Tuesday, October 22, 2013

ನಮ್ಮ ಘಟ್ಟ, ಹೊರಗಿನವರಿಗೆ ಪಟ್ಟ!

"ಆಳ್ವಿಕೆಯು ಚೆನ್ನಾಗಿದೆ ಎಂದ ಮಾತ್ರಕ್ಕೆ ಅದು ಸ್ವಂತ ಆಳ್ವಿಕೆಗೆ ಬದಲಿಯಾಗಲಾರದು" ಮಹಾತ್ಮ ಗಾಂಧಿ

"Good government is no substitute for self-government". - Mahatma Gandhi

ಪಶ್ಚಿಮ ಘಟ್ಟಗಳನ್ನು ಕಾಪಾಡುವುದಕ್ಕಾಗಿ ಕೇಂದ್ರದ ಒಕ್ಕೂಟ ಸರ್ಕಾರವು ಹೊಸ ಕಾನೂನನ್ನು ಜಾರಿಗೊಳಿಸುತ್ತಿದೆಯಂತೆ, ಒಕ್ಕೂಟ ಸರ್ಕಾರದ ಈ ನಡೆಯ ಹಿನ್ನೆಲೆಯಾಗಿಟ್ಟುಕೊಂಡು ಪರಿಸ್ತಿತಿಯನ್ನು ಅವಲೋಕಿಸಿದಾಗ ಮತ್ತದೇ ಕೇಂದ್ರೀಕೃತ ವ್ಯವಸ್ತೆಯ ಹುಳುಕುಗಳು ಕಣ್ಣಿಗೆ ರಾಚುತ್ತವೆ. ಇಲ್ಲಿ ನಾನು ಎತ್ತುತ್ತಿರುವ ಪ್ರಶ್ನೆ ಪಶ್ಚಿಮ ಘಟ್ಟಗಳನ್ನು ಕಾಪಾಡುವುದಕ್ಕೆ ಮಾಡಿರುವ ಕಾನೂನು ಸರಿಯಿದೆಯೋ ಇಲ್ಲವೋ ಎಂಬುದರ ಬಗ್ಗೆ ಅಲ್ಲವೇ ಅಲ್ಲ. ಈ ಕಾನೂನುಗಳನ್ನು ಮಾಡಬೇಕಿರುವುದು ಯಾರು? ಯಾರು ಮಾಡಿದರೆ ಅದು ಸರಿಯಾದ ಒಕ್ಕೂಟ ವ್ಯವಸ್ತೆಯಾಗುತ್ತದೆ ಅನ್ನುವುದರ ಬಗ್ಗೆ.

ಗುಜರಾತ್ ಮತ್ತು ಮಹಾರಾಷ್ಟ್ರದ ಗಡಿಬಾಗದಿಂದ ಶುರುವಾಗಿ ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನವಗೆ ಹಬ್ಬಿರುವ ಈ ವಿಶೇಷವಾದ ನೆಲವನ್ನು ಕಾಪಾಡಬೇಕೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇದನ್ನು ಆಯಾ ರಾಜ್ಯದವರೇ ಮಾಡಬೇಕಲ್ಲವೇ? ಉದಾಹರಣೆಗೆ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖದ ಬಾಗದಲ್ಲಿ ಬರುವ ಘಟ್ಟಗಳ ಬಗ್ಗೆ ಅಲ್ಲಿನ ಸರ್ಕಾರದ ಕೈಯಲ್ಲೇ ಅಧಿಕಾರವಿರಬೇಕೇ ಹೊರತು ಪಶ್ಚಿಮ ಬಂಗಾಲದಿಂದ ಆಯ್ಕೆಯಾಗಿ, ಕೇಂದ್ರ ಸರ್ಕಾರದಲ್ಲಿ ಮಂತ್ರಿಯೋ ಮತ್ತೊಂದೋ ಆಗಿರುವವರ ಕೈಯಲ್ಲಲ್ಲ. ಹಾಗೆ ಆಗಿದ್ದೇ ಆದಲ್ಲಿ ಸ್ವಂತ ಆಳ್ವಿಕೆ (Self Rule) ಅನ್ನುವುದರ ಅರ್ಥವಾದರೂ ಏನು? 

ಈ ರೀತಿಯಾಗಿ ರಾಜ್ಯಗಳಿಂದ ಒಂದೊಂದೇ ಅಧಿಕಾರವನ್ನು ಕಿತ್ತುಕೊಳ್ಳುವುದರ ಮೂಲಕ ಕೇಂದ್ರ ಸರ್ಕಾರವು ಎಂತಹ ಸಂದೇಶವನ್ನು ಕೊಡುತ್ತಿದೆ? ನಿಮ್ಮನ್ನು ನೀವು ಆಳಿಕೊಳ್ಳುವುದಕ್ಕೆ ನಿಮಗೆ ತಾಕತ್ತಿಲ್ಲ, ನಾವೇ ನಿಮಗಿಂತ ಸಮರ್ಥರು ಹಾಗಾಗಿ ನಾವು ನಿಮಗಾಗಿ ಕಾನೂನನ್ನು ಮಾಡುತ್ತೇವೆ, ನೀವು ಅದರಂತೆ ನಡೆದುಕೊಳ್ಳಿ ಸಾಕು ಎಂದಲ್ಲವೇ?  ಆಯ್ತು ಒಂದುವೇಳೆ ಅವರೇ ನಮಗಿಂತ ಸಮರ್ಥರು ಎಂದಿಟ್ಟುಕೊಳ್ಳಿ, ಶ್ರೀಲಂಕಾ ಸರ್ಕಾರವು ಆಡಳಿತದಲ್ಲಿ ನಿಮಗಿಂತ ಸಮರ್ಥರು ಎಂದಾದರೆ ನೀವು ಅವರಿಂದ ಆಳಿಸಿಕೊಳ್ಳಲು ಸಿದ್ದವಾಗಿದ್ದೀರಾ? ಅದೆಂಗೆ ಆಗುತ್ತೆ ಅವರು ಹೊರಗಿನವರು ಎಂದಾದಲ್ಲಿ ಚಿಕ್ಕಮಗಳೂರಿಗೆ ದೆಹಲಿಯೂ ಬಹಳ ದೂರದ್ದು. ಇಲ್ಲಿಯ ಕುಗ್ರಾಮವೊಂದರ ಬಗೆಗಿನ ನಿರ್ಧಾರವನ್ನು ದೆಹಲಿಯಲ್ಲಿ ಕೂತು ತೆಗೆದುಕೊಳ್ಳುವುದು ಅತ್ಯಂತ ಅವೈಜ್ನಾನಿಕ. 

ಎಲ್ಲವನ್ನೂ ತನ್ನ ಕಪಿಮುಷ್ಟಿಯಲ್ಲೇ ಹಿಡಿದುಕೊಂಡಿಟ್ಟುಕೊಳ್ಳಬೇಕೆಂಬ ಮನಸ್ತಿತಿಯೇ ಘೋರವಾದದ್ದು, ಕೇಂದ್ರದ ಇಂತಹ ನಿಲುವುಗಳು ಹಿಂದಿನ ಅರಸೊತ್ತಿಗೆ ಕಾಲದಲ್ಲಿ ಇದ್ದಂತಹ ಸಾಮಂತರು ಮತ್ತು ಚಕ್ರವರ್ತಿಯ ಯಥಾವತ್ ನಕಲಿನಂತೆ ಕಾಣುತ್ತದೇಯೇ ಹೊರತು ಒಂದು ಸರಿಯಾದ ಪ್ರಜಾಪ್ರಭುತ್ವವುಳ್ಳ ಒಕ್ಕೂಟ ವ್ವವಸ್ತೆಯಂತೆ ಅಲ್ಲವೇ ಅಲ್ಲ. ಹಾಗಿದ್ದರೆ ಕೇಂದ್ರ ಸರ್ಕಾರದ ಪಾತ್ರವೇನು ಎಂಬುದಾದರೆ ರಾಜ್ಯಗಳ ಆಳ್ವಿಕೆಯಲ್ಲಿ ಕೈ ಹಾಕದೆ ವಿದೇಶ ವ್ಯವಹಾರ, ಗಡಿಯಂತಹ ಇಲಾಖೆಗಳಿಗೆ ಸೀಮಿತವಾಗಬೇಕು. ರಾಜ್ಯಗಳು ಬಲಶಾಲಿಯಾದ ಮಾತ್ರ ದೇಶವು ಬಲಶಾಲಿಯಾಗುತ್ತದೆ. ಯಾಕೆಂದರೆ ರಾಜ್ಯಗಳಿಂದ ದೇಶವೇ ಹೊರತು ದೇಶಗಳಿಂದ ರಾಜ್ಯಗಳಲ್ಲ.
ಚಿತ್ರ: ಇಂಟರ್ನೆಟ್

Friday, September 27, 2013

ಚಿಕ್ಕಮಕ್ಕಳ ಕಲಿಕೆ ಮತ್ತು ತಾಯಿನುಡಿಯ ಬಳಕೆ


ಇತ್ತೀಚೆಗೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಒಂದು ವರದಿ ಪ್ರಕಟವಾಗಿತ್ತು. ಅದರಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವಾಲಯವು ಜಾರಿಗೊಳಿಸಲು ಉದ್ದೇಶಿಸಿರುವ ಹೊಸ ನೀತಿಯೊಂದರ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ನೀತಿಯು ಮಗುವಿನ ಎಳೆವಯಸ್ಸಿನ ಆರೈಕೆ ಮತ್ತು ಮೊದಲನೆ ಹಂತದ ಕಲಿಕೆಯ ಕುರಿತಾದ ನೀತಿಯ ಒಂದು ಭಾಗವಾಗಿದ್ದು. ಈ ಹೊಸ ನೀತಿಯ ಪ್ರಕಾರ ಆರುವರ್ಷದ ಒಳಗಿನ ಮಗುವಿನ ಕಲಿಕೆ ಕೇಂದ್ರಗಳಲ್ಲಿ(ಅಂಗನವಾಡಿ, ಪ್ಲೇ ಹೋಂ ಮೊದಲಾದುವು)ಕಡ್ಡಾಯವಾಗಿ ಮಗುವಿನ ತಾಯಿನುಡಿಯನ್ನೇ ಮಾಧ್ಯಮವಾಗಿ ಬಳಸಬೇಕೆಂಬ ಕಾನೂನು ಜಾರಿಯಾಗಲಿದೆ. ಮಗುವು ತನ್ನ ಮನೆಯಲ್ಲಿ ಬಳಸುವ ನುಡಿಯಲ್ಲೇ ಕಲಿಕೆಯನ್ನು ಶುರುಮಾಡುವುದರಿಂದ ಮಗುವಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿ, ಹೆದರಿಕೆ, ಹಿಂಜರಿಕೆಗಳಿಲ್ಲದ ಮುಂದಿನ ಹಂತದ ಕಲಿಕೆಯಲ್ಲಿ ಹೆಚ್ಚಿನ ತೊಡಗುವಿಕೆಗೆ ಕಾರಣವಾಗುತ್ತದೆ ಎಂಬ ವೈಜ್ನಾನಿಕ ಹಿನ್ನಲೆಯಲ್ಲಿ ಈ ನೀತಿಯನ್ನು ರೂಪಿಸಲಾಗಿದೆ.

ಸಧ್ಯದ ಪರಿಸ್ಥಿತಿಯಲ್ಲಿ ಇಂತದ್ದೊಂದು ನಿಯಮದ ಮಾಡಿ ಜನರಿಗೆ ಯಾವುದು ಸರಿ ಎಂಬುದರ ಬಗ್ಗೆ ಮನವರಿಕೆ ಮಾಡಿಕೊಡುವುದು ಸರಿಯಾದದ್ದು. ಮಗುವಿಗೆ ಒಳ್ಳೆಯ ಕಲಿಕೆಯೆಂದರೆ ಅದು ಇಂಗ್ಲಿಷ್ ಮಾಧ್ಯಮದಿಂದ ಮಾತ್ರ ಅನ್ನು ತಪ್ಪು ತಿಳುವಳಿಕೆ ಇಂದಿನ ತಂದೆತಾಯಿಗಳಿಗಿದೆ. ಮಗುವಿನ ಕಲಿಕೆ ಪೂರ್ತಿಯಾಗಿ ಇಂಗ್ಲಿಷ್‍ನಲ್ಲೇ ಇರಬೇಕೆಂದು ಹರಸಾಹಸ ಪಟ್ಟು ಕೃತಕವಾದ ಇಂಗ್ಲಿಷ್ ವಾತಾವರಣವನ್ನು ಹುಟ್ಟುಹಾಕುವ, ಮಗುವು ತನ್ನ ತಾಯಿನುಡಿಯನ್ನು ಬಳಸುವುದೇ ಅಪರಾಧವೇನೋ ಎಂಬಂತಹ ಪರಿಸ್ಥಿತಿಯನ್ನು ಉಂಟುಮಾಡಲಾಗುತ್ತಿದೆ. ತನ್ನ ತಾಯಿನುಡಿಯ ಹಾಗೂ ತನ್ನ ತಾಯಿನುಡಿಯನ್ನಾಡುವ ಭಾಷಿಕ ಸಮುದಾಯದ ಸಂಪರ್ಕವನ್ನು ಎಳೆವಯಸ್ಸಿನಲ್ಲಿಯೇ ಅಸಹಜವಾಗಿ ಕಡಿದುಕೊಂದು, ಇಂತಹ ಒಂದು ಕಟ್ಟುಪಾಡುಗಳಲ್ಲಿ ಬೆಳೆಯುವ ಮಗುವಿಗೆ ಮುಂದೆ ದೊಡ್ಡವನಾದಾಗ ತನ್ನತನದ ಅರಿವಿನ ಕೊರತೆ ಕಾಡದಿರದು. ಹೀಗೆ ಒಂದು ಇಡಿಯ ಜನಾಂಗಕ್ಕೆ ಬೇರೆ ಭಾಷೆಯಲ್ಲಿಯೇ ಕಲಿಕೆಯನ್ನು ಕೊಡುವ ಪದ್ದತಿಯಿಂದಾಗಿಯೇ ಇಂದು ಆಪ್ರಿಕಾದ ಕೆಲ ದೇಶಗಳಲ್ಲಿ ನೂರಾರು ಭಾಷಿಕ ಸಮುದಾಯಗಳು ತನ್ನ ಸಾಂಸ್ಕೃತಿಕ ಅಸ್ಥಿತ್ವವನ್ನೇ ಕಳೆದುಕೊಳ್ಳುತ್ತಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ.

ಮಗುವಿನ ಕಲಿಕೆ ಅದರ ತಾಯಿನುಡಿಯಲ್ಲಾಗಬೇಕೆಂಬುದು ಈಗಾಗಲೇ ವೈಜ್ನಾನಿಕವಾಗಿ ತೋರಿಸಲ್ಪಟ್ಟಿದೆ, ಯುನೆಸ್ಕೋದ ವರದಿಯೂ ಸಹ ಇದನ್ನು ಅನುಮೋದಿಸಿದೆ. ಆದರೂ ಸಹ ಮಗುವಿಗೆ ಇಂಗ್ಲಿಷ್ ಮಾಧ್ಯಮದ ಹೊರೆ ಹೇರುತ್ತಿರುವುದು ದಿನೇ ದಿನೇ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗಿಲ್ಲ. ಅದರಲ್ಲೂ ಇನ್ನೂ ತೊದಲುನುಡಿಯುತ್ತಿರುವ ಎಳೆಯ ಮಕ್ಕಳಿಗೂ ಸಹ ಬೇರೊಂದು ಅಪರಿಚಿತ ಭಾಷೆಯನ್ನು ಮಾಧ್ಯಮವಾಗಿ ಹೇರುವುದು ಮತ್ತು ಅದಕ್ಕಾಗಿ ಕೃತಕ ವಾತಾವರಣವನ್ನು ಉಂಟುಮಾಡುವ ಪ್ರಯತ್ನಗಳು ಅವೈಜ್ನಾನಿಕವಷ್ಟೇ ಅಲ್ಲದೆ ಕಠೋರವಾದದ್ದು. ಕನ್ನಡದ ಖ್ಯಾತ ಚಿಂತಕ ಹಾಗೂ ಬರಹಗಾರರಾದ ಶ್ರೀ ಪೂರ್ಣಚಂದ್ರ ತೇಜಸ್ವಿಯವರ "ಶಿಶುವಿಹಾರದಿಂದ ಇಂಗ್ಲಿಷ್ ಬೇಕು ಅನ್ನೋದೆಲ್ಲ ನಾನ್‍ಸೆನ್ಸ್ ಆಗಿದೆ" ಎಂಬ ಮಾತು ಈ ಸಂದರ್ಭದಲ್ಲಿ ನೆನಪಿಗೆ ಬರುತ್ತವೆ.

ಹಾಗಾಗಿಯೇ ಇಂತದ್ದೊಂದು ಪಾಲಿಸಿಯು ಸರ್ಕಾರದ ಮಟ್ಟದಲ್ಲಿ ರೂಪುಗೊಂಡು, ಸರಿಯಾಗಿ ಜಾರಿಯಾಗುವ ಅವಶ್ಯಕತೆಯಿದೆ, ಈ ನಿಟ್ಟಿನಲ್ಲಿ 'ಆರುವರ್ಷದ ಒಳಗಿನ ಮಗುವಿನ ಕಲಿಕೆ ಕೇಂದ್ರಗಳಲ್ಲಿ(ಅಂಗನವಾಡಿ, ಪ್ಲೇ ಹೋಂ ಮೊದಲಾದುವು)ಕಡ್ಡಾಯವಾಗಿ ಮಗುವಿನ ತಾಯಿನುಡಿಯನ್ನೇ ಮಾಧ್ಯಮವಾಗಿ ಬಳಸಬೇಕೆಂಬ ಕಾನೂನು' ತುರ್ತಾಗಿ ಜಾರಿಯಾಗಲಿ. ಮೊಳಕೆಯೊಡೆಯುವ ಪ್ರತಿಭೆಗಳನ್ನು ಇಂಗ್ಲಿಷ್ ಮಾಧ್ಯಮದ ಹೇರಿಕೆಯಿಂದಾಗಿ ಚಿಗುರಿನಲ್ಲೇ ಚಿವುಟಿ ಹಾಕುವ ನಡೆಗಳಿಗೆ ಕಡಿವಾಣ ಬೀಳಲಿ.

Thursday, September 26, 2013

ಕನ್ನಡ ನೆಲದಲ್ಲಿ ಕನ್ನಡಿಗ 2ನೇ ದರ್ಜೆಯ ಪ್ರಜೆ!

ದಟ್ಸ್ ಕನ್ನಡ ಪತ್ರಿಕೆಯಲ್ಲಿ ಪ್ರಕಟವಾಗಿರುವ ನನ್ನ ಅಂಕಣ

ಕೇಂದ್ರ ಸರ್ಕಾರವು ಪ್ರತಿವರ್ಷ ಸೆಪ್ಟೆಂಬರ್ ಹದಿನಾಲ್ಕರಂದು 'ಹಿಂದಿ ದಿವಸ'ವನ್ನಾಗಿ ಆಚರಿಸುತ್ತದೆ. ಭಾರತದಂತಹ ವೈವಿಧ್ಯತೆಯ ದೇಶದಲ್ಲಿ ಕೇವಲ ಒಂದು ಭಾಷೆಗೆ ಮಾತ್ರ ವಿಶೇಷದಿನವನ್ನಾಗಿ ಆಚರಿಸುವುದರ ಹಿಂದಿನ ಸತ್ಯಗಳನ್ನು ಕೆದಕುತ್ತಾ ಹೋದರೆ ಕೇಂದ್ರ ಸರ್ಕಾರವು ಪಾಲಿಸುತ್ತಿರುವ ಹುಳುಕಿನ ಭಾಷಾ ನೀತಿಯ ಕರಾಳ ಮುಖಗಳು ನಮಗೆ ಕಂಡು ಬರುತ್ತವೆ. ಕೆಲ ಕನ್ನಡಿಗರಿಗೆ ಹಿಂದಿಯು ರಾಷ್ಟ್ರಭಾಷೆ ಹಾಗಾಗಿ ಅದನ್ನು ಕಲಿಯಬೇಕು ಪೋಷಿಸಬೇಕು ಎಂಬ ಭಾವನೆಯಿದೆ. ಮೊದಲನೆಯದಾಗಿ ಹಿಂದಿ ರಾಷ್ಟ್ರಭಾಷೆ ಎಂಬುದು ನಿಜವಲ್ಲ, ನಮ್ಮ ದೇಶದ ಸಂವಿದಾನದಲ್ಲಿ ಯಾವುದೇ ನುಡಿಗೆ ರಾಷ್ಟ್ರಭಾಷೆಯ ಮನ್ನಣೆ ಕೊಟ್ಟಿಲ್ಲ. ಇದನ್ನು ಗುಜರಾತ್ ಹೈಕೋರ್ಟ್ ಸಹ 2010ರಲ್ಲಿ ತನ್ನ ತೀರ್ಪೊಂದರಲ್ಲಿ ಸ್ಪಷ್ಟವಾಗಿ ಹೇಳಿದೆ.

ಆದರೆ ಕೇಂದ್ರ ಸರ್ಕಾರವು ಕರ್ನಾಟಕವು ತ್ರಿಭಾಷಾ ಸೂತ್ರವನ್ನು ಪಾಲಿಸುವಂತೆ ಮಾಡುವ ಮೂಲಕ ಹಿಂದಿಯನ್ನು ರಾಷ್ಟ್ರಭಾಷೆಯೆಂಬಂತೆ ಬಿಂಬಿಸುತ್ತಲೇ ಇದೆ. ಕೇಂದ್ರ ಸರ್ಕಾರವು ರಾಜಭಾಷಾ ಆಯೋಗದ ಮೂಲಕ ಹಿಂದಿಯನ್ನು ಕರ್ನಾಟಕದಂತಹ ಹಿಂದಿಯೇತರ ರಾಜ್ಯಗಳ ಮೇಲೆ ನಿರಂತರವಾಗಿ ಹೇರಿಕೆ ಮಾಡುತ್ತಿದೆ. ಹಿಂದಿಯನ್ನು ಪ್ರಚಾರ ಮಾಡುವುದಕ್ಕಾಗಿ ಹತ್ತು ಹಲವು ಯೋಜನೆಗಳನ್ನು ಹಾಕುತ್ತಾ, ಕೇಂದ್ರ ಸರ್ಕಾರವು ತನ್ನ ಕೈ ಕೆಳಗೆ ಇರುವ ಸರ್ಕಾರಿ ಸಂಸ್ಥೆಗಳನ್ನು ಇದಕ್ಕಾಗಿ ಬಳಸುತ್ತಿದೆ ಹಾಗೂ ಇದೇ ಉದ್ದೇಶಕ್ಕಾಗಿ ಕೋಟಿಗಟ್ಟಲೆ ಹಣವನ್ನು ಸಹ ಒದಗಿಸುತ್ತಿದೆ. ಇಂತಹ ಸತತ ಪ್ರಯತ್ನಗಳಿಂದ ಕೆಲವು ಕನ್ನಡಿಗರು ಹಿಂದಿಯು ರಾಷ್ಟ್ರಭಾಷೆ ಹಾಗಾಗಿ ಅದನ್ನು ಕಲಿಯಬೇಕು ಪೋಷಿಸಬೇಕು ಎಂಬ ಭಾವನೆಯನ್ನು ತೆಳೆದಿದ್ದಾರೆ. ಇಲ್ಲದೇ ಹೋದಲ್ಲಿ ಕನ್ನಡಿಗರಿಗೆ ಪಕ್ಕದ ರಾಜ್ಯದ ಭಾಷೆಗಳಾದ ತಮಿಳು, ತೆಲುಗು, ಮಲಯಾಳಂಗಿಂತ ಹೆಚ್ಚಿನ ಸಂಪರ್ಕವು ದೂರದ ಹಿಂದಿಯೊಡನೆ ಹೊಂದಲು ಸಾದ್ಯವಾದುದಾರೂ ಹೇಗೆ?

ದೇಶದೆಲ್ಲೆಡೆ ಒಂದೇ ಭಾಷೆಯಾದರೆ ಅದು ಒಗ್ಗಟ್ಟಿಗೆ ಪೂರಕವಲ್ಲವೇ ಎಂದು ಹೇಳುವವರೂ ಇದ್ದಾರೆ ಆದರೆ ಇದು ಹೇಗೆ ಮಾರಕ ಎಂಬುದನ್ನು ಕೆಲ ತಿಂಗಳುಗಳ ಹಿಂದೆ ಯುಪಿಎಸ್ಸಿಯು (Union Public service commission) ತನ್ನ ಪರೀಕ್ಷೆಗಳಿಗೆ ಮಾಡಲು ಬಯಸಿದ್ದ ಕೆಲವು ಬದಲಾವಣೆಗಳ ಹಿನ್ನೆಲೆಯಲ್ಲಿ ನೋಡಬಹುದಾಗಿದೆ. ಯುಪಿಎಸ್ಸಿ ಮಾಡಬಯಸಿದ್ದ ಬದಲಾವಣೆಗಳು, ಹಿಂದಿ ಅರಿಯದ, ಕನ್ನಡವನ್ನು ಪರಿಸರದ ನುಡಿಯನ್ನಾಗಿ ಹೊಂದಿರುವ ಅಭ್ಯರ್ಥಿಗಳಿಗೆ ಮಾರಕವಾಗುವಂತಿದ್ದವು. ಕನ್ನಡಿಗರಿಗೆ ಕನ್ನಡವನ್ನು ಒಂದು ವಿಷಯವನ್ನಾಗಿ ತೆಗೆದುಕೊಳ್ಳಲು ಬೇಷರತ್ತಾದ ಅಯ್ಕೆ ಇಲ್ಲದಿರುವುದು, ಕನ್ನಡದಲ್ಲೇ ಯುಪಿಎಸ್ಸಿ ಪರೀಕ್ಷೆ ಬರೆಯುವ ಅವಕಾಶ ಸಿಗಲು ಕನಿಷ್ಟ ಇಷ್ಟು ಜನರಿರಲೇಬೇಕು ಎಂಬ ಷರತ್ತು ವಿಧಿಸುವುದು, ಇವೆಲ್ಲವೂ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಚಿಗುರೊಡೆಯುತ್ತಿರುವ ಪ್ರತಿಬೆಗಳು ಐ.ಎ.ಎಸ್ ಪರೀಕ್ಶೆ ಎದುರಿಸಲಾರದಂತೆ ಮಾಡಿಹಾಕುತ್ತಿತ್ತು. ಹಿಂದಿ ಭಾಷಿಕರಿಗೆ ಈ ಯಾವುದೇ ಷರತ್ತುಗಳು ಇಲ್ಲದಿರುವುದು ಕೇಂದ್ರ ಸರ್ಕಾರದ ಹಿಂದಿಯೇತರ ಭಾಷಿಕರ ವಿರೋಧಿ ನಿಲುವನ್ನು ತೋರಿಸುತ್ತಿತ್ತು. ಕೆಲವು ಕನ್ನಡಪರ ಸಂಘಟನೆಗಳನ್ನು ಹೊರತುಪಡಿಸಿ, ಬೇರೆ ಯಾವ ಕನ್ನಡಿಗ ಸಂಸದರೂ ಸಹ ಈ ಬಗ್ಗೆ ಸೊಲ್ಲೆತ್ತಲ್ಲಿಲ್ಲ. ಆದರೆ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳ ರಾಜಕಾರಾಣಿಗಳು ಹೋರಾಡಿದ್ದರಿಂದ ಯುಪಿಎಸ್ಸಿಯು ಈ ಬದಲಾವಣೆಗಳನ್ನು ಕೈಬಿಟ್ಟಿತು.

ಕೇಂದ್ರ ಸರ್ಕಾರವು ಮೊದಲಿನಿಂದಲೂ ಹಿಂದಿ ಭಾಷಿಕರಿಗೆ ಹೆಚ್ಚಿನ ಸ್ಥಾನಮಾನವನ್ನು ಕೊಡುತ್ತಾ ಬಂದಿದೆ. ಕೇಂದ್ರ ಸರ್ಕಾರ ನಡೆಸುವ ಹೆಚ್ಚಿನ ಸ್ಪರ್ಧಾತ್ಮಕ ಪರೀಕ್ಷೆಗಳು ಹಿಂದಿ ಅಥವಾ ಇಂಗ್ಲಿಶ್‍ನಲ್ಲಿ ಮಾತ್ರ ಲಭ್ಯ. ಕೇಂದ್ರ ಸರ್ಕಾರ ನಡೆಸುವ ಪರೀಕ್ಷೆಗಳ ಕಥೆ ಒಂದೆಡೆಯಾದರೆ ಕೇಂದ್ರ ಸರ್ಕಾರದ ಕೈಕೆಳಗೆ ಕೆಲಸ ನಿರ್ವರ್ಹಿಸುವ ಇಲಾಖೆಗಳು ಸಹ ನಿರಂತರವಾಗಿ ಹಿಂದಿ ಬಳಕೆಯನ್ನು ಹೆಚ್ಚಿಸುತ್ತಿವೆ, ಇದಕ್ಕಾಗಿ ಹಿಂದಿಯೇತರರು ಅಪಾರವಾದ ಬೆಲೆ ತೆರಬೇಕಾಗಿದೆ. ಎಲ್.ಪಿ.ಜಿ. ಸಿಲಿಂಡರುಗಳ ಮೇಲೆ ಕೇವಲ ಹಿಂದಿ ಮತ್ತು ಇಂಗ್ಲಿಷಿನಲ್ಲಿ ಸೂಚನೆಗಳನ್ನು ಕೊಡಲಾಗುತ್ತದೆ, ಇತ್ತೀಚೆಗೆ ನಡೆಯುತ್ತಿರುವ ಗ್ಯಾಸ್ ಅಪಘಾತಗಳ ಹಿನ್ನೆಲೆಯಲ್ಲಿ ಇದನ್ನು ನೋಡಿದಾಗ ಇದು ಎಷ್ಟರ ಮಟ್ಟಿಗೆ ಅಪಾಯಕಾರಿ ಎಂಬುದು ನಮಗೆ ಅರಿವಾಗುತ್ತದೆ. ಇನ್ನು ಬ್ಯಾಂಕುಗಳಲ್ಲಿ, ರೈಲ್ವೇ ಸೇವೆ, ಅಂಚೆಕಚೇರಿ ಮೊದಲಾದಲ್ಲೆಲ್ಲಾ ಕನ್ನಡವನ್ನು ಕಡೆಗಣಿಸಿ ಹಿಂದಿಯನ್ನು ತುರುಕಲಾಗುತ್ತಿದೆ. ಇದಕ್ಕೆಲ್ಲಾ ಭಾರತದ ಹುಳುಕಿನ ಭಾಷಾ ನೀತಿಯೇ ಕಾರಣವಾಗಿದೆ.

ಹೀಗೆ ಹಿಂದಿಗೆ ವಿಶೇಷ ಸವಲತ್ತುಗಳನ್ನು ಕೊಡಮಾಡುವ ಭಾಷಾನೀತಿಯಿರುವ ಕಾರಣ ಹಿಂದಿಯೇತರರ ಭಾಷಿಕ ಹಕ್ಕುಗಳನ್ನು ಧಮನಿಸುವ ಪ್ರಯತ್ನಗಳು ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲೇ ನಡೆಯುತ್ತಿರುವುದು ಸಮಾನತೆಯೇ ಜೀವಾಳವಾಗಬೇಕಾದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕಿಯಿದ್ದಂತೆ. ದೇಶದ ಎಲ್ಲಾ ಭಾಷಿಕರಿಗೂ ಸಮಾನ ಗೌರವ ಮತ್ತು ಸಮಾನ ಅವಕಾಶ ಕೊಡಮಾಡುವುದರ ಮೂಲಕ ನಮ್ಮ ಒಕ್ಕೂಟ ವ್ಯವಸ್ಥೆಯನ್ನು ಇನ್ನೂ ಶಕ್ತಿಶಾಲಿಯಾಗಿಸಬಹುದು. ಯುರೋಪು ಒಕ್ಕೂಟವು ಇದಕ್ಕೆ ಒಳ್ಳೆಯ ಉದಾಹರಣೆಯಾಗಿದೆ, ಯುರೋಪ್ ಒಕ್ಕೂಟದ ಸಂಸತ್ತಿನಲ್ಲಿ ಎಲ್ಲಾ ಇಪ್ಪತ್ತಮೂರು ಭಾಷೆಗಳನ್ನು ಬಳಸಬಹುದಾಗಿದೆ, ತನ್ನೆಲ್ಲಾ ವ್ಯವಹಾರಗಳನ್ನು ತನ್ನ ನುಡಿಯಲ್ಲೇ ನಡೆಸುವ ಅವಕಾಶ ಯುರೋಪಿನ ಒಕ್ಕೂಟದ ಪ್ರಜೆಗಳಿಗೆ ಇದೆ. ಆದರೆ ಭಾರತದ ಸಂಸತ್ತಿನಲ್ಲಿ ಇತ್ತೀಚೆಗೆ ತನ್ನ ತಾಯಿನುಡಿಯಾದ ತೆಲುಗಿನಲ್ಲಿ ಮಾತನಾಡಿದ ಟಿಡಿಪಿ ಪಕ್ಷದ ಸದಸ್ಯರೊಬ್ಬರನ್ನು ಬಹಿರಂಗವಾಗಿ ಅಪಹಾಸ್ಯಕ್ಕೀಡುಮಾಡಲಾಗಿತ್ತು. ಇಂದಿಗೂ ರಾಜ್ಯಗಳ ಹೈಕೋರ್ಟುಗಳಲ್ಲಿ ಕೇವಲ ಹಿಂದಿ ಅಥವಾ ಇಂಗ್ಲಿಷನ್ನು ಬಳಸಬಹುದಾಗಿದ್ದು ರಾಜ್ಯದ ಭಾಷೆಗಳನ್ನು ಬಳಸುವ ಅವಕಾಶವಿಲ್ಲವಾದ್ದರಿಂದ ತನ್ನ ನುಡಿಯಲ್ಲೇ ನ್ಯಾಯದಾನವನ್ನು ಪಡೆಯುವ ಹಕ್ಕಿನಿಂದ ಹಿಂದಿಯೇತರರು ವಂಚಿತರಾಗಿದ್ದಾರೆ. ಚನ್ನೈನ ಹೈಕೋರ್ಟಿನಲ್ಲಿ ತಮಿಳು ಬಳಕೆಗೆ ಅವಕಾಶಕೊಡಬೇಕೆಂದು ಒತ್ತಾಯಿಸಿ ಕಳೆದವಾರ ನ್ಯಾಯವಾದಿಗಳು ಕಲಾಪವನ್ನು ಬಹಿಷ್ಕರಿಸಿದ ಘಟನೆಯನ್ನು ಇಲ್ಲಿ ನೆನೆಯಬಹುದು.

  ರಾಜ್ಯದ ರಾಜಕಾರಣಿಗಳು ಈಗಲಾದರೂ ತಮ್ಮ ಮೌನ ಮುರಿದು ಕನ್ನಡಿಗರ ಹಿತಕಾಯುವ ಕೆಲಸಕ್ಕೆ ಮುಂದಾಗಬೇಕು ಈ ರೀತಿಯ ಭಾಷಾ ತಾರತಮ್ಯವನ್ನು ವಿರೋಧಿಸಬೇಕು. ಭಾರತೀಯ ಸಂವಿದಾನ ಅನುಮೋದಿಸಿರುವ ಎಲ್ಲಾ ಭಾಷೆಗಳಿಗೂ ಸಹ ಸಮಾನ ಹಕ್ಕುಗಳು ಸಿಗಬೇಕು.  ಇಲ್ಲದೇ ಹೋದಲ್ಲಿ ನಮ್ಮ ನೆಲದಲ್ಲೇ ಎರಡನೆಯ ದರ್ಜೆಯ ಪ್ರಜೆಯಾಗಿ ಬದುಕುವ ಬೇಡದ ಕರ್ಮ ಕನ್ನಡಿಗರದ್ದಾಗಲಿದೆ.

ಭ್ರಷ್ಟಾಚಾರಕ್ಕೆ ಬೀದಿ ಹೋರಾಟವೊಂದರಲ್ಲೇ ಪರಿಹಾರ ಸಿಗದು !

 (ತಕ್ಷಶಿಲಾ ಬ್ಲಾಗಿನಲ್ಲಿ ಅನುವಾದಿಸಿ ಪ್ರಕಟಿಸಿರುವ ಬರಹ)

ಮೂಲ ಅಂಕಣ ಬರೆದವರು: ರೋಹಿತ್ ಪ್ರಧಾನ್
ಅನುವಾದಕರು: ಗಿರೀಶ್ ಕಾರ್ಗದ್ದೆ 

ಅಣ್ಣಾ ಹಜಾರೆ ನೇತೃತ್ವದ ಚಳುವಳಿ ಬಿಸಿಯಾಗಿದ್ದ ದಿನದಲ್ಲಿ ಈ ಇಂಗ್ಲಿಶಿನಲ್ಲಿ  ಈ ಅಂಕಣ ಬಂದಿತ್ತು.  ಸಂವಿಧಾನ,ಸಂಸತ್ತು ಮೀರಿದ ಬೀದಿ ಹೋರಾಟಗಳಿಂದಲೇ ಭ್ರಷ್ಟಾಚಾರಕ್ಕೆ ಪರಿಹಾರ ರೂಪಿಸಲು ಸಾಧ್ಯ ಅನ್ನುವ ಬಿಸಿ ರಕ್ತದ ಆಲೋಚನೆಗಳಿಂದ ಯಾವ ಪರಿಹಾರವೂ ಸಾಧ್ಯವಿಲ್ಲ ಅನ್ನುವ ಈ ಅಂಕಣ ಇಂದಿಗೂ ಪ್ರಸ್ತುತ.   – ಕನ್ನಡ ಅಂಕಣಗಳ ಸಂಪಾದಕರು

 
ಅಣ್ಣಾ ಹಜಾರೆ ಮತ್ತವರ ಬೆಂಬಲಿಗರಿಂದ ನಡೆಸಲ್ಪಟ್ಟ ಭ್ರಷ್ಟಾಚಾರ ವಿರೋಧಿ ಚಳುವಳಿ ವಿರುದ್ಧ ಯುಪಿಎ ಸರ್ಕಾರವು ಎದುರಿಸಿದ ಬಹಿರಂಗ ಸೋಲನ್ನು ಅರಗಿಸಿಕೊಳ್ಳುವುದು ಕಷ್ಟ. ತಾನು ಮಂಡಿಸಿರುವ ರೀತಿಯಲ್ಲೇ ಲೋಕ್‍ಪಾಲ್ ಕಾಯಿದೆ ಜಾರಿಗೊಳ್ಳಬೇಕು ಮತ್ತು ಲೋಕಪಾಲರಿಗೆ ಯಾವುದೇ ರೀತಿಯ ಅಡ್ಡಿ ಆತಂಕಗಳಿಲ್ಲದ ಪರಮೋಚ್ಚ ಅಧಿಕಾರವಿರಬೇಕೆಂದು ಹಟಹಿಡಿದು ಕೂರುವುದರ ಮೂಲಕ ಅಣ್ಣಾ ಮತ್ತವರ ತಂಡ ಪಾರ್ಲಿಮೆಂಟಿನ ಪರಮಾಧಿಕರವನ್ನೇ ಕಿತ್ತುಕೊಳ್ಳಲು ಹೊರಟಿದೆ ಎಂದು ಯುಪಿಎ ಸರ್ಕಾರದ ಮಂತ್ರಿಗಳು ಆಪಾಧಿಸಿದ್ದಾರೆ. ಆದರೆ ಇದೇ ಸರ್ಕಾರದಲ್ಲಿ ’ರಾಷ್ಟ್ರೀಯ ಸಲಹಾ ಮಂಡಲಿ’
(ಎನ್‍ಎಸಿ) ಯ ಮಾತಿಗೆ ಹೆಚ್ಚಿನ ಕಿಮ್ಮತ್ತಿದೆ, ಹಾಗೆ ನೋಡಿದಲ್ಲಿ ಎನ್ಎಸಿಯಲ್ಲಿಯೂ ಸಹ ಯಾರೂ ಚುನಾಯಿತ ಪ್ರತಿನಿಧಿಗಳಿಲ್ಲ. ಖುದ್ದು ಸೋನಿಯಾ ಗಾಂಧಿಯೇ ಎನ್‍ಎಸಿಯ ಬೆನ್ನಿಗಿದ್ದಾರೆಂಬ ಕಾರಣದಿಂದಲೇ ಎನ್‍ಎಸಿಯು ಸರ್ಕಾರಗಳ ಪಾಲಿಸಿ ರಚನೆಯಲ್ಲಿಯೂ ಸಹ ಸಾಕಷ್ಟು ಪ್ರಭಾವ ಬೀರುತ್ತದೆ. ಉದ್ಯೋಗ ಖಾತ್ರಿ, ಆರೋಗ್ಯ ಸುಧಾರಣೆ ಮತ್ತಿತರ ಯೋಜನೆಗಳ ಹಿಂದೆ ಎನ್‍ಎಸಿಯ ಕೈಗಳು ಕೆಲಸ ಮಾಡಿವೆ, ಇದೂ ಸಹ ಒಂದು ರೀತಿಯಲ್ಲಿ ಯುಪಿಎ ಸರ್ಕಾರದ ಮತ್ತು ಅದರ ಪರಮ ನಾಯಕನಾದ ಪ್ರಧಾನಿ ಮನಮೋಹನ್ ಸಿಂಗರ ಸಂವಿಧಾನದತ್ತವಾದ ಅಧಿಕಾರವನ್ನು ಹತ್ತಿಕ್ಕುವ ಸ್ಪಷ್ಟ ಯತ್ನವಾಗಿದೆ.

ಹಾಗೆಂದು ಭ್ರಷ್ಟಚಾರದ ವಿಷಯವನ್ನು ಸುಲಭವಾಗಿ ತಳ್ಳಿ ಹಾಕುವಂತಿಲ್ಲ. ಇತ್ತೀಚಿನ ದಿನಗಳಲ್ಲಂತೂ ಪತ್ರಿಕೆಯ ಮುಖಪುಟದಲ್ಲೆಲ್ಲಾ ಭ್ರಷ್ಟಾಚಾರದ ಸುದ್ದಿಗಳೇ ರಾರಾಜಿಸುತ್ತಿವೆ. ಈ ದೇಶದ ಜನ ಸಾಮಾನ್ಯನಂತೂ ಸ್ಥಳೀಯ ಪೋಲೀಸರು, ಮುನಿಸಿಪಾಲಿಟಿಗಳ ತಡೆಯಿಲ್ಲದ ಸುಲಿಗೆಗಳಿಂದಲೂ, ನಿಧಾನಗತಿಯ ನ್ಯಾಯದಾನ ವ್ಯವಸ್ಥೆಗಳಿಂದಲೂ ಅಕ್ಷರಶಃ ರೋಸಿ ಹೋಗಿದ್ದಾನೆ. ಕೆಲವು ಮುಖ್ಯ ಪ್ರಕರಣಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ಸುರೇಶ್ ಕಲ್ಮಾಡಿ, ಎ.ರಾಜಾ ನಂತಹ ಕುಳಗಳು ಈ ಜೈಲಿನಲ್ಲಿ ಕಾಲ ಕಳೆದಿದ್ದು ನಿಜವಾದರೂ ಸಹ ನಮ್ಮ ದೇಶದ ಇತಿಹಾಸದ ಆಧಾರದ ಮೇಲೆ ಹೇಳುವುದಾದರೆ ಇವರಿಗೆ ನ್ಯಾಯಾಲಯದಲ್ಲಾಗಲೀ ಅಥವಾ ಜನತಾ ನ್ಯಾಯಾಲಯದಲ್ಲಾಗಲೀ ಶಿಕ್ಷೆ ಸಿಕ್ಕೇ ಸಿಗುತ್ತದೆಂಬ ಭರವಸೆಯಿಲ್ಲ.

ಹಾಗಾಗಿಯೇ ಅಣ್ಣಾ ಹಜಾರೆ ಮತ್ತು ಅವರ ಬೆಂಬಲಿಗರು ಹುಟ್ಟು ಹಾಕಿರುವ ಭ್ರಷ್ಟಾಚಾರದ ಬಗೆಗಿನ ರಾಷ್ಟ್ರೀಯ ಚರ್ಚೆ ಹಾಗೂ ನಿಸ್ವಾರ್ಥ ಪ್ರಯತ್ನವನ್ನು ಬೆರಗುಗಣ್ಣಿನಿಂದ ಜನರು ನೋಡುತ್ತಿದ್ದಾರೆ ಮತ್ತು ಆಕರ್ಷಿತರಾಗಿದ್ದಾರೆ. ಕಲುಷಿತ ರಾಜಕೀಯ ವ್ಯವಸ್ಥೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಜನಸಾಮಾನ್ಯನ ಸಿಟ್ಟು ಆಕ್ರೋಶಗಳನ್ನು ಒಂದು ಶಕ್ತಿಯಾಗಿ ಹೊರಹೊಮ್ಮುವಂತೆ ಮಾಡಿದ ಗೌರವ ಖಂಡಿತವಾಗಿಯೂ ಅಣ್ಣಾ ಹಜಾರೆಗೆ ಸಲ್ಲುತ್ತದೆ. ಅವರ ವೈಯುಕ್ತಿಕ ಪ್ರಾಮಾಣಿಕತೆಯನ್ನು ಯಾರೂ ಅನುಮಾನಿಸುವಂತಿಲ್ಲ ಹಾಗೂ ಅವರು ಯಾವುದೇ ರಾಜಕೀಯ ಪಕ್ಷ ಕಟ್ಟಲು ಹೊರಟಿಲ್ಲ ಎಂಬುದು ಸುಸ್ಪಷ್ಟ. ಹಜಾರೆಯವರ ಆಂದೋಲನವನ್ನು ಸರ್ಕಾರವು ನಿಭಾಯಿಸಿದ ರೀತಿ ತೀರಾ ಕೆಳಮಟ್ಟದಲ್ಲಿತ್ತು, ಕಾಂಗ್ರೆಸ್ಸಿನ ಕೆಲವು ಹಿರಿಯ ನಾಯಕರ ಮಾತುಗಳಂತೂ ಅತ್ಯಂತ ಕಟುವಾಗಿದ್ದವು ಹಾಗೂ ವೈಯುಕ್ತಿಕ ಮಟ್ಟದ ನಿಂದನೆಗಳಾಗಿದ್ದವು. ಸಮಾಜದ ಎಲ್ಲಾ ವರ್ಗದ ಜನರಿಂದಲೂ ಬೆಂಬಲಗಳಿಸಿಕೊಂಡ ಜನಪ್ರಿಯ ಚಳುವಳಿಯೊಂದು ಸರ್ಕಾರದ ಕೆಲವು ಅನಗತ್ಯ ನಡೆಗಳಿಂದಲೇ ಪ್ರಚೋಧನೆಗೊಂಡು ದೊಡ್ಡದಾಯಿತು. ಒಂದರ್ಥದಲ್ಲಿ, ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಖುದ್ದು ಸರ್ಕಾರವೇ ಮಾಡಿತು.

ಹಜಾರೆಯವರು ಅನುಸರಿಸುತ್ತಿರುವ ಹಾದಿಮಾತ್ರ ಇಂದಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಉಳಿಕೊಂಡಿರುವ ಜನರನ್ನು ಒಮ್ಮೆ ನಿಂತು ಯೋಚಿಸುವಂತೆ ಮಾಡಿದೆ. ಹಲವು ಟೀಕಾಕಾರರು ಒಟ್ಟಾರೆಯಾಗಿ ಅಭಿಪ್ರಾಯ ಪಟ್ಟಿರುವಂತೆ ಹಜಾರೆ ತಂಡದ ಜನ ಲೋಕಪಾಲದಲ್ಲಿಯೂ ಸಹ ಲೋಪದೋಷಗಳಿದ್ದು ಭ್ರಷ್ಟಾಚಾರವೆಂಬ ವ್ಯಾಧಿಗೆ ರಾಮಬಾಣವೇನಲ್ಲ. ಅದಲ್ಲದೆ ಇಂತದೊಂದು ವ್ಯವಸ್ಥೆಯು ಸಾಂವಿಧಾನಿಕವಾಗಿ ಹಲವು ಸ್ಥಂಭಗಳಲ್ಲಾಗಿರುವ ಅಧಿಕಾರದ ಹಂಚಿಕೆಯನ್ನೇ ಮೀರುವ ಲಕ್ಷಣಗಳಿವೆ. ಯಾವುದೇ ಒಂದು ಸಂಸ್ಥೆಯು, ಅದಕ್ಕೆ ಸಂವಿಧಾನಿಕವಾಗಿ ಎಷ್ಟೆ ಪರಮಾಧಿಕಾರವನ್ನು ನೀಡಿದರೂ ಸಹ ಭಾರತೀಯ ಸಮಾಜದ ಹಲವು ಸ್ತರಗಳಲ್ಲಿ ವ್ಯಾಪಕವಾಗಿ ಹಬ್ಬಿರುವ ಭ್ರಷ್ಟಚಾರವೆಂಬ ಪಿಡುಗನ್ನು ಏಕಾಂಗಿಯಾಗಿ ಗುಣಪಡಿಸಲಾರದು ಎಂಬುದನ್ನು ನಾವು ಅರಿಯಬೇಕು.ಹಜಾರೆಯವರ ಕಾಯಿದೆಯನ್ನು ಮರೆತು ಸರ್ಕಾರವು ರೂಪಿಸಿರುವ ಕಾಯಿದೆಯತ್ತ ಕಣ್ಣು ಹಾಯಿಸಿದರೆ ಅಲ್ಲಿಯೂ ಸಹ ವಿಪರೀತ ನೂನ್ಯತೆಗಳು ಕಂಡುಬರುತ್ತವೆ. ಅದೆಷ್ಟು ಅಪ್ರಬುದ್ಧವಾಗಿದೆಯೆಂದರೆ ತನ್ನ ಜವಾಬ್ದಾರಿಯನ್ನೂ ನಿಭಾಯಿಸಲಾಗದಷ್ಟು ಅಂಗಊನಗೊಂಡಿದೆ. ಇಲ್ಲಿರುವ ನಿಜವಾದ ಸಮಸ್ಯೆಯೇನಂದರೆ ಹಜಾರೆಯವರು ತಮ್ಮ ಅಸಂವಿಧಾನಿಕವಾದ ವಿಧಾನಗಳಿಂದ ತಮ್ಮ ಕಾನೂನನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿರುವುದು ಹಾಗೂ ಹಾಗೆ ಮಾಡಿ ಜಯಗಳಿಸಬಹುದು ಎಂದು ದೃಡವಾಗಿ ನಂಬಿರುವುದು. ವ್ಯವಸ್ಥೆಯನ್ನು ಸುಧಾರಿಸುವ ಪ್ರಯತ್ನ ಮಾಡದೇ ಜನರಲ್ಲಿ ಮಡುಗಟ್ಟಿರುವ ಆಕ್ರೋಶವನ್ನು ಬಳಸಿಕೊಂಡು ಒಂದು ರಾಜಕೀಯ ವ್ಯವಸ್ಥೆಯನ್ನೇ ಹೈಜಾಕ್ ಮಾಡುವ ಯತ್ನದಲ್ಲಿದ್ದಾರೆ. ನಿರ್ದಿಷ್ಟವಾಗಿ ಹೇಳುವುದಾದರೆ ಪದೇ ಪದೇ ಉಪವಾಸ ಕೂರುವುದು, ಆ ಮೂಲಕ ಸರ್ಕಾರವನ್ನು ಬೆದರಿಸುವುದು ಸರಿಯಲ್ಲ. ಹಜಾರೆ ತನ್ನನ್ನು ಒಬ್ಬ ಗಾಂಧಿವಾದಿಯೆಂದು ಕರೆದುಕೊಂಡಿದ್ದಾರೆ ಹಾಗೂ ಗಾಂಧೀಜಿಯವರೂ ಸಹ ಹಲವು ಬಾರಿ ತಮ್ಮ ಉಪವಾಸ ಸತ್ಯಾಗ್ರಹಗಳ ನೈತಿಕ ಬಲವನ್ನು ಬಹಳ ಬುದ್ದಿವಂತಿಕೆಯಿಂದ ಬಳಸಿಕೊಂಡಿದ್ದರು. ಇಂತಹ ಬಲವಂತದ ಒತ್ತಾಯಗಳನ್ನು ಅವು ನೈತಿಕವಾಗಲೀ ಅಥವಾ ಮಿಲಿಟರಿ ರೂಪದಲ್ಲಾಗಲೀ ಒಂದು ಸಾಮ್ರಾಜ್ಯಶಾಹಿ ಸರ್ಕಾರದ ವಿರುದ್ಧ ಬಳಸುವುದಕ್ಕೂ ಮತ್ತು ಒಂದು ಪ್ರಜಾಪ್ರಭುತ್ವದ ನೆಲೆಯಲ್ಲಿ ಚುನಾಯಿತವಾಗಿರುವ ಒಂದು ಸರ್ಕಾರದ ವಿರುದ್ಧ ಬಳಕೆ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ. ಭಾವನಾತ್ಮಕವಾದ ಉದ್ದುದ್ದ ಭಾಷಣಗಳೇನೇ ಇದ್ದರೂ ಸಹ ಭಾರತವು ತುರ್ತು ಪರಿಸ್ಥಿತಿಯ ಕರಾಳದಿನಗಳಿಂದ ಬಹಳ ದೂರ ಸಾಗಿ ಬಂದಿದೆ. ಭಾರತವು ಒಂದು ಸಾಂವಿಧಾನಿಕ ಪ್ರಜಾಪ್ರಭುತ್ವವಾಗಿದ್ದು ಪ್ರತಿಯೊಬ್ಬ ನಾಗರೀಕನಿಗೂ ಸಹ ಪ್ರತಿಭಟಿಸುವ ಹಕ್ಕಿದೆ. ಇಲ್ಲಿನ ಪರಿಸ್ಥಿತಿ ಈಜಿಪ್ಟ್ ಅಥವಾ ಟ್ಯುನಿಶಿಯಾ ದೇಶಗಳಂತೆ ಖಂಡಿತವಾಗಿಯೂ ಇಲ್ಲ. ಈ ದೇಶಗಳಲ್ಲಿ ಚಳುವಳಿಯ ಬಗ್ಗೆ ಮಾತನಾಡುವುದು ಅಥವಾ ಅರಬ್ ಕ್ರಾಂತಿಯ ಪರ ಸಹಾನುಭೂತಿ ಹೊಂದಿರುವುದೂ ಸಹ ಅಪಾಯಕಾರಿ.

ಮುಂದುವರೆದು, ಇತ್ತೀಚಿನ ದಿನಗಳಲ್ಲಿ ’ನಾಗರೀಕ ಸಮಾಜ’ ಎಂಬ ಪದವು ಸಾಕಷ್ಟು ಚಲಾವಣೆಯಲ್ಲಿದೆ. ಹಾಗಾದರೆ ನಾಗರೀಕ ಸಮಾಜವೆಂದರೇನು? ಅದರ ಪ್ರತಿನಿಧಿಗಳಾರು? ಹಜಾರೆ ಮತ್ತವರ ಬೆಂಬಲಿಗರು ಈ ನಾಗರೀಕ ಸಮಾಜದ ಮೇಲೆ ಏಕಸ್ವಾಮ್ಯವನ್ನು ಸಾಧಿಸಲು ಪ್ರಯತ್ನಿಸಿದ್ದಾರೆ. ಅದರೆ ಕೇವಲ ಇವರು ಮಾತ್ರ ನಾಗರೀಕ ಸಮಾಜದ ಮುಖ ಅಥವಾ ಧನಿಗಳೇ? ಸಂಸದರು ಕಡೇಪಕ್ಷ ಚುನಾವಣೆಯ ಅಗ್ನಿಪರೀಕ್ಷೆಯನ್ನು ಹಾದು ಬರಬೇಕಿರುತ್ತದೆ. ಆದರೆ ತಾವೊಂದು ನೈತಿಕ ಶಕ್ತಿಯೆಂದು ಹೇಳಿಕೊಳ್ಳುವ ಇವರಿಗೆ ಅನಿವಾರ್ಯವಾಗಿ ಹೇಳುವವರಿಲ್ಲ, ಕೇಳುವವರೂ ಇಲ್ಲ. ಒಂದು ಆದರ್ಶ ಜಗತ್ತಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯೆಂದರೆ ವಿಭಿನ್ನ ಐಡಿಯಾಗಳು ಮತ್ತು ಪಾಲಿಸಿಗಳ ನಡುವಿನ ಹೋರಾಟವಾಗಿರುತ್ತದೆ. ನೈಜವಾಗಿ ಭ್ರಷ್ಟಾಚಾರ ವಿರೋಧಿ ಅಜೆಂಡಾವನ್ನಿಟ್ಟುಕೊಂಡು ಒಂದು ರಾಜಕೀಯ ಪಕ್ಷವನ್ನು ಹುಟ್ಟುಹಾಕಿ ಚುನಾವಣೆಯನ್ನು ಎದುರಿಸುವುದೇ ಹಜಾರೆಯವರ ಮುಂದಿನ ದಾರಿಯಾಗಿದೆ, ಆದರೆ ಇಂತಹ ನೆಲೆಯಲ್ಲಿ ಸ್ಪರ್ಧಿಸುವ ಪಕ್ಷವು ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಗಳಿಲ್ಲ ಏಕೆಂದರೆ ಇವರ ತಂಡ ಅಪಾರವಾಗಿ ನೆಚ್ಚಿಕೊಂಡಿರುವ ಮಧ್ಯಮ ವರ್ಗದ ಮತದಾರರು ಮನೆಗಳಿಂದ ಹೊರಬಂದು ಮತ ಚಲಾಯಿಸುವುದೂ ಅನುಮಾನವಿದೆ. ಭ್ರಷ್ಟಾಚಾರದ ವಿರುದ್ಧ ಎಷ್ಟೆಲ್ಲಾ ಹೋರಾಟಗಳಲ್ಲಿ ಭಾಗಿಯಾಗಿದ್ದರೂ ಸಹ ಈ ದೇಶದ ಬಹುಸಂಖ್ಯಾತರು ಭ್ರಷ್ಟತೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಅಷ್ಟರಲ್ಲೇ ಇದ್ದು ಇವರು ನೈಜವಾಗಿ ಯಥಾಸ್ಥಿತಿವಾದಿಗಳು. ದುರದೃಷ್ಟವಶಾತ್ ಈ ದೇಶದ ಪಾತಿನಿಧಿಕ ಪ್ರಜಾಪ್ರಭುತ್ವವು ಕೆಲಸ ಮಾಡುತ್ತಿರುವ ರೀತಿಯೇ ಹಾಗಿದೆ, ಅತ್ಯುತ್ತಮ ಐಡಿಯಾಗಳಿಗೆ ಹಾಗೂ ಅತ್ಯುತ್ಕ್ರಷ್ಟ ಪಾಲಿಸಿಗಳಿಗೆ ಇಲ್ಲಿ ಯಾವಾಗಲೂ ಬೆಂಬಲ ಸಿಗುತ್ತದೆ ಎಂದು ಹೇಳಲಾಗುವುದಿಲ್ಲ. ಒಂದು ವೇಳೆ ಭಾರತದ ಮಧ್ಯಮ ವರ್ಗ ಭ್ರಷ್ಟತೆಯ ಬಗ್ಗೆ ತಲೆ ಕೆಡಿಸಿಕೊಂಡಿದ್ದರೂ ಸಹ, ಈಗಿನ ಅಧಿಕಾರದ ದಳ್ಳಾಳಿಗಳು ತಮ್ಮ ಸುತ್ತಲೂ ಕಂದಕವನ್ನು ನಿರ್ಮಿಸಿಕೊಂಡಿರುವುದರಿಂದ ರಾಜಕೀಯ ವ್ಯವಸ್ಥೆಯೊಳಗೆ ಪ್ರವೇಶಿಸಿ ಅಲ್ಲಿ ಸುಧಾರಣೆ ತರುವುದು ದೂರದ ಮಾತು ಎಂಬ ಅಭಿಪ್ರಾಯ ಈ ಮಧ್ಯಮ ವರ್ಗದ ಜನರಲ್ಲಿದೆ. ಇದೊಂದು ಸಮಸ್ಯೆಯೇ ಆಗಿದ್ದು ಯಾವಾಗ ತಾನು ರಾಜಕೀಯ ವ್ಯವಸ್ಥೆಯಲ್ಲಿ ಸಿಲುಕಿ ಹಾಕಿಕೊಂಡಿದ್ದೇನೆ ಎಂದು ಭಾಸವಾಗುತ್ತದೋ ಆಗೆಲ್ಲಾ ಈ ವರ್ಗವು ಅಸಂವಿಧಾನಿಕ ವಿಧಾನಗಳ ಮೊರೆ ಹೋಗುತ್ತಾರೆ. ಹಜಾರೆಯವರ ಚಳುವಳಿಗೆ ಸಮಾಜದ ಕೆಲವು ವರ್ಗಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿರುವುದೂ ಸಹ ಇದೇ ಕಾರಣದಿಂದಾಗಿ. ರಾಜಕೀಯ ವ್ಯವಸ್ಥೆಯೂ ಸಹ ಬದಲಾವಣೆಗೆ ನಿಜವಾಗಿಯೂ ಸ್ಪಂಧಿಸುವ ಒಂದು ಅಂಗ ಎಂಬ ನಂಬಿಕೆಯನ್ನು ಜನರಲ್ಲಿ ಹೇಗೆ ಮರಳಿ ತರಬಹುದು ಎಂಬ ಕುರಿತು ಪ್ರತಿಯೊಬ್ಬ ಭಾರತೀಯನೂ ಸಹ ಯೋಚಿಸಬೇಕಿದೆ.

ಚುನಾವಣೆಯಲ್ಲಿ ಸ್ಪರ್ಧಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಲಿಸಿಗಳ ಮೇಲೆ ಪ್ರಭಾವ ಬೀರಲು ಇರುವ ಎಕೈಕ ದಾರಿಯೇನೂ ಅಲ್ಲ. ಹಜಾರೆಯವರ ವಿರುದ್ಧ ಇರುವ ದೊಡ್ಡ ಆಪಾದನೆ ಏನೆಂದರೆ ಅವರು ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ವಿವಿಧ ಸ್ಥಂಭಗಳನ್ನೇ ಅನವಶ್ಯಕ ಎಂದು ತಳ್ಳಿಹಾಕುತ್ತಿದ್ದಾರೆನ್ನುವುದು. ಹಾಗಿದ್ದರೂ ಸಹ ದೇಶದ ಸಾಮಾನ್ಯ ನಾಗರೀಕರು ದೇಶದ ಪ್ರಾತಿನಿಧಿಕ ಅಧಿಕಾರ ಕೇಂದ್ರಗಳೊಂದಿಗೆ ಹೇಗೆ ತೊಡಗಿಕೊಳ್ಳುವಂತೆ ಮಾಡಬಹುದೆಂಬುದನ್ನು ಕಂಡುಕೊಳ್ಳಬೇಕಿದೆ. ಮಾಹಿತಿ ಹಕ್ಕು ಕಾಯಿದೆಯನ್ನು ಇನ್ನಷ್ಟು ಬಲಗೊಳಿಸುವುದು, ಸಂಸತ್ ಕಮಿಟಿಗಳ ಬಹಿರಂಗ ಸಭೆ ನಡೆಸುವುದು, ಕಾನೂನು ಮತ್ತು ಪಾಲಿಸಿಗಳನ್ನು ರಚಿಸುವಾಗ ಸಾರ್ವಜನಿಕರೂ ಸಹ ಪಾಲ್ಗೊಳ್ಳುವಂತೆ ಮಾಡುವುದು ಮತ್ತಿತರ ಸಾಂಸ್ಥಿಕ ದಾರಿಗಳನ್ನು ಹುಡುಕಬೇಕಿದೆ. ಹಜಾರೆಯವರ ಆಂದೋಲನದ ಭಾಗಶಃ ಗೆಲುವು ಭಾರತೀಯ ರಾಜಕೀಯ ವ್ಯವಸ್ಥೆಯನ್ನು ಎಚ್ಚರಿಸುವ ಯುದ್ಧಘೋಷವಾಗಬೇಕು. ಮೊದಲಿಗೆ ರಾಜಕೀಯ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ನಂಬಿಕೆ ಕಳೆದುಕೊಂಡಿರುವವರನ್ನು ಮತ್ತೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. ಹಾಗಂದ ಮಾತ್ರಕ್ಕೆ ಸರ್ಕಾರವು ಅವರ ಮುಂದೆ ಮಂಡಿಯೂರಿ ಕೂರಬೇಕು ಅಥವಾ ಚುನಾಯಿತ ಪಾರ್ಲಿಮೆಂಟಿನ ಮೇಲೆ ಸವಾರಿ ಮಾಡಲು ಬಿಡಬೇಕು ಎಂದರ್ಥವಲ್ಲ. ಹೀಗೆ ಒಪ್ಪಿಕೊಳ್ಳುವುದರ ಆಡ್ಡ ಪರಿಣಾಮಗಳು ಹಲವಾರಿವೆ. ಇದೇ ಸಂದರ್ಭದಲ್ಲಿ ಸರ್ಕಾರವನ್ನು ಹೈಜಾಕ್ ಮಾಡುವಂತಹ ಅಸಂವಿಧಾನಿಕ ಕ್ರಮಗಳನ್ನು ಹೊರತು ಪಡಿಸಿದರೆ ಬೇರೆ ದಾರಿಯೇ ಇಲ್ಲವೆಂದು ಭಾವಿಸಿರುವ ಚಳುವಳಿಗಾರರೂ ಸಹ ಹಿಂದಿನ ದಿನಗಳಲ್ಲಿ ಇಂತಹ ಚಳುವಳಿಗಳಿಗಾದ ಗತಿಯನ್ನು ಎಚ್ಚರಿಕೆಯಿಂದ ಗಮನಿಸಬೇಕಿದೆ. ಜಯಪ್ರಕಾಶ ನಾರಾಯಣರ ಸಂಪೂರ್ಣ ಕ್ರಾಂತಿ ಅಥವಾ ವಿ.ಪಿ.ಸಿಂಗರ ಭ್ರಷ್ಟಾಚಾರ ವಿರೋಧಿ ಚಳುವಳಿ ಇವೆರಡೂ ಸಹ ತತ್‍ಕ್ಷಣದ ಬದಲಾವಣೆಯ ನೀರೀಕ್ಷೆಯನ್ನು ಹುಟ್ಟಿಸಿ ಸೋಲುವುದರ ಮೂಲಕ ಜನರಲ್ಲಿ ರಾಜಕೀಯ ವ್ಯವಸ್ಥೆಯ ಬಗ್ಗೆ ಇನ್ನಷ್ಟು ಭ್ರಮನಿರಸನಗೊಳ್ಳುವಂತೆ ಮಾಡಿದವು.

ಹಜಾರೆಯವರು ಪದೇ ಪದೇ ಮಾಡಿದ ಸತ್ಯಾಗ್ರಹಗಳಿಂದಾಗಿ ಅವರ ಸ್ವಂತ ರಾಜ್ಯವಾದ ಮಹಾರಾಷ್ಟ್ರದಲ್ಲಿ ಕೆಲವು ಬದಲಾವಣೆಗಳಾಗಿವೆಯಷ್ಟೇ. ಪ್ರಜಾಪ್ರಭುತ್ವದಲ್ಲಿ ಬದಲಾವಣೆಗಳು ಅನಿವಾರ್ಯವಾಗಿ ನಿಧಾನ, ಕಷ್ಟ ಮತ್ತು ಚಾಲೆಂಜಿಂಗ್ ಸ್ವರೂಪದ್ದಾಗಿರುತ್ತವೆ. ತತ್‍ಕ್ಷಣಕ್ಕೆ ತಯಾರಾಗುವ ಪರಿಹಾರಗಳಾವೂ ಇಲ್ಲ. ಸಾಂವಿಧಾನಿಕ ರೀತಿಯನ್ನು ಒಪ್ಪಿಕೊಳ್ಳುವುದು ಹಾಗೂ ರಾಜಕೀಯ ವಿಧಾನಗಳನ್ನು ಗೌರವಿಸುವುದೊಂದೇ ಒಳ್ಳೆಯ ಬದಲಾವಣೆಯನ್ನು ತರಲಿಕ್ಕಿರುವ ದಾರಿ. ಹಜಾರೆಯವರ ಭ್ರಷ್ಟಾಚಾರವನ್ನು ಹೊಡೆದೋಡಿಸಬೇಕೆಂಬ ಗುರಿ ಒಳ್ಳೆಯದೇ ಆದರೆ ಹಿಡಿದಿರುವ ಹಾದಿ, ಅನುಸರಿಸುತ್ತಿರುವ ವಿಧಾನಗಳು ಮಾತ್ರ ಸುತಾರಾಂ ತಪ್ಪು ಹಾಗು ಅಪಾಯಕಾರಿ. ಈ ಸಂದೇಶವು ಮಾನ್ಯ ಹಜಾರೆಯವರಿಗೆ ಸ್ಪಷ್ಟವಾಗಿ ತಲುಪಲಿ.


ಮೂಲ ಅಂಕಣದ ಕೊಂಡಿ: http://pragati.nationalinterest.in/2011/09/no-counter-revolution-please/

ಹೊಸ ಪಕ್ಷ ರಚಿಸಲು “ಸಮಾಜವಾದ ಒಪ್ಪಲೇಬೇಕು” ಅನ್ನುವ ಕಟ್ಟಳೆ ಕೈಬಿಡಲು ಸರಿಯಾದ ಹೊತ್ತು !

(ತಕ್ಷಶಿಲಾ ಬ್ಲಾಗಿನಲ್ಲಿ ಅನುವಾದಿಸಿ ಪ್ರಕಟಿಸಿರುವ ಬರಹ)

ಮೂಲ ಅಂಕಣ ಬರೆದವರು – ಬರುಣ್ ಮಿತ್ರಾ
ಅಂಕಣದ ಅನುವಾದಕರು – ಗಿರೀಶ್ ಕಾರ್ಗದ್ದೆ

ಇತ್ತೀಚೆಗೆ ಭಾರತದ ಸರ್ವೋಚ್ಚ ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿಯ ದಾವೆಯೊಂದನ್ನು ವಜಾಗೊಳಿಸಿತು, ಅದರಲ್ಲಿ ಭಾರತೀಯ ಸಂವಿಧಾನಕ್ಕೆ ತರಲಾಗಿರುವ ೪೨ನೇ ತಿದ್ದುಪಡಿಯನ್ನು ಪ್ರಶ್ನಿಸಿಲಾಗಿತ್ತು. ಈ ತಿದ್ದುಪಡಿಯ ಪ್ರಕಾರ  ಭಾರತವು ’ಪ್ರಜಾ ಗಣರಾಜ್ಯ’ ವಾಗಬೇಕಾದರೆ ’ಸಮಾಜವಾದ’ ಮತ್ತು ’ಜಾತ್ಯಾತೀತತೆ’ಯನ್ನು ಒಪ್ಪಿಗೊಳ್ಳಬೇಕೆಂದು ಪ್ರಸ್ತಾಪಿಸಲಾಗಿದೆ. ಸಂವಿಧಾನದ ಈ ತಿದ್ದುಪಡಿಯು ೧೯೭೬ ರ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನಪಿಗೆ ತರುತ್ತದೆ. ನಂತರದ ದಿನಗಳಲ್ಲಿ ರಾಜಕೀಯ ಪಕ್ಷಗಳು ಮತ್ತು ಚುನಾವಣೆಗೆ ಸಂಬಂಧಿಸಿದ ಕಾನೂನಾದ ಪ್ರಜಾ ಪ್ರತಿನಿಧಿ ಕಾಯ್ದೆಗೂ ಸಹ ತಿದ್ದುಪಡಿ ತಂದು ೨೯ನೇ ಸೆಕ್ಷನ್ಅನ್ನು ಸೇರಿಸಲಾಗಿದ್ದು ಇದರ ಪ್ರಕಾರ ಯಾವುದೇ ರಾಜಕೀಯ ಪಕ್ಷವು ಭಾರತೀಯ ಚುನಾವಣಾ ಆಯೋಗದಡಿಯಲ್ಲಿ ನೊಂದಾಯಿಸಲ್ಪಟ್ಟು ಚುನಾವಣೆವನ್ನೆದುರಿಸಬೇಕಾದಲ್ಲಿ ’ಸಮಾಜವಾದ’ವನ್ನು ದೃಡೀಕರಿಸುವುದು ಕಡ್ಡಾಯವಾಗಿರುತ್ತದೆ.

ನ್ಯಾಯಾಲಯಗಳು ಸಾಮಾನ್ಯವಾಗಿ ತಮ್ಮ ತೀರ್ಪನ್ನು ಘೋಷಿಸಿದ ನಂತರ ಅರ್ಜಿಗಳನ್ನು ವಜಾಗೊಳಿಸಿತ್ತವೆ ಆದರೆ ಮೇಲೆ ಹೇಳಿದ ಮೊಕದ್ದಮೆಯಲ್ಲಿ ’ಇದೊಂದು ಬೌದ್ಧಿಕ ಪ್ರಶ್ನೆಯಾಗಿರುವುದರಿಂದ ಹಾಗೂ ಇದುವರೆಗೂ ಯಾವುದೇ ರಾಜಕೀಯ ಪಕ್ಷವೂ ಸಹ ಇದನ್ನು ವಿರೋಧಿಸಿ ನ್ಯಾಯಾಲಯದ ಮೊರೆ ಹೋಗಿಲ್ಲವೆಂಬುದನ್ನು ಗಮನಿಸಿ ಅರ್ಜಿದಾರನಿಗೆ ತನ್ನ ಅರ್ಜಿಯನ್ನು ಹಿಂಪಡೆಯುವಂತೆ ಸೂಚಿಸಿತು. ಅರ್ಜಿಯನ್ನು ವಜಾಗೊಳಿಸದೆ ಕೇವಲ ಹಿಂಪಡೆಯುವಂತೆ ಸೂಚಿಸುವದರ ಮೂಲಕ ಈ ಅರ್ಜಿ ಅರ್ಹವೆಂದೇ ಪರಿಗಣಿಸಿ ಮುಂದಿನ ದಿನಗಳಲ್ಲಿ ವಿಚಾರಣೆಗೆ ಮುಕ್ತವಾಗಿರಿಸಿರುತ್ತದೆ. ಆರ್ಥಿಕ ಮತ್ತು ರಾಜಕೀಯ ವಲಯಗಳಲ್ಲಿ ವ್ಯಕ್ತಿಗತ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಉದಾರವಾದಿ ಧೋರಣೆಯುಳ್ಳವರಿಗೆ ತಮ್ಮ ಆಶೋತ್ತರಗಳನ್ನು ಸರಿಯಾಗಿ ಬಿಂಬಿಸಬಲ್ಲ ರಾಜಕೀಯ ವೇದಿಕೆಗಳಿಲ್ಲವೆಂಬ ಹಲದಿನಗಳ ಕೊರಗು ಇಂದಿಗೂ ಇದೆ. ಹಲವು ರಾಜಕೀಯ ಪಕ್ಷಗಳಲ್ಲಿ ಉದಾರವಾದಿಗಳು ಇದ್ದಾರೆಯಾದರೂ, ಸ್ಪಷ್ಟವಾಗಿ ಉದಾರವಾದವನ್ನು ಬೆಂಬಲಿಸುವಂತಹ ಒಂದು ರಾಜಕೀಯ ಪಕ್ಷದ ಕೊರತೆಯು ಅವರನ್ನು ಭಾಧಿಸುತ್ತಿದೆ.

ಭಾರತದಲ್ಲಿ ಹಲವಾರು ರಾಜಕೀಯ ಪಕ್ಷಗಳಿವೆ, ಸಂಸತ್ತಿನಲ್ಲಿ ಸುಮಾರು ಐವತ್ತು ವಿವಿಧ ಪಕ್ಷಗಳಿಗೆ ಸೇರಿದ ಸದಸ್ಯರುಗಳಿದ್ದಾರೆ, ಇನ್ನು ರಾಜ್ಯ ಹಾಗೂ ಸ್ಥಳೀಯ ಮಟ್ಟದಲ್ಲಿ ನೂರಾರು ಪಕ್ಷಗಳಿವೆ. ಇವು ರಾಷ್ಟ್ರೀಯ, ರಾಜ್ಯ, ಪ್ರಾದೇಶಿಕ ಹಾಗೂ ಸ್ಥಳೀಯ ಹೀಗೆ ಹಲವು ದ್ರುಷ್ಟಿಕೋನವನ್ನು ಹಾಗೂ ರಾಷ್ಟ್ರಿಯತೆ, ಭಾಷೆ, ಧಾರ್ಮಿಕತೆ, ಜಾತಿ ಮತ್ತಿತರ ನೆಲೆಯಲ್ಲಿ ಸಮಾಜದ ಹಲವು ವರ್ಗಗಳನ್ನು ಪ್ರತಿನಿಧಿಸುತ್ತಿರುವುದಾಗಿ ಹೇಳಿಕೊಳ್ಳುತ್ತಿವೆ. ಆದರೆ ಒಂದು ರಾಜಕೀಯ ಪಕ್ಷವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವಾಗ ಸಮಾಜವಾದವನ್ನು ಕಡ್ಡಾಯವಾಗಿ ಅನುಮೋಧಿಸಬೇಕಿರುವುದರಿಂದ ತಮ್ಮ ಎಲ್ಲಾ ಸಿದ್ಧಾಂತಗಳಿಗೆ ನ್ಯಾಯ ಒದಗಿಸುವುದು ಈ ಪಕ್ಷಗಳಿಗೆ ಸಾಧ್ಯವಾಗದೆ ಸೀಮಿತ ಸಿದ್ಧಾಂತಕ್ಕೆ ಬದ್ಧವಾಗಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದರೆ ಸ್ವತಂತ್ರವಾಗಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಇದು ಅನ್ವಯಿಸುವುದಿಲ್ಲ, ಸ್ವತಂತ್ರ ಅಬ್ಯರ್ಥಿಗಳು ಒಂದುವೇಳೆ ಚುನಾವಣೆಯಲ್ಲಿ ಗೆದ್ದರೆ ಮಾತ್ರ ಸಮಾಜವಾದವನ್ನು ಅನುಮೋದಿಸುವುದಾಗಿ ಹಾಗೂ ಸಂವಿಧಾನವನ್ನು ಎತ್ತಿ ಹಿಡಿಯುವುದಾಗಿ ಪ್ರಮಾಣ ಸ್ವೀಕರಿಸಬೇಕಾಗುತ್ತದೆ ಅಷ್ಟೆ.

ಕಡ್ಡಾಯವಾಗಿ ಸಮಾಜವಾದವನ್ನು ದ್ರುಡೀಕರಿಸಬೇಕೆಂಬ ನಿಯಮದಿಂದಾಗಿ ಭಾರತದಲ್ಲಿ ಒಂದು ವಿಶಾಲವಾದ  ಪ್ರಜಾಪ್ರಭುತ್ವ ವ್ಯವಸ್ಥೆಯಿದ್ದರೂ ಸಹ ರಾಜಕೀಯ ಆಯ್ಕೆಗಳು ಸೀಮಿತಗೊಂಡಿವೆ. ಹೀಗೆ ಕಾನೂನುಬದ್ಧವಾಗಿ ಒಂದು ರಾಜಕೀಯ ಸಿದ್ಧಾಂತವನ್ನು ಸಮಾಜವಾದಕ್ಕೆ ಅಂಟಿಕೊಳ್ಳುವಂತೆ ಮಾಡುವುದರಿಂದ ಹಲವಾರು ಗೊಂದಲಗಳಿಗೆ ಕಾರಣವಾಗುತ್ತದೆ. ಸಮಾಜವಾದವನ್ನು ರಾಜಕೀಯ ಹಾಗೂ ಸಾಂವಿಧಾನಿಕ ಕ್ರಮಗಳಿಂದಲೇ ಕಡ್ಡಾಯಗೊಳಿಸಿರುವುದರಿಂದ ಒಂದುವೇಳೆ ಯಾವುದೇ ರಾಜಕೀಯ ಪಕ್ಷವು ತಮ್ಮ ಚುನಾವಣಾ ಪ್ರಚಾರದಲ್ಲಿ ’ಸಮಾಜವಾದ’ ತತ್ವಗಳ ವಿರುದ್ಧವಾಗಿ ದನಿಯೆತ್ತುವುದು ಅಸಾಂವಿಧಾನಿಕವಾಗುತ್ತದೆ ಯಾಕೆಂದರೆ ಮೊದಲಿಗೆ ತಾನು ಸಮಾಜವಾದದ ತತ್ವವನ್ನು ಒಪ್ಪಿಕೊಂಡಿರುವುದರಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸಲು ಆ ಪಕ್ಷವು ಅರ್ಹತೆ ಪಡೆದಿರುತ್ತದೆ. ತಾನೇ ಒಪ್ಪಿಕೊಂಡಿರುವ ಸಿದ್ಧಾಂತವನ್ನು ವಿರೋಧಿಸುವುದಾದರೂ ಹೇಗೆ?

ಎರಡನೆಯದಾಗಿ ಸಮಾಜವಾದವೆಂದರೇನು? ಎಂಬುದನ್ನು ಸಂವಿಧಾನದಲ್ಲಿ ವಿವರಿಸಲಾಗಿಲ್ಲ. ಮೇಲೆ ಹೇಳಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಸಹ ಈ ಪ್ರಶ್ನೆಗಳನ್ನೆತ್ತಿದ್ದಾರೆ. ಸಮಾಜವಾದದಲ್ಲಿ ಪಾಳೆಗಾರಿಕೆ, ಸಾಮ್ರಾಜ್ಯಶಾಹಿ, ಪಾಸಿಸಂ, ನಾಝಿಸಂ(ರಾಷ್ಟ್ರೀಯ ಸಮಾಜವಾದ), ಕಮ್ಯೂನಿಸಂ, ಬಂಡವಾಳಶಾಹಿ ಹಾಗೂ ಇನ್ನಿತರ ಇಸಂಗಳೂ ಸಹ ಸೇರಿಕೊಳ್ಳಬಹುದೇ? ಒಂದು ವೇಳೆ ಸಮಾಜವಾದಕ್ಕೆ ಇಷ್ಟೊಂದು ವ್ಯಾಪಕವಾದ ಅರ್ಥವು ಇದ್ದುದೇ ಆದರೆ ಸಂವಿಧಾನದಲ್ಲಿ ಕೇವಲ ಅಂದೊಂದನ್ನೆ ಸೇರಿಸುವ ಅವಶ್ಯಕತೆಯಾದರೂ ಏನಿತ್ತು ಎಂದು ಪ್ರಶ್ನಿಸಲಾಗಿದೆ. ಸಾಮಾನ್ಯವಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೊಟ್ಟಿರುವ ಪದಗಳಿಗೆ ಖಚಿತವಾದ ಅರ್ಥಗಳನ್ನು ಹುಡುಕುವಲ್ಲಿ ಸಾಕಷ್ಟು ಶ್ರಮವಹಿಸಲಾಗುತ್ತದೆ, ಒಂದು ಪದಕ್ಕೆ ಇಷ್ಟೊಂದು ವ್ಯಾಪಕವಾದ ಅರ್ಥಗಳನ್ನು ಕೊಟ್ಟರೆ ನ್ಯಾಯದಾನಮಾಡುವುದು ಅಸಾಧ್ಯದ ಮಾತು. ಸುಪ್ರೀಮ್ ಕೋರ್ಟ್ ಏನೋ ಈ ವಿಚಾರವನ್ನು ಒಂದು ಬೌದ್ಧಿಕ ಕಸರತ್ತು ಎಂದು ಕರೆಯಿತು ಆದರೆ  ಭಾರತೀಯ ಸಂವಿಧಾನದ ಹಾಗೂ ಚುನಾವಣಾ ಕಾನೂನುಗಳ ಮೇಲೆ ಸಮಾಜವಾದದ ನೆರಳಿರುವುದರಿಂದಾಗಿ ಅದು ಮೂಲಭೂತ ಹಕ್ಕುಗಳ ಉಲ್ಲಂಘನೆ, ಅಭಿವ್ಯಕ್ತಿ ಸ್ವಾಂತಂತ್ರ್ಯದ ಹರಣ, ಒಡಗೂಡುವಿಕೆಯ ಸ್ವಾಂತಂತ್ರ್ಯ ಹಾಗೂ ಸೈದ್ಧಾಂತಿಕತೆಯ ಮೂಲತತ್ವಗಳ ಮೇಲೆ ಬೀರಬಹುದಾದ ಪರಿಣಾಮಗಳು ಹಲವು ಪ್ರಶ್ನೆಗಳಿಗೆ ಕಾರಣವಾಗಿವೆ. ಸಂವಿಧಾನದ ಮೂಲ ಸ್ವರೂಪದಲ್ಲಿ ಪ್ರಜಾಪ್ರಭುತ್ವಕ್ಕೆ ಅತ್ಯಂತ ಮನ್ನಣೆಯನ್ನು ಕೊಟ್ಟಿದ್ದರೂ ಸಹ, ಸೈದ್ದಾಂತಿಕವಾಗಿ ಅದನ್ನು ಒಂದೇ ರಾಜಕೀಯ ನಿಲುವಿಗೆ ಸೀಮಿತಗೊಳಿಸುವ ಪ್ರಯತ್ನ ಅದೆಷ್ಟು ಒಳ್ಳೆಯ ಪ್ರಜಾಪ್ರಭುತ್ವ?

ರಾಜಕೀಯ ಸಿದ್ಧಾಂತಗಳು ಜನಾಭಿಪ್ರಾಯ ಹಾಗೂ ಪಾಲಿಸಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ರಾಜಕೀಯದ ಅಂತಿಮ ಗುರಿ ಜನಹಿತಕ್ಕಾಗಿ ದುಡಿಯುವುದಾದರೂ ಸಹ ಸರ್ಕಾರದ ಹಿಂದಿರುವ ರಾಜಕೀಯ ಸಿಧ್ದಾಂತವೇ ಆಡಳಿತದ ದೂರದೃಷ್ಟಿ ಮತ್ತು ನೀತಿ ನಿಯಮಗಳಿಗೆ ಪ್ರಮುಖ ದಿಕ್ಸೂಚಿಯಾಗುತ್ತದೆ. ಉದಾಹರಣೆಗೆ ಒಂದು ಉದ್ದಿಮೆ ಅಥವಾ ಆರ್ಥಿಕ ವಲಯವನ್ನು ರಾಷ್ಟ್ರೀಕರಣಗೊಳಿಸಬೇಕೇ ಅಥವಾ ಖಾಸಗೀಕರಣಗೊಳಿಸಬೇಕೇ ಎಂಬುದನ್ನು ಒಂದು ಸರ್ಕಾರದ ರಾಜಕೀಯ ಸಿದ್ಧಾಂತಿಕ ಕಾರಣಗಳ ಮೇಲೆಯೇ ಅವಲಂಬಿತವಾಗುತ್ತದೆ ಹೊರತು ಕೇವಲ ತಾಂತ್ರಿಕ ಕಾರಣಗಳಿಗಾಗಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಎಲ್ಲವನ್ನೂ ತಿಳಿದುಕೊಂಡಿರುವುದು ಸಾಧ್ಯವಿಲ್ಲ ಒಂದು ಹೊಸನೀತಿಯನ್ನು ರೂಪಿಸುವಾಗ ಸಮಾಜದ ಮೇಲಾಗುವ ಪರಿಣಾಮಗಳೇನು ಎಂಬುದನ್ನು ಆ ನೀತಿಯು ರಾಜಕೀಯದ ಯಾವ ತತ್ವದ ನೆಲೆಗೆ ಹೊಂದಿಕೊಳ್ಳುತ್ತದೆ ಎಂಬುದರ ಮೂಲಕವೇ ತಿಳಿದುಕೊಳ್ಳುವುದು  ನಿಯಮಾವಳಿಗಳನ್ನು ರೂಪಿಸುವವರಿಗಿರುವ ಸರಳ ಮಾರ್ಗವಾಗಿದೆ.

ಜರ್ಮನಿಯನ್ನು ಹೊರತುಪಡಿಸಿ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಯಾವ ಪ್ರಜಾಪ್ರಭುತ್ವವೂ ಸಹ ರಾಜಕೀಯ ಸಿದ್ಧಾಂತಗಳ ಶಾಂತಿಯುತ ಸ್ಪರ್ಧೆಯನ್ನು ಹತ್ತಿಕ್ಕುತ್ತಿರುವ ಉದಾಹರಣೆಯಿಲ್ಲ. ಜರ್ಮನಿಯಲ್ಲಿ ನಾಜಿಸಂ ಹರಡುವಿಕೆಯ ವಿರುದ್ಧ ಸ್ವಲ್ಪ ತಡೆಯಿದೆಯಷ್ಟೇ. ಎಲ್ಲಾ ಕಾಲಘಟ್ಟದಲ್ಲಿಯೂ ಸಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ರಾಜಕೀಯ ಸಿದ್ಧಾಂತಗಳು ಬಹುಸಂಖ್ಯಾತರ ಮನೋಭಿಲಾಷೆಗಳನ್ನು ಪ್ರತಿಬಿಂಬಿಸುವಂತಿರುತ್ತವೆ ಅಷ್ಟೇ ಅಲ್ಲ ಚುನಾವಣಾ ಸಮಯದಲ್ಲಿ ರಾಜಕೀಯ ಆಗುಹೋಗುಗಳನ್ನೂ ಸಹ ಬದಲಾಯಿಸಬಲ್ಲ ಶಕ್ತಿಯು ಇಂತಹ ಸಿದ್ಧಾಂತಗಳಿಗಿರುತ್ತದೆ. ರೊನಾಲ್ಡ್ ರೇಗನ್‍ನಿಂದ ಹಿಡಿದು ಬರಾಕ್ ಒಬಾಮರವರೆಗೆ, ಮಾರ್ಗರೇಟ್ ಥ್ಯಾಚರ್ ರಿಂದ ಹಿಡಿದು ಟೋನಿ ಬ್ಲೇರ್ ವರೆಗಿನ ಮುಖಂಡರುಗಳು ಹಾಗೂ ರಾಜಕೀಯ ಪಕ್ಷದವರು ಆಗಿನ ಕಾಲಮಾನದಲ್ಲಿಂದ್ದತಹ ಜನಪ್ರಿಯ ರಾಜಕೀಯ ನಿಲುವುಗಳ ಮೂಲಕ ಜೀಕಾಟವನ್ನು ನಡೆಸಿಕೊಂಡೇ ತಮ್ಮ ರಾಜಕೀಯ ಭವಿಷ್ಯಗಳನ್ನು ಕಂಡುಕೊಂಡಿದ್ದಾರೆ. ಈ ಗುಣವೇ ಪ್ರಜಾಪ್ರಭುತ್ವವನ್ನು ಒಂದು ಪ್ರಬಲವಾದ ಅಸ್ತ್ರವನ್ನಾಗಿಸಿದೆ ಅಲ್ಲದೆ ಹಲವು ರಾಜಕೀಯ ಸಿದ್ದಾಂತಗಳ ನಡುವಿನ ಸಂಘರ್ಷದ ನಡುವೇಯೂ ಒಂದು ಸಮಾಜ ರಾಜಕೀಯವಾಗಿ ಅವನತಿ ಹೊಂದದಂತೆ ತಡೆಯುತ್ತದೆ.

೧೯೪೯ ರಲ್ಲಿ ನಡೆದ ಸಂವಿಧಾನ ಸಭೆಯಲ್ಲಿಯೂ (constituent assembly) ಸಹ ಸಮಾಜವಾದ ಎಂದರೇನು ಎಂಬುದರ ಬಗ್ಗೆ ಸುಧೀರ್ಘವಾದ ಜಿಜ್ನಾಸೆಯನ್ನು ನಡೆಸಲಾಗಿತ್ತು, ಸಂವಿಧಾನದಲ್ಲಿರುವ ಹಲವಾರು ಸವಲತ್ತುಗಳು ಸಮಾಜವಾದದ ಗುಣವನ್ನು ಮೈಗೂಡಿಕೊಂಡಿದ್ದರೂ ಸಹ ತಮ್ಮ ಮುಂದಿನ ಜನಾಂಗವನ್ನು ಕೇವಲ ಒಂದು ರಾಜಕೀಯ ಸಿದ್ದಾಂತದ ಅಡಿಯಾಳಾಗಿಸದಿರಲು ನಮ್ಮ ಸಂವಿಧಾನದ ರಚನಾಕಾರರು ನಿರ್ಧರಿಸಿದ್ದರು. ” ಒಂದು ನಾಡಿನ ಪಾಲಿಸಿಗಳು ಹೇಗಿರಬೇಕು, ಸಾಮಾಜಿಕ ಹಾಗೂ ಆರ್ಥಿಕ ವಿಷಯಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಸಮಯ ಸಂದರ್ಭಕ್ಕನುಸಾರವಾಗಿ ಜನರೇ ನಿರ್ಧರಿಸಬೇಕೇ ಹೊರತು ಇದನ್ನು ಹೀಗೀಗೆ ಮಾಡಿ ಎಂದು ಸಂವಿಧಾನದಲ್ಲಿ ಬರೆದಿಡಬಾರದು ಯಾಕೆಂದರೆ ಹೀಗೆ ಮಾಡುವುದು ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ದಕ್ಕೆ ತಂದು ಪ್ರಜಾಪ್ರಭುತ್ವವನ್ನೇ ಸರ್ವನಾಶ ಮಾಡುತ್ತದೆ..” ಎಂದು ಭಾರತೀಯ ಸಂವಿಧಾನದ ಶಿಲ್ಪಿಯಾದ ಡಾ.ಬಿ.ಆರ್. ಅಂಬೇಡ್ಕರ್ ರವರೇ ಸ್ವತಃ ಹೇಳಿದ್ದರು.

ಒಂದು ಸಂವಿಧಾನದ ಮೂಲ ಗುಣವೇ ಪ್ರಜಾಪ್ರಭುತ್ವವಾಗಿದ್ದಲ್ಲಿ, ಆ ಪ್ರಜಾಪ್ರಭುತ್ವವನ್ನು ಕೇವಲ ಒಂದು ರಾಜಕೀಯ ಸಿದ್ದಾಂತಕ್ಕೆ ಕಟ್ಟಿಹಾಕುವುದು ಪ್ರಜಾಪ್ರಭುತ್ವದ ಮೂಲ ತತ್ವ ಹಾಗೂ ಆಶಯಗಳನ್ನು ಗಾಳಿಗೆ ತೂರಿದಂತೆ. ತಮಗೆ ಬೇಕಾದ ಸಿದ್ಧಾಂತವನ್ನು ಮುಕ್ತವಾಗಿ ತೋರ್ಪಡಿಸಿಕೊಳ್ಳುವ ಹಾಗೂ ಇದರ ರಾಜಕೀಯ ಸಿದ್ಧಾಂತಗಳೊಂದಿಗೆ ಶಾಂತಿಯುತವಾಗಿ ಸ್ಪರ್ಧಿಸಿ ನಾಗರೀಕರನ್ನು ತಮ್ಮತ್ತ ಒಲಿಕೊಳ್ಳುವ ಅವಕಾಶವೇ ಒಂದು ರಾಜಕೀಯಪಕ್ಷಕ್ಕಿಲ್ಲದಿರುವುದು ಅದೆಂತಹ ಪ್ರಜಾಪ್ರಭುತ್ವ ವ್ಯವಸ್ಥೆ?

೧೯೫೯ರಲ್ಲಿ ಸಿ.ರಾಜಗೋಪಲಾಚಾರಿ, ಮಿನೂ ಮಸಾನಿ ಮತ್ತಿತ್ತರಿಂದ ಸ್ಥಾಪಿಸಲ್ಪಟ್ಟು ಮಹಾರಾಷ್ಟ್ರದಲ್ಲಿ ಇಂದಿಗೂ ಅಸ್ತಿತ್ವದಲ್ಲಿರುವ ’ಸ್ವತಂತ್ರ ಪಾರ್ಟಿ’ ಯು ೧೯೯೪ ಭಾರತೀಯ ಚುನಾವಣಾ ಆಯೋಗಕ್ಕೆ ಒಂದು ಪತ್ರವನ್ನು ಬರೆದು ಸಮಾಜವಾದ ಸಿದ್ದಾಂತಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿ ಅದನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲವೆಂದು ತಿಳಿಸಿತ್ತು, ಆದರೆ ಪ್ರಜಾಪ್ರತಿನಿಧಿ ಕಾಯ್ದೆಯ ೨೯ಎ ಸೆಕ್ಷನ್ನಿನ್ನಲ್ಲಿರುವ ’ಸಮಾಜವಾದವನ್ನು ಒಪ್ಪಿಕ್ಕೊಳ್ಳುವುದು ಕಡ್ಡಾಯ’ ಎಂಬ ತಿದ್ದುಪಡಿಯತ್ತ ಬೊಟ್ಟುಮಾಡಿ ತೋರಿಸಿದ ಚುನಾವಣಾ ಆಯೋಗವು ತನ್ನ ಕೆಲಸವೇನಿದ್ದರೂ ಕಾನೂನನ್ನು ಇರುವಂತೆಯೇ ಜಾರಿಗೊಳಿಸುವುದೇ ಹೊರತು ಕಾನೂನನ್ನು ತಿದ್ದುವುದು ಅಥವಾ ತಿರುಚುವುದಲ್ಲ ಎಂದು ಸ್ಪಷ್ಟನೆ ನೀಡಿತು.

ಮೇಲ್ಕಂಡ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಒಂದು ’ಬೌದ್ಧಿಕ ಕಸರತ್ತು’ ಎಂದು ಕರೆಯುವುದರ ಮೂಲಕ ಸರ್ವೋಚ್ಚ ನ್ಯಾಯಾಲಯವು ಚರ್ಚೆಯೊಂದಕ್ಕೆ ನಾಂದಿ ಹಾಡಿದೆ ಹಾಗೂ ರಾಜಕೀಯ ಉದಾರವಾದಿಗಳಿಗೆ ತಮ್ಮ ಚಿಪ್ಪುಗಳಿಂದ ಹೊರಬರಲು ಅವಕಾಶದ ಬಾಗಿಲನ್ನು ತೆರೆದಿಟ್ಟಂತಾಗಿದೆ. ಈಗ ರಾಜಕೀಯ ಉದಾರವಾದಿಗಳು ’ಸಮಾಜವಾದವನ್ನು ಕಡ್ಡಾಯವಾಗಿ ದೃಡೀಕರಿಸಬೇಕು’ ಎಂಬ ಕಾನೂನಿನ ವಿರುದ್ಧ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸುವ ಏಕಮಾತ್ರ ಉದ್ದೇಶದಿಂದಲಾದರೂ ಒಂದು ರಾಜಕೀಯ ಪಕ್ಷವನ್ನು ಹುಟ್ಟುಹಾಕಬೇಕಿದೆ. ಪಕ್ಷವನ್ನು ಹುಟ್ಟುಹಾಕಿದ ನಂತರ ಚುನಾವಣಾ ಆಯೋಗದ ಮುಂದೆ ನೊಂದಾಯಿಸಿಕೊಳ್ಳಲು ಅರ್ಜಿ ಸಲ್ಲಿಸಬೇಕಾಗುತ್ತದೆ,  ಈ ಸಂಧರ್ಭದಲ್ಲಿ ’ಸಮಾಜವಾದ’ವನ್ನು ಅನುಮೋದಿಸಬಾರದ ಆಗ ಈ ಅರ್ಜಿಯು ’ಕಾನೂನುಬದ್ಧ’ವಾಗಿಲ್ಲದ ಕಾರಣದಿಂದ ತಿರಸ್ಕೃತವಾಗುತ್ತದಾದರೂ ಸಹ ಇದನ್ನು ಪ್ರಶ್ನಿಸಿ ಸುಪ್ರೀಮ್ ಕೋರ್ಟ್ ಮೆಟ್ಟಿಲೇರುವ ಅವಕಾಶವು ಪಕ್ಷಕ್ಕೆ ದೊರೆತು ಅಲ್ಲಿ ತನ್ನ ಅಹವಾಲನ್ನು ಹೇಳಿಕೊಳ್ಳಬಹುದು ಮತ್ತು ನ್ಯಾಯಕ್ಕಾಗಿ ಹೋರಾಟನಡೆಸಬಹುದಾಗಿರುತ್ತದೆ. ಉದಾರವಾದಿಗಳು ಇದುವರೆಗೂ ಭಾರತದಲ್ಲಿ ಚುನಾವಣೆಯ ಮೇಲೆ ಪರಿಣಾಮ ಬೀರುವಷ್ಟು ರಾಜಕೀಯ ಶಕ್ತಿಯಾಗಿ ಬೆಳೆದಿಲ್ಲದಿರಬಹುದು ಆದರೆ ಸಮಾಜವಾದದ ಕಡ್ಡಾಯಗೊಳಿಸುವಿಕೆಯನ್ನು ಪ್ರಶ್ನಿಸುವ ಸಲುವಾಗಿಯೇ ಒಂದು ಪಕ್ಷವನ್ನು ಹುಟ್ಟುಹಾಕುವುದು ಮುಂಬರುವ ದಿನಗಳಲ್ಲಿ ಗಣತಂತ್ರ ಭಾರತದ ರಾಜಕೀಯ ಚಿತ್ರಣದ ಮೇಲೆ ಗಾಢವಾದ ಪರಿಣಾಮವನ್ನಂತೂ ಖಂಡಿತವಾಗಿಯೂ ಬೀರುತ್ತದೆ. ಇದು ಕೇವಲ ’ಉದಾರವಾದ’ ಸಿದ್ಧಾಂತಕ್ಕೆ ನೆಲೆಸಿಗುವಂತೆ ಮಾಡುವ ಉದ್ದೇಶವಲ್ಲ ಬದಲಿಗೆ ಯಾವುದೇ ರಾಜಕೀಯ ನಂಬಿಕೆಗಳಿಗೆ ಮುಕ್ತ ಅವಕಾಶಗಳನ್ನೊದಗಿಸುವ ಪ್ರಯತ್ನವಾಗಿರುತ್ತದೆ. ಇವತ್ತು ಯಾವುದೇ ಒಂದು ರಾಜಕೀಯ ಸಿದ್ದಾಂತಕ್ಕೆ ಮಾತ್ರ ಕಾನೂನಾತ್ಮಕವಾಗಿ ಹೆಚ್ಚುಗಾರಿಕೆ ಸಿಗುತ್ತಿದೆಯೆಂದರೆ ಮುಂದೊಂದು ದಿನ ಪ್ರತಿಸ್ಪರ್ಧಿ ಸಿದ್ದಾಂತವನ್ನು ಸುಲಭವಾಗಿ ನಿಷೇಧಿಸುವ ಅವಕಾಶವಿದೆಯೆಂದೇ ಅರ್ಥ. ಹೀಗೆ ಕೇವಲ ತಮ್ಮ ಮೂಗಿನ ನೇರಕ್ಕೆ ಪ್ರಜಾಪ್ರಭುತ್ವವನ್ನು ನೋಡಲು ಹೊರಟರೆ ರಾಜಕೀಯ ಸ್ವಾತಂತ್ರ್ಯವೇ ಇಲ್ಲವಾಗುತ್ತದೆ.

ಮುಕ್ತ ಹಾಗೂ ಧೈರ್ಯವಂತರ ಪಕ್ಷಕ್ಕೆ ಎಲ್ಲರಿಗೂ ಸುಸ್ವಾಗತ! ರಾಜಕೀಯ ಕಣವೊಂದು ಕಾನೂಬದ್ಧವಾಗಿ ತೆರೆದುಕೊಂಡರೆ ರಾಜಕೀಯ ಉದ್ದೇಶಗಳೂ ಸಹ ಬದಲಾಗುತ್ತವೆ ಹಾಗೂ ಚುನಾವಣಾ ರಂಗವೂ ಸಹ ವಿಧಿಯಲ್ಲದೆ ನಮ್ಮನ್ನು ಹಿಂಬಾಲಿಸುತ್ತದೆ.

ಮೂಲ ಅಂಕಣದ ಕೊಂಡಿ – http://pragati.nationalinterest.in/2010/08/a-time-to-party/

ನಾವು ಕಾಂಪಿಟಿಟಿವ್ ಅಲ್ಲ!

ವಿಜಯವಾಣಿ ಪತ್ರಿಕೆಯಲ್ಲಿ ಮೂಡಿ ಬಂದಿರುವ ನನ್ನ ಅಂಕಣ ತಾರೀಕು ಜುಲೈ ೧೦ ೨೦೧೩


ಇಲ್ಲಿ ನೀರಿಗೆ ಇಳಿಯಲೇಬೇಕು, ಈಜು ಕಲಿಯಲೇ ಬೇಕು. ಇದು ಸ್ಪರ್ಧಾತ್ಮಕ ಯುಗ, ಸ್ಪರ್ಧೆಗೆ ಬಿದ್ದು ಓಡಲೇ ಬೇಕು, ಸ್ಪರ್ಧೆ ಎನ್ನುವುದು ಜೀವನದ ಪ್ರತಿಯೊಂದು ಹಂತಹಂತಗಳಲ್ಲಿ, ಮಜಲುಗಳಲ್ಲಿ ಒಂದಾಗಿ ಬಿಟ್ಟಿದೆ ಎನ್ನುವ ಮಾತುಗಳನ್ನೂ, ಆತಂಕಗಳನ್ನೂ ನಾವು ಕೇಳುತ್ತಲೇ ಇರುತ್ತೇವೆ. ಇದು ಪ್ರತಿನಿತ್ಯ ನಮ್ಮ ಅರಿವಿಗೆ ಬರುತ್ತಲೂ ಇರುತ್ತದೆ. ಆದರೆ ನಾವು ಅಂದುಕೊಂಡಷ್ಟು ಸ್ಪರ್ಧಾತ್ಮಕವಾಗಿಲ್ಲವೇನೋ ಎಂಬ ಅಭಿಪ್ರಾಯವೂ ಮೂಡುತ್ತದೆ. ಇದಕ್ಕೆ ಪೂರಕವಾಗಿ ವಿಶ್ವ ಆರ್ಥಿಕ ವೇದಿಕೆ(ವರ್ಲ್ಡ್ ಎಕನಾಮಿಕ್ ಫೋರಂ)ಯವರು 2012 ಮತ್ತು 2013ನೇ ಸಾಲಿನ ಪ್ರಪಂಚದ ಅತ್ಯಂತ ಸ್ಪರ್ಧಾತ್ಮಕ ದೇಶಗಳ ಪಟ್ಟಿಯನ್ನು ಬಿಡುಗಡೆ  ಮಾಡಿದೆ, ಸ್ಪರ್ಧಾತ್ಮಕತೆಯನ್ನು ಒರೆಗೆ ಹಚ್ಚಲು ಒಂದು ದೇಶದ ಆರ್ಥಿಕ ಮತ್ತು ಸಾಂಸ್ಥಿಕ ವಾತಾವರಣಗಳು, ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣದ ಗುಣಮಟ್ಟ, ಅವಿಷ್ಕಾರ ಬಲ ಇವೇ ಮೊದಲಾದ ಒಟ್ಟು ಹನ್ನೆರಡು ಅಂಶಗಳನ್ನು ಮುಖ್ಯ ಮಾನದಂಡಗಳಾಗಿ ಬಳಸಲಾಗಿದ್ದು , ಇದರಲ್ಲಿ ಮೊದಲ ಮೂವತ್ತು ದೇಶಗಳ ಪಟ್ಟಿಯನ್ನು ನೋಡಿದಾಗ, ಸ್ವಿಜಲ್ಯಾಂಡ್, ಸಿಂಗಾಪೂರ್, ಫಿನ್‍ಲ್ಯಾಂಡ್, ಸ್ವೀಡನ್ ಹಾಗೂ ನೆದರ್ಲ್ಯಾಂಡ್ ದೇಶಗಳು ಕ್ರಮವಾಗಿ ಮೊದಲ ಐದು ಸ್ಥಾನಗಳನ್ನು ಪಡೆದಿರುತ್ತವೆ.  ಲಕ್ಸೆಂಬರ್ಗ್, ತೈವಾನ್ ನಂತಹ ಸಣ್ಣ ದೇಶಗಳು ಸಹ ಮುಂದಿದ್ದು ಅದರಲ್ಲಿ ಭಾರತಕ್ಕೆ ಸ್ಥಾನ ಸಿಕ್ಕಿಲ್ಲದಿರುವುದು ಎದ್ದು ಕಾಣುತ್ತದೆ. ಇದರ ಬೆಳಕಿನಲ್ಲಿ ಭಾರತದಂತಹ ಪ್ರಬಲ ಒಕ್ಕೂಟ ಮಾದರಿಯ ದೇಶವೊಂದು ಸ್ಪರ್ಧಾತ್ಮಕ ದೇಶಗಳ ಪಟ್ಟಿಯಲ್ಲಿ ಹಿಂದುಳಿದಿರುವುದೇಕೆಂಬುದನ್ನು ಮತ್ತೊಮ್ಮೆ ಯೋಚಿಸುವಂತೆ ಮಾಡಿದೆ. ಒಂದು ದೇಶವನ್ನು ಕಟ್ಟುವಲ್ಲಿ ನಾವು ನಿಜವಾಗಿಯೂ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದ್ದೇವೆಯೇ? ಅಥವಾ ಎಡವುತ್ತಿದ್ದೇವೆಯೇ ಎಂಬುದನ್ನೂ ಸಹ  ಮರು ಅವಲೋಕಿಸಬೇಕಿದೆ.
 
ದೇಶಗಳ ಸ್ಪರ್ಧಾತ್ಮಕತೆಯನ್ನು ಹೇಗೆ ಅಳೆಯುತ್ತಾರೆ ಗೊತ್ತಾ?

ಒಂದು ದೇಶದ ಸ್ಪರ್ಧಾತ್ಮಕತೆಯನ್ನು ಅಳೆಯಲು ಒಟ್ಟು ಹನ್ನೆರಡು ಅಂಶಗಳನ್ನು ಮಾನದಂಡವನ್ನಾಗಿ ಬಳಸಲಾಗುತ್ತದೆ. ಇವನ್ನು ಸ್ಪರ್ಧಾತ್ಮಕತೆಯ ಸ್ಥಂಭಗಳೆಂದೇ ಪರಿಗಣಿಸಲಾಗಿದ್ದು, ಇವು ಒಂದಂಕ್ಕೊಂದು ಪರಸ್ಪರ ಪೂರಕವಾಗಿದ್ದು ಇವುಗಳನ್ನು ಮೂರು ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆ.
ಆರ್ಥಿಕತೆಯ ಪ್ರಾಥಮಿಕ ಅವಶ್ಯಕತೆಗಳು: ಇದರಡಿಯಲ್ಲಿ  ದೇಶದ ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳು, ಸಂಪರ್ಕ ಸಾರಿಗೆ, ವಿದ್ಯುತ್ ದೂರವಾಣಿ ಮೊದಲಾದ ಮೂಲ ಸೌಕರ್ಯಗಳು, ಆರ್ಥಿಕತೆಯ ಸ್ಥಿರತೆ, ಆರೋಗ್ಯ ಮತ್ತು ಪ್ರಾಥಮಿಕ ಶಿಕ್ಷಣವು ಬರುತ್ತದೆ. ಪ್ರಾಥಮಿಕ ಶಿಕ್ಷಣವು ಬಹು ಮುಖ್ಯವಾಗಿದ್ದು ಭವಿಷ್ಯದ ದೃಷ್ಟಿಯಿಂದ ಯಾವುದೇ ಸರ್ಕಾರವು ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗಿಸುತ್ತಿರುವ ಸಂಪನ್ಮೂಲಗಳನ್ನು ಕಡಿತಗೊಳಿಸಬಾರದು ಎಂದೂ ಕಿವಿಮಾತನ್ನು ಹೇಳಲಾಗಿದೆ.
ಅರ್ಥವ್ಯವಸ್ಥೆಯನ್ನು ಬಲಗೊಳಿಸುವ ಅಂಶಗಳು: ಉನ್ನತ ಶಿಕ್ಷಣ ಮತ್ತು ತರಬೇತಿ, ಸರಕು ಮಾರುಕಟ್ಟೆಯ ದಕ್ಷತೆ, ನೌಕರರ ನಿರ್ವಹಣೆ, ಹಣಕಾಸಿನ ಸಮರ್ಪಕ ನಿರ್ವಹಣೆ, ತಾಂತ್ರಿಕತೆಯ ಬದಲಾವಣೆಗಳಿಗೆ ಸದಾ ಸಜ್ಜಾಗಿರುವುದು, ಮಾರುಕಟ್ಟೆಯ ಗಾತ್ರದ ಅಂಶಗಳನ್ನು ಅಳೆಯಲಾಗುತ್ತದೆ.
ಅವಿಷ್ಕಾರ ಶಕ್ತಿ ಮತ್ತು ವ್ಯಾವಹಾರಿಕ ಪ್ರಬುದ್ಧತೆಗಳು: ಮೇಲೆ ಹೇಳಿದ ಎಲ್ಲಾ ಅಂಶಗಳು ಒಂದಕ್ಕೊಂದು ನೇರವಾದ ಸಂಬಂಧವನ್ನು ಹೊಂದಿದ್ದು ನಾಡಿನ ಆರ್ಥಿಕತೆ ಮತ್ತು ಸ್ಪರ್ಧಾತ್ಮಕತೆಗೆ ಅಡಿಪಾಯ ಹಾಕುತ್ತವೆ ಅಲ್ಲದೇ ಜನರಲ್ಲಿ ಅವಿಷ್ಕರಿಸುವ ಮನೋಭಾವವನ್ನು ಹುಟ್ಟು ಹಾಕುತ್ತವೆ, ವ್ಯಾವಹಾರಿಕವಾಗಿ ಪ್ರಬುದ್ಧರಾಗುವಂತೆ ಮಾಡುತ್ತವೆ. ಇಲ್ಲಿನ ಪ್ರತಿಯೊಂದು ಅಂಶವೂ ಸಹ ಶಿಕ್ಷಣದೊಂದಿಗೆ ನೇರವಾಗಿ ಅಥವಾ ಪರೋಕ್ಷವಾಗಿ ತಳುಕು ಹಾಕಿಕೊಂಡಿರುವುದನ್ನು ಗಮನಿಸಬಹುದಾಗಿದೆ. ಉಳಿದವುಗಳೆಲ್ಲಾ ಶಿಕ್ಷಣ ವ್ಯವಸ್ಥೆಯ ಉಪಲಬ್ಧಗಳಾಗಿರುತ್ತವೆ. ಹಾಗಾಗಿಯೇ ಶಿಕ್ಷಣವನ್ನು ಸಮಪರ್ಕವಾಗಿ ನಿಭಾಯಿಸಿದ ದೇಶಗಳು ಮಾತ್ರ ಹೆಚ್ಚು ಸ್ಪರ್ಧಾತ್ಮಕವಾಗಿರುವುದು ಕಂಡು ಬರುತ್ತದೆ.
 
ಸ್ಪರ್ಧಾತ್ಮಕತೆಯಲ್ಲಿ ತಾಯಿನುಡಿ ಶಿಕ್ಷಣದ ಮಹತ್ವ ಏನು:

ಉತ್ತಮವಾದ ಶಿಕ್ಷಣವು ಮಗುವಿನ ಸಹಜ ಪ್ರತಿಭೆಯನ್ನು ಅರಳುವಂತೆ ಮಾಡುತ್ತದೆ, ಈ ಉತ್ತಮವಾದ ಕಲಿಕೆಯು ಮಗುವಿನ ತಾಯಿನುಡಿಯಲ್ಲಿ ಮಾತ್ರ ಸಾಧ್ಯವಾಗುತ್ತದೆ  ಎಂಬುದು ರುಜುವಾತಾಗಿದೆ, ಪರಕೀಯವಾದ ಭಾಷೆಯೊಂದರಲ್ಲಿ ಕಾರ್ಯನಿರ್ವಹಿಸಬೇಕಾದಾಗ, ಹೆಚ್ಚಿನ ಶಕ್ತಿಯು ವಿಷಯವನ್ನು ಅರ್ಥ ಮಾಡಿಕೊಳ್ಳುವುದರಲ್ಲಿಯೇ ಪೋಲಾಗುತ್ತದೆ, ಸ್ವಂತವಾಗಿ ಆಲೋಚಿಸುವ, ಅನ್ವೇಷಿಸುವ ಬಲ ದೊಡ್ಡಮಟ್ಟದಲ್ಲಿ  ಕುಗ್ಗುತ್ತದೆ. ಇದು ಒಟ್ಟಾರೆಯಾಗಿ ಉತ್ಪಾದಕತೆಗೆ ಮಾರಕವಾಗುತ್ತದೆ.ಸ್ಪರ್ಧಾತ್ಮಕತೆಯ ಪಟ್ಟಿಯಲ್ಲಿ ಮೊದಲ ಮೂವತ್ತು ಸ್ಥಾನಗಳನ್ನು ಪಡೆದಿರುವ ದೇಶಗಳಲ್ಲಿ ನಗರವೇ ಒಂದು ದೇಶವಾಗಿರುವ ಸಿಂಗಾಪುರ ಮತ್ತು ಹಾಂಕಾಂಗ್‍ನಂತಹ ಸಿಟಿಸ್ಟೇಟ್‍ಗಳನ್ನು ಹೊರತು ಪಡಿಸಿದರೆ ಜನಲಕ್ಷಣದಲ್ಲಿ ಒಟ್ಟಾರೆಯಾಗಿ ಭಾರತದೊಂದಿಗೆ ಅಥವಾ ಭಾರತದ ರಾಜ್ಯಗಳೊಂದಿಗೆ ಹೋಲಿಸಬಹುದಾದ ಉಳಿದ ಇಪ್ಪತ್ತೆಂಟೂ ದೇಶಗಳು ತನ್ನ ನಾಡಿನ ಜನರಾಡುವ ಭಾಷೆ ಮತ್ತು ತನ್ನ ಜನಲಕ್ಷಣಕ್ಕೆ ತಕ್ಕಂತೆ ತಾಯಿನುಡಿಯಲ್ಲಿಯೇ ಶಿಕ್ಷಣವನ್ನು ನೀಡುತ್ತಿರುವುದನ್ನು ಗಮನಿಸಬೇಕಿದೆ. ಜಾಗತೀಕರಣದ ಇಂದಿನ ಯುಗದಲ್ಲಿ ಸ್ಪರ್ಧೆಯನ್ನು ಎದುರಿಸಿ ಗೆಲ್ಲದಿದ್ದರೆ ಉಳಿಗಾಲವಿಲ್ಲ. ಜಗತ್ತಿನ ಮುಂದುವರೆದ ದೇಶಗಳು ತನ್ನೆಲ್ಲಾ ವ್ಯವಸ್ಥೆಗಳನ್ನು ತನ್ನ ನುಡಿಯಲ್ಲೇ ಕಟ್ಟಿಕೊಂಡಿರುವುದು ಪ್ರಧಾನವಾಗಿ ಕಂಡು ಬರುತ್ತದೆ. ತನ್ನ ನುಡಿಯಾದ ಜರ್ಮನ್ ಭಾಷೆಯಲ್ಲೇ ಶಿಕ್ಷಣವನ್ನು ನೀಡುವ ಜರ್ಮನಿಯಂತಹ ದೇಶವೊಂದು ಪ್ರತಿಷ್ಟೆಯ ಸಂಕೇತಗಳೆಂದೇ ಭಾವಿಸುವ ಮರ್ಸಿಡಿಸ್ ಬೆಂಝ್, ಆಡಿ, ಬಿಎಂಡಬ್ಲೂ ನಂತಹ ಕಾರುಗಳನ್ನು ಉತ್ಪಾದಿಸುತ್ತದೆ. ಬಾಶ್, ಸೀಮನ್ಸ್ ನಂತಹ ಕಂಪನಿಗಳನ್ನು ಕಟ್ಟಿದೆ. ಮಹಾಯುದ್ಧದಲ್ಲಿ ನೆಲಕಚ್ಚಿದ್ದ ಜಪಾನ್ ಜಗತ್ತೇ ನಿಬ್ಬೆರಗಾಗುವಂತೆ ಪುಟಿದೆದ್ದು ಟೊಯೋಟಾ, ಸೋನಿಯಂತಹ ಬ್ರ್ಯಾಂಡ್ಗಳನ್ನು ಜಗತ್ತಿಗೆ ಪರಿಚಯಿಸಿದೆ.ಫಿನ್-ಲ್ಯಾಂಡಿನ ನೋಕಿಯಾ, ಅಮೇರಿಕದ ಆಪಲ್, ಫೇಸ್ ಬುಕ್ ಇವೆಲ್ಲಾ ಕೆಲವು ಉದಾಹರಣೆಗಳಷ್ಟೆ. ಭಾರತವು ಮಿಕ್ಕಿಲ್ಲಾ ವಿಷಯಗಳಲ್ಲಿ ಈ ದೇಶಗಳಿಗೆ ಸರಿಸಾಟಿಯಾಗಿದ್ದರೂ ಸಹ ತನ್ನ ಶಿಕ್ಷಣ ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸಿಲ್ಲ, ಭಾರತವು ಅಪಾರವಾದ ಮಾನವ ಸಂಪಲ್ಮೂನಗಳನ್ನು ಹೊಂದಿದ್ದರೂ ಸಹಾ ಹೇಳಿಕೊಳ್ಳುವಂತಹ ಯಾವುದೇ ಉತ್ಪನ್ನವನ್ನಾಗಲೀ, ಉತ್ಪಾದನಾ ಕಂಪನಿಯನ್ನಾಗಲೀ ನಾವೂ ಸೃಷ್ಟಿಸಿಯೇ ಇಲ್ಲ ಮತ್ತದಕ್ಕೆ ಕಾರಣ ನಮ್ಮ ಕಲಿಕಾ ವ್ಯವಸ್ಥೆಯಲ್ಲಿನ ಕೊರತೆಯೇ ಅನ್ನಬಹುದು. ಕೇವಲ ಸಾಫ್ಟ್ವೇರ್ ಸೇವೆಗಷ್ಟೇ ನಮ್ಮನ್ನು ಸೀಮಿತಗೊಳಿಸಿಕೊಂಡು ಅಲ್ಲೇ ಗಿರಕಿ ಹೊಡೆಯುವಂತಾಗಿದೆಯೇ ಭಾರತವೆಂದರೆ ಕಡಿಮೆ ದರದಲ್ಲಿ ಸೇವೆ ನೀಡುವ ದೇಶವೆಂದಾಗಿದೆಯೇ ಹೊರತು ಜಗತ್ತಿನ ಭವಿತವ್ಯ ಬದಲಿಸುವ ಉತ್ಪನ್ನಗಳನ್ನು ಹುಟ್ಟಿಸುವ ದೇಶವೆಂದಾಗಿಲ್ಲ. ಜಪಾನ್, ಜರ್ಮನಿ,ಫಿನ್ಲ್ಯಾಂಡ್, ಅಮೇರಿಕಾದಂತಹ ದೇಶಗಳಲ್ಲಿ ತಂತ್ರಜ್ನಾನದಲ್ಲಿ ನಡೆದ ಕ್ರಾಂತಿಕಾರಕ ಬೆಳವಣಿಗೆಗಳು ಮತ್ತು ಅವಿಷ್ಕಾರಗಳು ತಾಯಿನುಡಿ ಕಲಿಕೆಯ ಮಹತ್ವವನ್ನು ಕಾಲದಿಂದ ಕಾಲಕ್ಕೆ ಸಾಬೀತುಪಡಿಸುತ್ತಲೇ ಬಂದಿವೆ, ಈಗ ಹೊರಬಂದಿರುವ ಅತ್ಯುತ್ತಮ ಸ್ಪರ್ಧಾತ್ಮಕ ದೇಶಗಳ ಪಟ್ಟಿಯಲ್ಲಿಯೂ ಸಹ ತಾಯಿನುಡಿಯಲ್ಲೇ ಶಿಕ್ಷಣ ನೀಡುವ ದೇಶಗಳೇ ಮುಂಚೂಣಿ ಸ್ಥಾನಗಳನ್ನು ಪಡೆದಿರುವುದು ತಾಯಿನುಡಿಯ ಕಲಿಕೆಯೇ ಮೇಲು ಎಂಬ ವೈಜ್ಞಾನಿಕ ಸತ್ಯವನ್ನು ಮತ್ತೊಮ್ಮೆ  ನಿಸ್ಸಂಶಯವಾಗಿ ನಿರೂಪಿಸಿದೆ.
 
ಆಗಬೇಕಾಗಿರುವುದೇನು:

ಅಲ್ಲದೆ ಭಾರತದಂತಹ ವಿಶಾಲವಾದ ದೇಶವೊಂದರಲ್ಲಿ ಸರಿಯಾದ ಒಕ್ಕೂಟ ವ್ಯವಸ್ಥೆಯನ್ನು ಕಟ್ಟದೆ, ಕೇಂದ್ರೀಕೃತ ಪದ್ಧತಿಯಲ್ಲೇ ಆಳಲು ಹೊರಟಿರುವುದು ಸಹ ನಮ್ಮ ಸ್ಪರ್ಧಾತ್ಮಕತೆಯನ್ನು ಕುಂಠಿತಗೊಳಿಸಿದೆ ಎಂದರೆ ತಪ್ಪಾಗಲಾರದು. ನಮ್ಮಲ್ಲಿಯೂ ಸಹ ಜನಲಕ್ಷಣ ಮತ್ತು ಜನರ ನುಡಿಗೆ ತಕ್ಕಂತೆ ಶಿಕ್ಷಣದ ಭಾಷೆಯನ್ನು ನಿರ್ಧರಿಸುವಂತಹ ಪರಿಣಾಮಕಾರಿಯಾದ ಶಿಕ್ಷಣ ವ್ಯವಸ್ಥೆ ರೂಪುಗೊಳ್ಳಬೇಕಿದೆ. ತುರ್ತು ಪರಿಸ್ಥಿತಿಯ ಸಮಯದಲ್ಲಿ ಶಿಕ್ಷಣವನ್ನು ಜಂಟಿ ಪಟ್ಟಿಗೆ ಸೇರಿಸಿದ್ದು ರಾಜ್ಯಗಳು ತಮಗೆ ಬೇಕಾದಂತೆ ಶಿಕ್ಷಣ ನೀತಿಯನ್ನು ಮಾಡಿಕೊಳ್ಳಲು ತೊಡಕಾಗಿದೆ, ಆಯಾ ರಾಜ್ಯಗಳು ತಮ್ಮ ನುಡಿಯಲ್ಲೇ, ಶಿಕ್ಷಣವನ್ನು ಪಡೆಯಲು ಅನುವಾಗುವಂತೆ ಶಿಕ್ಷಣವನ್ನು ರಾಜ್ಯ ಪಟ್ಟಿಗೆ ಸೇರಿಸುವುದು ಸೂಕ್ತ. ಆಯಾ ರಾಜ್ಯಗಳು ತಾಯಿ ನುಡಿ ಕಲಿಕೆಗೆ ಒತ್ತು ಕೊಟ್ಟು ಕಲಿಕೆಯ ಗುಣಮಟ್ಟವನ್ನು ಸುಧಾರಿಸಿ, ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳುವುದಷ್ಟೇ ಅಲ್ಲದೆ  ಆರ್ಥಿಕವಾಗಿ ಸಬಲಗೊಳ್ಳಬೇಕು, ಇಂತಹ ಬಲಶಾಲಿಯಾದ ರಾಜ್ಯಗಳಿಂದ ಮಾತ್ರ ಬಲಶಾಲಿಯಾದ ರಾಷ್ಟವೊಂದರ ನಿರ್ಮಾಣ ಸಾಧ್ಯ.

ಆಹಾರ ಭದ್ರತೆ, ಆಲೋಚನೆಯ ಕೊರತೆ

ಕನ್ನಡಪ್ರಭ ಪತ್ರಿಕೆಯಲ್ಲಿ ಮೂಡಿ ಬಂದಿರುವ ನನ್ನ ಅಂಕಣ ತಾರೀಕು ಮೇ ೨೯ ೨೦೧೩



ಯುಪಿಎ ಸರ್ಕಾರವು ಬಹಳ ದಿನಗಳಿಂದ ಹೊರತರಲು ಉದ್ದೇಶಿಸಿದ್ದ ಆಹಾರ ಭದ್ರತೆ ಕಾಯಿದೆಗೆ ಕೇಂದ್ರದ ಕ್ಯಾಬಿನೆಟ್‍ನ ಅನುಮೋದನೆ ದೊರೆತಿದ್ದು, ಅದನ್ನು ದೇಶವ್ಯಾಪಿ ಜಾರಿಗೊಳಿಸಲು ಸಜ್ಜಾಗಿದೆ. ಇಂತದ್ದೊಂದು ಕಾಯಿದೆಯ ಅಗತ್ಯತೆ, ಪ್ರಯೋಜನಗಳೇನು, ಕೇಂದ್ರ ಮತ್ತು ರಾಜ್ಯಗಳ ಬೊಕ್ಕಸಕ್ಕೆ ಇದರಿಂದ ಬೀಳುವ ಹೊಡೆತವೇನು, ಈ ಯೋಜನೆಯನ್ನು ಜಾರಿಗೊಳಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾತ್ರವೇನು, ಕೇಂದ್ರ ರಾಜ್ಯಗಳ ಸಂಬಂಧದ ಮೇಲೆ ಇದರ ಪರಿಣಾಮವೇನು, ಈಗಾಗಲೇ ಇರುವ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿರುವ ಹುಳುಕುಗಳೇನು, ಈ ತೊಂದರೆಗಳನ್ನು   ಬಗೆಹರಿಸದೆ ಇಂತಹದೊಂದು ಯೋಜನೆಯನ್ನು ತರುವಲ್ಲಿ ಆಗುವ ತೊಡಕುಗಳು, ಪ್ರಸಕ್ತ ಅರ್ಥ ಮತ್ತು ರಾಜಕೀಯ ವ್ಯವಸ್ಥೆಯ ಮೇಲೆ ಇದರಿಂದಾಗುವ ಪರಿಣಾಮಗಳನ್ನು ಗಮನಿಸಿ ಸೂಕ್ತವಾದ ಏರ್ಪಾಟುಗಳನ್ನು ಮಾಡಿಕೊಳ್ಳುವ ತುರ್ತು ನಮ್ಮ ಮುಂದಿದೆ.


 ಏನಿದು ಆಹಾರ ಭದ್ರತೆ ಕಾಯ್ದೆ? 

ಸರಿ, ಏನಿದು ಆಹಾರ ಭದ್ರತೆ ಯೋಜನೆಯೆಂದರೆ ಇದೊಂದು ಆಹಾರದ ಖಾತ್ರಿಯನ್ನೊದಗಿಸುವ ದೊಡ್ಡ ಪ್ರಮಾಣದ ಮರುಹಂಚಿಕೆ (ರಿಡಿಸ್ಟ್ರಿಬ್ಯೂಟಿವ್ ಸ್ಕಿಮ್) ಅನ್ನಬಹುದು. ಇದು ಗ್ರಾಮೀಣ ಭಾಗದ ಶೇಕಡ 75 ಮತ್ತು ನಗರ ಪ್ರದೇಶದ ಶೇಕಡ 50 ರಷ್ಟು ಜನರಿಗೆ ಆಹಾರದ ಖಾತ್ರಿಯನ್ನೊದಗಿಸುವ ಯೋಜನೆಯಾಗಿರುತ್ತದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರಗಳು ಹೊಣೆ ಹೊತ್ತು ಅನುಷ್ಠಾನಗೊಳಿಸಬೇಕಾದ, ಈಗಾಗಲೇ ಚರ್ಚೆಗೆ ಗ್ರಾಸವಾಗಿರುವ ಈ ಕಾಯಿದೆಯಲ್ಲಿರುವ ಪ್ರಮುಖ ಅಂಶಗಳೆಂದರೆ:

  •  ಈ ಕಾಯಿದೆಯಡಿಯಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಅರ್ಹ ನಾಗರೀಕನಿಗೆ ತಿಂಗಳಿಗೆ ಐದು ಕೇಜಿಯಷ್ಟು ಆಹಾರಧಾನ್ಯಗಳನ್ನು ಗರಿಷ್ಠ ರಿಯಾಯಿತಿ ದರದಲ್ಲಿ ಒದಗಿಸುವುದು.
  • ಆರು ತಿಂಗಳಿಂದ, ಆರು ವರ್ಷ ವಯಸ್ಸಿನ ಮಕ್ಕಳಿಗೆ ಅಂಗನವಾಡಿ ಕೇಂದ್ರದ ಮೂಲಕ ಪೌಷ್ಟಿಕ ಆಹಾರವನ್ನು ನೀಡುವುದು. 
  •  ಆರರಿಂದ ಹದಿನಾಲ್ಕು ವರ್ಷ ವಯಸ್ಸಿನ ಮಕ್ಕಳಿಗೆ ಉಚಿತವಾಗಿ ಮದ್ಯಾಹ್ನದ ಊಟವನ್ನು ಒದಗಿಸುವುದು.
  • ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೊತೆಯಾಗಿ ಸಾರ್ವಜನಿಕ ವಿತರಣ ವ್ಯವಸ್ಥೆಯನ್ನು ಸುಧಾರಿಸುವುದು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾತ್ರ

ಕೇಂದ್ರ ತಾನು ಒಟ್ಟು ಮಾಡಿಟ್ಟುಕೊಂಡಿರುವ ದಾಸ್ತಾನಿನಿಂದ ಅಗತ್ಯವಾದ ಆಹಾರ ಧಾನ್ಯವನ್ನು ರಾಜ್ಯಗಳಿಗೆ ಒದಗಿಸಲಿದೆ, ಧಾನ್ಯಗಳನ್ನು ಒದಗಿಸಲು ಸಾದ್ಯವಾಗದಿದ್ದ ಸಂದರ್ಭಗಳಲ್ಲಿ ಅದಕ್ಕೆ ತಗಲುವ ವೆಚ್ಚವನ್ನು ಮಾತ್ರ ಭರಿಸುತ್ತದೆ. ಇದರ ನಂತರ ಈ ಯೋಜನೆಯನ್ನು ಕೇಂದ್ರವು ನೀಡುವ ಮಾರ್ಗಸೂಚಿಗೆ ಅನುಸಾರವಾಗಿ ಕಾರ್ಯರೂಪಕ್ಕೆ ತರುವುದು ರಾಜ್ಯಸರ್ಕಾರದ ಸಂಪೂರ್ಣ ಜವಾಬ್ದಾರಿಯಾಗಿರುತ್ತದೆ. ಈ ಯೋಜನೆಯ ಫಲಾನುಭವಿಗಳನ್ನು ಗುರುತಿಸುವುದು, ಸಾಗಾಟ ಮಾಡಿಕೊಳ್ಳುವುದು, ಶೇಖರಣೆ ಮಾಡಿಟ್ಟುಕೊಂಡು ಹಂಚುವುದು, ಇದರ ಮೇಲುಸ್ತುವಾರಿಗಾಗಿ ಉನ್ನತ ಮಟ್ಟದ ಕಮಿಶನ್ ಒಂದನ್ನು ರಚಿಸುವ ಜವಾಬ್ದಾರಿಯೂ ಸಹ ರಾಜ್ಯ ಸರ್ಕಾರಗಳದ್ದಾಗಿದ್ದು. ಈ ಕಮಿಶನ್‍ನ ನಿರ್ವಹಣೆ ಆಡಳಿತ ವೆಚ್ಚಗಳು ಮತ್ತಿತರ ವೆಚ್ಚಗಳನ್ನು ರಾಜ್ಯ ಸರ್ಕಾರಗಳೇ ನೋಡಿಕೊಳ್ಳಬೇಕಿದ್ದು, ಹೀಗೆ ನೇಮಕವಾಗಿರುವ ಕಮಿಶನ್‍ಗಳು ವರ್ಷಕ್ಕೊಮ್ಮೆ ವರದಿಯನ್ನು ತಯಾರಿಸಿ ರಾಜ್ಯಸರ್ಕಾರದ ಮುಂದೆ ಮಂಡಿಸಬೇಕಿರುತ್ತದೆ.ಇಲ್ಲಿ ರಾಜ್ಯಸರ್ಕಾರಗಳು ಕೇಂದ್ರದ ಆಣತಿಯಂತೆ ಕೆಲಸ ಮಾಡಬೇಕಿರುತ್ತದೆ, ಸೂಚನೆಗಳನ್ನು ಪಾಲಿಸಬೇಕಿರುತ್ತದೆ ಮತ್ತು ಆಹಾರಧಾನ್ಯಗಳ ವೆಚ್ಚವನ್ನು ಹೊರತು ಪಡಿಸಿ ಇತರ ಎಲ್ಲಾ ಆಡಳಿತಾತ್ಮಕ ಖರ್ಚುಗಳನ್ನು ರಾಜ್ಯ ಸರ್ಕಾರವು ತನ್ನ ಬೊಕ್ಕಸದಿಂದಲೇ ಭರಿಸಬೇಕಿರುತ್ತದೆ. ಈಗಾಗಲೇ ಕರ್ನಾಟಕ ರಾಜ್ಯ ತನ್ನ ವ್ಯಾಪ್ತಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರಿಗೆ ರಿಯಾಯಿತಿ ದರದಲ್ಲಿ ಪಡಿತರ ಪೂರೈಸುತ್ತಿದೆ, ಅಲ್ಲದೇ ಅದಕ್ಕೆ ತಗಲುವ ಆಡಳಿತಾತ್ಮಕ ವೆಚ್ಚವೆಲ್ಲವನ್ನು ಭರಿಸುತ್ತಿದೆ. ಸಮರ್ಥವಾಗಿ ಈಗಾಗಲೇ ಪಡಿತರ ಹಂಚಿಕೆಯನ್ನು ನಿಭಾಯಿಸುತ್ತಿರುವ ರಾಜ್ಯಗಳ ಮೇಲೆ ಕೇಂದ್ರ ಈಗ ಆಹಾರ ಭದ್ರತೆ ಅನ್ನುವ ಜನಪ್ರಿಯ ನೆಲೆಯ, ಮುಂದಿನ ಚುನಾವಣೆಯ ಮೇಲೆ ಕಣ್ಣಿರಿಸಿ ರೂಪಿಸಿದ ಕಾರ್ಯಕ್ರಮವನ್ನು ಹೇರಲು ಹೊರಟಿರುವ ಹಾಗಿದೆ. ಈ ಹೆಜ್ಜೆ ಎಂದಿನಂತೆ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಮೇಲೆ ಕೇಂದ್ರದ ಸವಾರಿಯ ಮುಂದುವರೆದ ಭಾಗವೇ ಅನ್ನಬಹುದು.

ಎಲ್ಲಿದೆ ಆರ್ಥಿಕ ಮತ್ತು ರಾಜಕೀಯ ಪ್ರೌಢಿಮೆ?

ನಿಜಕ್ಕೂ ಈಗ ಆಗಬೇಕಿರುವುದು ಈಗಾಗಲೇ ಇರುವ ವ್ಯವಸ್ಥೆಯಲ್ಲಿನ ಹುಳುಕುಗಳನ್ನು ಸರಿಪಡಿಸಿಕೊಳ್ಳುವುದಾಗಿದೆಯೇ ಹೊರತು ಹೊಸತೊಂದು ಬಿಳಿಯಾನೆ ಸಾಕುವ ಯೋಚನೆಯಲ್ಲ. ಇವತ್ತು ಪಡಿತರ ವ್ಯವಸ್ಥೆಯಲ್ಲಿ ಇರುವ ಮುಖ್ಯವಾದ ತೊಂದರೆಗಳು ಆಹಾರ ಧಾನ್ಯಗಳು ಗೋದಾಮಿನಲ್ಲಿ ಪೋಲಾಗದಂತೆ ತಡೆಯುವ ಯೋಜನೆಗಳು, ಸಾಗಾಟದಲ್ಲಿನ ಸೋರಿಕೆ, ಹಂಚಿಕೆಯಲ್ಲಿನ ಭ್ರಷ್ಟಾಚಾರ, ಫಲಾನುಭವಿಗಳನ್ನು ಗುರುತಿಸುವಲ್ಲಿ ಆಗುತ್ತಿರುವ ಎಡವಟ್ಟು, ಅರ್ಹರಲ್ಲದವರು ಫಲಾನುಭವಿಗಳ ಪಟ್ಟಿ ಸೇರುತ್ತಿರುವುದು, ರೇಶನ್ ಅಂಗಡಿಯ ತೂಕದಲ್ಲಿನ ಮೋಸ ಹೀಗೆ ದಂಡಿಯಾಗಿ ಬಗೆಹರಿಸಬೇಕಾದ ಸಮಸ್ಯೆಗಳಿವೆ. ಅಲ್ಲದೇ ಈ ಯೋಜನೆ ಬೊಕ್ಕಸದ ಮೇಲೆ ತರುವ ಹೊರೆಯ ಬಗ್ಗೆ ಯು.ಪಿ.ಎ ಸರ್ಕಾರಕ್ಕೆ ಕಾಳಜಿಯಿದ್ದಂತಿಲ್ಲ. ಆರ್ಥಿಕ ತಜ್ಞರ ಪ್ರಕಾರ ಬರುವ ಮೂರು ವರ್ಷದಲ್ಲಿ ಈ ಯೋಜನೆಯ ಅನುಷ್ಟಾನಕ್ಕೆ ಬೇಕಿರುವ ಮೊತ್ತ 6,00,000 ಕೋಟಿಗಳಾಗಿದ್ದರೆ ಅದರಲ್ಲಿ ಸರಿ ಸುಮಾರು 40-50% ಅಂದರೆ ಸುಮಾರು 3,00,000 ಕೋಟಿಯಷ್ಟು ಹಣ ಭ್ರಷ್ಟಾಚಾರಕ್ಕೆ ಬಲಿಯಾಗಿ ಸೋರಿಕೆಯಾಗಲಿದೆ. ಪಬ್ಲಿಕ್ ಪಾಲಿಸಿಯೊಂದನ್ನು ರೂಪಿಸುವಾಗ ಆದ್ಯ ಗಮನ ಕೊಡಬೇಕಿರುವುದೇ ಆ ಯೋಜನೆಯ ಆರ್ಥಿಕ ಆಯಾಮದ ಬಗ್ಗೆ. ನಮ್ಮ ದೇಶದ ಇವತ್ತಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಮರುಹಂಚಿಕೆಯಂತಹ ವ್ಯವಸ್ಥೆಯ ಅಗತ್ಯವಿದೆಯೆಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ ಆದರೆ ಯಾವುದೇ ದೇಶದ ಅರ್ಥ ವ್ಯವಸ್ಥೆ ಮರುಹಂಚಿಕೆ ಯೋಜನೆಗಳತ್ತ ದೊಡ್ದ ಪ್ರಮಾಣದ ಸಂಪನ್ಮೂಲ ವ್ಯಯಿಸುವ ಮುನ್ನ ಅದನ್ನು ನೀಗಿಸಿಕೊಳ್ಳುವಂತೆ ತೆರಿಗೆ ಸಂಗ್ರಹವಾಗಲಿದೆಯೇ ಅನ್ನುವತ್ತ ಗಮನ ಹರಿಸುತ್ತೆ. ದೇಶದ ಆರ್ಥಿಕ ಬೆಳವಣಿಗೆ ಕೇವಲ 5% ಸುತ್ತ ಮುತ್ತ ಇರುವಾಗ ಇಂತಹದೊಂದು ಹಿಮಾಲಯಪರ್ವತ ಗಾತ್ರದ ಯೋಜನೆಗೆ ಸಂಪನ್ಮೂಲ ಜೋಡಿಸುವುದು ಹೇಗೆ ಅನ್ನುವುದರತ್ತ ಗಮನವೇ ಹರಿಸದೇ ಯು.ಪಿ.ಎ ಈ ಯೋಜನೆ ಜಾರಿಗೆ ಮುಂದಾಗಿರುವುದನ್ನು ಕಂಡಾಗ  ಜನಪ್ರಿಯ ಯೋಜನೆಗಳ ಬಲದಿಂದ ಚುನಾವಣೆ ಗೆಲ್ಲುವುದೊಂದೇ ಗುರಿಯಾಗಿದ್ದಂತೆ ಕಾಣುತ್ತಿದೆ. ಮುಂದೆ ಯು.ಪಿ.ಎ ಬದಲು ಇನ್ನಾವುದೇ ಸರ್ಕಾರ ಬಂದರೂ ಇಂತಹ ಜನಪ್ರಿಯ ಯೋಜನೆಗಳನ್ನು ಮರುಪರಿಶೀಲಿಸಲು ಮುಂದಾದರೆ ಜನವಿರೋಧಿ ಅನ್ನುವ ಪಟ್ಟ ಕಟ್ಟಿಕೊಳ್ಳುವ ಭಯದಲ್ಲಿ ಇದನ್ನು ಮುಂದುವರೆಸಬೇಕಾಗುತ್ತದೆ. ಇಂತಹ ದೂರಾಲೋಚನೆಯಿಲ್ಲದ, ತಕ್ಷಣದ ಲಾಭದ ಯೋಜನೆಗಳು ಭಾರತ ಒಕ್ಕೂಟವನ್ನು ಬೇಕಾಬಿಟ್ಟಿ ಖರ್ಚು ಮಾಡಿ ಈಗ ಬಾಯಿ ಬಡಿದುಕೊಳ್ಳುತ್ತಿರುವ ಯುರೋಪಿನ ಕೆಲ ದೇಶಗಳ ಸ್ಥಿತಿಗೆ ದೂಡಿದರೂ ಅಚ್ಚರಿಯಿಲ್ಲ.