ಕನ್ನಡದಲ್ಲಿ ಪರೀಕ್ಷೆಯನ್ನು ನಡೆಸುವುದಿಲ್ಲ. ಆದರೆ ಹಿಂದಿಯಲ್ಲಿ ಯಾರೊಬ್ಬರೂ ಸಹ ಉತ್ತರಿಸಲು ಮುಂದೆ ಬರದಿದ್ದರೂ ಹಿಂದಿ ಭಾಷೆಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಒಂದು ಭಾಷೆಗೆ ಮಾತ್ರ ವಿಶೇಷ ಸ್ಥಾನಮಾನ ನೀಡುವ ಇಂತಹ ನಿಯಮವನ್ನು ಕೈ ಬಿಡದ ಹೊರತು ಸಮಾನತೆಯ ಸಮಾಜವನ್ನು ಕಟ್ಟುವುದು ಕನಸಿನ ಮಾತು. ಹಿಂದಿ ಅಥವಾ ಇಂಗ್ಲಿಶ್ ಭಾಷೆಯನ್ನು ಅರಿಯದ ವಿದ್ವಾಂಸರು, ದಾರ್ಶನಿಕರು ಮತ್ತು ದಕ್ಷ ಆಡಳಿತಗಾರರು ನಮ್ಮ ದೇಶದ ಇತಿಹಾಸದಲ್ಲಿ ಬಂದು ಹೋಗಿದ್ದಾರೆ ಎಂಬುದನ್ನು ನಾವು ಎಂದಿಗೂ ಮರೆಯುವಂತಿಲ್ಲ.

ಪದವಿಯನ್ನು ಕನ್ನಡ ಮಾಧ್ಯಮದಲ್ಲಿ ಓದಿದ್ದರೆ ಮಾತ್ರ ಕನ್ನಡದಲ್ಲಿ ಉತ್ತರಿಸುವ ಅವಕಾಶ ಆದರೆ ಹಿಂದಿಯಲ್ಲಿ ಉತ್ತರಿಸುವವರಿಗೆ ಇವೆಲ್ಲ ಅನ್ವಯವಾಗುವುದಿಲ್ಲ.ಅಲ್ಲದೆ ಪದವಿಯಲ್ಲಿ ಬೇರೆ ವಿಷಯಗಳನ್ನು ಓದಿ, ಸಾಹಿತ್ಯದಲ್ಲಿ ಆಸಕ್ತಿಯಿರುವ ಅಭ್ಯರ್ಥಿಗಳು ಕನ್ನಡ ಸಾಹಿತ್ಯವನ್ನು ವಿಷಯವಾಗಿ ಆಯ್ದುಕೊಳ್ಳುವಂತಿಲ್ಲ, ಇದಕ್ಕೆ ಪದವಿಯಲ್ಲಿ ಕನ್ನಡ ಸಾಹಿತ್ಯವನ್ನು ಐಚ್ಚಿಕವಾಗಿ ಓದಿರಲೇಬೇಕಂತೆ. ಇಂಗ್ಲೀಶ್ ಮಾಧ್ಯಮದಲ್ಲಿ ಪದವಿ ಮುಗಿಸಿದವರು, ತಮ್ಮ ತಾಯ್ನುಡಿಯಲ್ಲಿಯೇ ಯು.ಪಿ.ಎಸ್.ಸಿ ಪರೀಕ್ಷೆ ಬರೆಯಬಯಸಿದರೆ ಹೊಸ ನಿಯಮಗಳ ಪ್ರಕಾರ ಅದಕ್ಕೆ ಅವಕಾಶವಿಲ್ಲ. ಪದವಿಯಲ್ಲಿ ಇಂಗ್ಲಿಶ್ ಮಾಧ್ಯಮವನ್ನು ಆಯ್ದುಕೊಂಡಿದ್ದರೂ ಸಹ ಕಾರಣಾಂತರಗಳಿಂದ ಇಂಗ್ಲಿಶ್ ಭಾಷೆಯಲ್ಲಿ ಉತ್ತಮ ಹಿಡಿತವನ್ನು ಪಡೆಯಲು ಸಾದ್ಯವಾಗದೆ ಹೋಗಿರಬಹುದು ಆದರೆ ಹೊಸ ನಿಯಮಾವಳಿಗಳು ತಮಗೆ ಬೇಕಾದ ಭಾಷೆಯಲ್ಲಿ ಉತ್ತರಿಸುವ ಅವಕಾಶವನ್ನು ಕೊಡದೇ, ಇಂಗ್ಲಿಶ್‍ ಅಥವಾ ಹಿಂದಿಯಲ್ಲೇ ಉತ್ತರಿಸಬೇಕು ಎಂಬ ಷರತ್ತಿನಿಂದಾಗಿ ಇಂತಹ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಪಾಸಾಗುವ ಸಾದ್ಯತೆಗಳು ಕಡಿಮೆಯಾಗುತ್ತದೆ. ಇಂಗ್ಲಿಶ್ ಅಥವಾ ಹಿಂದಿ ಬಲ್ಲವರು ಮಾತ್ರ ಬುದ್ದಿವಂತರು ಎಂಬುದನ್ನು ಒಪ್ಪಲಾಗುವುದಿಲ್ಲ. ಈ ಎರಡು ಭಾಷೆಗಳ ಗಂದಗಾಳಿಯೇ ಅರಿಯದ ನೂರಾರು ಅತ್ಯುತ್ತಮ ಆಡಳಿತಗಾರರನ್ನು ನಮ್ಮ ದೇಶವು ಕಂಡಿದೆ. ಚರಿತ್ರೆಯನ್ನು ನೋಡಿದಾಗ ನಮಗೆ ಕಂಡುಬರುವ ಇಂತಹ ಆಡಳಿತಗಾರರು ಕೇವಲ ತಮ್ಮ ನುಡಿಯಲ್ಲೇ ಉತ್ತಮ ಆಡಳಿತ ನೀಡುವುದು ಸಾದ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ..

ಹಿಂದಿಯೇತರ ಭಾಷಿಕರಿಗೆ ನಾಗರೀಕ ಸೇವೆಯಂತಹ ಉನ್ನತ ಹುದ್ದೆಗಳನ್ನು ಪಡೆಯುವುದು ಕಷ್ಟವಾಗಲಿ ಎಂಬ ದುರುದ್ದೇಶದಿಂದ ಈ ಇಬ್ಬಗೆಯ ನಿಯಮಗಳನ್ನು ಮಾಡಿದಂತಿದೆ. ಕೇಂದ್ರ ಸರ್ಕಾರವು ಮೊದಲಿನಿಂದಲೂ ಹಿಂದಿ ಭಾಷಿಕರಿಗೆ ಹೆಚ್ಚಿನ ಸ್ಥಾನಮಾನವನ್ನು ಕೊಡುತ್ತಾ ಬಂದಿದೆ. ಕೇಂದ್ರ ಸರ್ಕಾರ ನಡೆಸುವ ಹೆಚ್ಚಿನ ಸ್ಪರ್ಧಾತ್ಮಕ ಪರೀಕ್ಷೆಗಳು ಹಿಂದಿ ಅಥವಾ ಇಂಗ್ಲಿಶ್‍ನಲ್ಲಿ ಮಾತ್ರ ಲಭ್ಯ. ಹೀಗೆ ಹಿಂದಿಗೆ ವಿಶೇಷ ಸವಲತ್ತು ಕೊಟ್ಟು ಕನ್ನಡಿಗರ ಬಗ್ಗೆ ತೋರುವ ಈ ತಾತ್ಸಾರವನ್ನು ಸಹಿಸಿಕೊಳ್ಳುವುದು ಸಾದ್ಯವಿಲ್ಲ. ಹೀಗೆ ಮಾಡುವುದು ಸಮಾನತೆಯೇ ಜೀವಾಳವಾದ ಒಕ್ಕೂಟ ವ್ಯವಸ್ತೆಯ ಆಶಯಗಳಿಗೆ ಅಪಚಾರವೆಸಗಿದಂತೆ.

ಸಮುದಾಯಗಳ ಭಾಷಿಕ ಹಕ್ಕುಗಳನ್ನು ಕಸಿದುಕೊಳ್ಳುವುದು ಯಾವುದೇ ಪ್ರಜಾಪ್ರಭುತ್ವವುಳ್ಳ ದೇಶಕ್ಕೆ ಶೋಭೆ ತರುವಂತದಲ್ಲ. ದೇಶದ ಎಲ್ಲಾ ಭಾಷಿಕರಿಗೂ ಸಮಾನ ಗೌರವ ಮತ್ತು ಸಮಾನ ಅವಕಾಶ  ಕೊಡಮಾಡುವುದರ ಮೂಲಕ ನಮ್ಮ ಒಕ್ಕೂಟ ವ್ಯವಸ್ಥೆಯನ್ನು ಇನ್ನೂ ಶಕ್ತಿಶಾಲಿಯಾಗಿಸಬಹುದು ಎಂಬುದು ನನ್ನ ಬಲವಾದ ನಂಬಿಕೆಯಾಗಿದೆ. ರಾಜ್ಯದ ರಾಜಕಾರಣಿಗಳು ಈಗಲಾದರೂ ತಮ್ಮ ಮೌನ ಮುರಿದು ಕನ್ನಡಿಗರ ಹಿತಕಾಯುವ ಕೆಲಸಕ್ಕೆ ಮುಂದಾಗಬೇಕು ಈ ರೀತಿಯ ಭಾಷಾ ತಾರತಮ್ಯವನ್ನು ವಿರೋದಿಸಬೇಕು. ಇಲ್ಲದೇ ಹೋದಲ್ಲಿ ನಮ್ಮ ನೆಲದಲ್ಲೇ ಎರಡನೆಯ ದರ್ಜೆಯ ಪ್ರಜೆಯಾಗಿ ಬದುಕುವ ಅನಿವಾರ್ಯ ಕರ್ಮ ಕನ್ನಡಿಗರದ್ದಾಗಲಿದೆ. 

No comments: